ಸುಮ್ಮನಹಳ್ಳಿ ಕಡೆಯಿಂದ ಗೊರಗುಂಟೆಪಾಳ್ಯ ಕಡೆಗೆ ಬರುವಾಗ ಮಾರ್ಗ ಮಧ್ಯೆ ನಡೆದ ಘಟನೆ

ಬೆಂಗಳೂರು(ನ.01):  ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ರಾಜಾಜಿನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೊರಗುಂಟೆಪಾಳ್ಯ ನಿವಾಸಿ ಸವಾರ ಜಗದೀಶ್‌(21) ಮತ್ತು ಹಿಂಬದಿ ಸವಾರ ದೇವರಾಜ್‌ (22) ಮೃತರು. ಭಾನುವಾರ ರಾತ್ರಿ 11.40ರ ಸುಮಾರಿಗೆ ಸುಮ್ಮನಹಳ್ಳಿ ಕಡೆಯಿಂದ ಗೊರಗುಂಟೆಪಾಳ್ಯ ಕಡೆಗೆ ಬರುವಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.

ಮೃತ ಜಗದೀಶ್‌ ಮತ್ತು ದೇವರಾಜ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ರಾತ್ರಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಗೊರಗುಂಟೆಪಾಳ್ಯದ ಕಡೆಗೆ ಬರುವಾಗ ನಂದಿನಿ ಲೇಔಟ್‌ನ ಮೇಲ್ಸೇತುವೆ ಬಳಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ಸೂಚನಾ ಫಲಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರರಿಬ್ಬರೂ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಹೆಲ್ಮೆಟ್‌ ಧರಿಸದ ಪರಿಣಾಮ ಇಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿತ್ತು. ಕೂಡಲೇ ಸ್ಥಳೀಯರು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಜಗದೀಶ್‌ ಚಿಕಿತ್ಸೆ ಫಲಿಸದೇ ರಾತ್ರಿಯೇ ಮೃತಪಟ್ಟರೆ, ದೇವರಾಜ್‌ ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಫ್ಲೈ ಓವರ್‌ನಿಂದ ಕೆಳಗೆ ಬಿದ್ದು ಬೈಕ್‌ ಸವಾರರಿಬ್ಬರ ದುರ್ಮರಣ

ಅಪಘಾತಕ್ಕೆ ಅತಿಯಾದ ವೇಗವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಲೆಗೆ ಹೆಲ್ಮೆಟ್‌ ಧರಿಸಿದ್ದಲ್ಲಿ ಇಬ್ಬರು ಬದುಕುಳಿಯುವ ಸಾಧ್ಯತೆಯಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.