Asianet Suvarna News Asianet Suvarna News

ಬೆಂಗಳೂರು: ಫ್ಲೈ ಓವರ್‌ನಿಂದ ಕೆಳಗೆ ಬಿದ್ದು ಬೈಕ್‌ ಸವಾರರಿಬ್ಬರ ದುರ್ಮರಣ

ಸೈಡ್‌ ಸ್ಟ್ಯಾಂಡ್‌ ತಡೆಗೋಡೆಗೆ ತಾಗಿ ನಿಯಂತ್ರಣ ತಪ್ಪಿದ ಬೈಕ್‌, ಒಂದೇ ಬೈಕಲ್ಲಿ ತ್ರಿಬ್ಬಲ್‌ ರೈಡಿಂಗ್‌, ಹೆಲ್ಮೆಟ್‌ ಧರಿಸಿದ್ದ ಮತ್ತೊಬ್ಬ ಬಚಾವ್‌

Two Dies After Falling Down From the Flyover in Bengaluru grg
Author
First Published Oct 30, 2022, 8:00 AM IST

ಬೆಂಗಳೂರು(ಅ.30): ಬಳ್ಳಾರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ದ್ವಿಚಕ್ರ ವಾಹನ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಫ್ಲೈ ಓವರ್‌ನಿಂದ ಹಾರಿ ಬಿದ್ದು ಮೃತಪಟ್ಟರೆ, ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿಗಳಾದ ಅಮಿತ್‌ ಸಿಂಗ್‌(29) ಮತ್ತು ಅಮೋಲ್‌ ಪ್ರಮೋದ್‌ ಆಮ್ಟೆ(29) ಮೃತ ಹಿಂಬದಿ ಸವಾರರು. ಸವಾರ ಸೌರವ್‌ ದೇ(29) ಎಡಗೈ ಹಾಗೂ ತಲೆಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಶನಿವಾರ ಬೆಳಗ್ಗೆ 10.45ರ ಸುಮಾರಿಗೆ ಬಳ್ಳಾರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೈತರ ಸಂತೆ ಬಳಿ ಫ್ಲೈ ಓವರ್‌ ಮೇಲೆ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ಅಮೋಲ್‌ ಪ್ರಮೋದ್‌ ಆಮ್ಟೆ, ದೆಹಲಿಯ ಅಮಿತ್‌ ಸಿಂಗ್‌ ಹಾಗೂ ರಾಜಸ್ಥಾನದ ಸೌರವ್‌ ದೇ ನಗರದ ಎಚ್‌ಎಸ್‌ಆರ್‌ ಲೇಔಟ್‌ನ ನಿಪ್‌್ಟಕಾಲೇಜಿನಲ್ಲಿ ಎಂಟೆಕ್‌ ವ್ಯಾಸಂಗ ಮಾಡುತ್ತಿದ್ದರು. ನಂದಿ ಬೆಟ್ಟಕ್ಕೆ ಜಾಲಿ ರೈಡ್‌ ಹೋಗುತ್ತಿರುವುದಾಗಿ ಸ್ನೇಹಿತರ ಬಳಿ ತಿಳಿಸಿ ಶನಿವಾರ ಮುಂಜಾನೆ ಮೂವರು ಒಂದೇ ದ್ವಿಚಕ್ರ ವಾಹನದಲ್ಲಿ ನಂದಿ ಬೆಟ್ಟಕ್ಕೆ ಹೋಗಿದ್ದರು. ನಂದಿ ಬೆಟ್ಟಕ್ಕೆ ತೆರಳಿ ಸುತ್ತಾಡಿಕೊಂಡು ನಗರಕ್ಕೆ ವಾಪಾಸಾಗುತ್ತಿದ್ದರು.

Bengaluru: ಡಿವೈಡರ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬೈಕ್ ಸವಾರ ಭೀಕರ ಅಂತ್ಯ

ಫ್ಲೈ ಓವರ್‌ನಿಂದ ಎಗರಿ ಬಿದ್ದ ಸವಾರರು:

ಬಳ್ಳಾರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೈತರ ಸಂತೆ ಬಳಿ ಫ್ಲೈ ಓವರ್‌ನಲ್ಲಿ ಬರುವಾಗ ದ್ವಿಚಕ್ರ ವಾಹನದ ಸ್ಟ್ಯಾಂಡ್‌ ರಸ್ತೆ ಪಕ್ಕದ ಸಿಮೆಂಟ್‌ ಬ್ಲಾಕ್‌ಗೆ ತಗುಲಿದೆ. ಇದರಿಂದ ಸವಾರ ಸೌರವ್‌ ದೇನ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಭಸವಾಗಿ ಫ್ಲೈ ಓವರ್‌ನ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿ ಕುಳಿತಿದ್ದ ಅಮಿತ್‌ ಸಿಂಗ್‌ ಮತ್ತು ಪ್ರಮೋದ್‌ ಆಮ್ಟೆಫ್ಲೈ ಓವರ್‌ನಿಂದ ಹಾರಿ ಕೆಳ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಇಬ್ಬರ ತಲೆಗೆ ಗಂಭೀರ ಗಾಯವಾಗಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸೌರವ್‌ ದೇ ಹೆಲ್ಮೆಟ್‌ ಧರಿಸಿದ್ದ ಪರಿಣಾಮ ಕೈ ಹಾಗೂ ತಲೆಗೆ ಸಣ್ಣ ಪ್ರಮಾಣದ ಗಾಯವಾಗಿದೆ.

ಈ ವೇಳೆ ಸ್ಥಳೀಯರು ಕೂಡಲೇ ಗಾಯಾಳುಗಳ ನೆರವಿಗೆ ಧಾವಿಸಿ, ಮೂವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಅಮೋಲ್‌ ಪ್ರಮೋದ್‌ ಆಮ್ಟೆಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಅಮಿತ್‌ ಸಿಂಗ್‌ ಚಿಕಿತ್ಸೆ ಫಲಿಸದೆ ಮಧ್ಯಾಹ್ನ 12.50ರ ಸುಮಾರಿಗೆ ಕೊನೆಯುಸಿರೆಳೆದಿದ್ದಾನೆ. ಸವಾರ ಸೌರವ್‌ ದೇಗೆ ಚಿಕಿತ್ಸೆ ಮುಂದುವರೆದಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ದ್ವಿಚಕ್ರ ವಾಹನದ ಅತಿಯಾದ ವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಸಂಬಂಧ ಸವಾರ ಸೌರವ್‌ ದೇ ವಿರುದ್ಧ ಯಲಹಂಕ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios