ಬೆಂಗಳೂರಿನ ಬೆಳ್ಳಿ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯೋಗೇಶ ಸಿಂಗ್ ಎಂಬಾತ, ಹುಬ್ಬಳ್ಳಿಯಲ್ಲಿ ₹59 ಲಕ್ಷ ಮೌಲ್ಯದ 24 ಕೆಜಿ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. 

ಹುಬ್ಬಳ್ಳಿ (ಮಾ.4): ಬೆಂಗಳೂರಿನ ಬೆಳ್ಳಿ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ಹುಬ್ಬಳ್ಳಿಯಲ್ಲಿ ₹ 59 ಲಕ್ಷ ಮೌಲ್ಯದ ಸುಮಾರು 24 ಕೆಜಿ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜಸ್ಥಾನದ ಯೋಗೇಶ ಸಿಂಗ್ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಬೆಂಗಳೂರಿನ ಮಾಗಡಿ ಕ್ರಾಸ್‌ನ ವ್ಯಾಪಾರಿ ಅಶಿಸಕುಮಾರ ಜೈನ್ ದೂರು ನೀಡಿದ್ದಾರೆ. ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯ ಬಟ್ಟೆ ಅಂಗಡಿ ಎದುರು ಕಾರಿನಲ್ಲಿ ಎರಡು ಬ್ಯಾಗ್‌ನಲ್ಲಿ ಇಟ್ಟಿದ್ದ ಕಾಲುಗೆಜ್ಜೆ, ಕತ್ತಿನ ಚೈನ್, ಬ್ರಾಸ್ಲೇಟ್, ಕೈ ಕಡಗ, ಕಾಲ ಕಡಗಗಳನ್ನು ಬ್ಯಾಗ್ ಸಮೇತ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಏನಿದು ಪ್ರಕರಣ?:

ವ್ಯಾಪಾರಿ ಆಶಿಸಕುಮಾರ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮೀತ ಪುರೋಹಿತ ಮತ್ತು ಯೋಗೇಶ ಸಿಂಗ್ ಅವರಿಗೆ ಬೆಳ್ಳಿ ಆಭರಣ ಮಾರಾಟ ಮಾಡಿಕೊಂಡು ಬರುವಂತೆ, ತಮ್ಮದೇ ಕಾರು ನೀಡಿ 29 ಕೆಜಿ ಬೆಳ್ಳಿ ಆಭರಣ ನೀಡಿದ್ದರು. ಚಿತ್ರದುರ್ಗ, ದಾವಣಗೆರೆಯಲ್ಲಿ 3.167ಕೆಜಿ ಆಭರಣ ಮಾರಾಟ ಮಾಡಿ, ಉಳಿದ 24.760 ಕೆಜಿ ಆಭರಣವನ್ನು ಮಾರಾಟ ಮಾಡಲು ಫೆ. 28ರಂದು ಹುಬ್ಬಳ್ಳಿಗೆ ಬಂದಿದ್ದರು. ಲ್ಯಾಮಿಂಗ್ಟನ್ ರಸ್ತೆಯ ಬಟ್ಟೆ ಅಂಗಡಿ ಎದುರು ಕಾರು ನಿಲ್ಲಿಸಿ, ಅಲ್ಲಿರುವ ಜ್ಯುವೆಲರ್ಸ್ ಮಳಿಗೆ ಹೋಗಿದ್ದರು. ನಂತರ ಆಭರಣ ತರುವಂತೆ ಅಮಿತ ಅವರು, ಯೋಗೇಶ ಸಿಂಗ್‌ಗೆ ಹೇಳಿ ಕಾರಿನ ಚಾವಿ ಕೊಟ್ಟಿದ್ದರು. ಅವನು ಕಾರನ್ನು ಲಾಕ್ ಮಾಡಿ ಚಾವಿ ಸಮೇತ ಬೆಳ್ಳಿಯ ಆಭರಣಗಳಿರುವ ಎರಡು ಬ್ಯಾಗಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.