ಕೊರೋನಾ ಸೋಂಕು ಹರಡುವಿಕೆಯ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿರುವ ನಗರದ ಹೊರವಲಯದ ಪಡೀಲ್‌ನ ಫಸ್ವ್ ನ್ಯೂರೋ ಆಸ್ಪತ್ರೆಯಲ್ಲಿ ಸೋಮವಾರ ಮತ್ತೆ ಎರಡು ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಮಂಗಳೂರು(ಏ.28): ಕೊರೋನಾ ಸೋಂಕು ಹರಡುವಿಕೆಯ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿರುವ ನಗರದ ಹೊರವಲಯದ ಪಡೀಲ್‌ನ ಫಸ್ವ್ ನ್ಯೂರೋ ಆಸ್ಪತ್ರೆಯಲ್ಲಿ ಸೋಮವಾರ ಮತ್ತೆ ಎರಡು ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಸೋಮವಾರ 80 ವರ್ಷದ ತಾಯಿ ಮತ್ತು 45 ವರ್ಷದ ಮಗನಿಗೆ ಕೊರೋನಾ ಹರಡಿರುವುದು ದೃಢಪಟ್ಟಿದೆ. ಇವರಿಬ್ಬರೂ ಶಕ್ತಿನಗರ ನಿವಾಸಿಗಳಾಗಿದ್ದು, ಸೋಂಕು ದೃಢಪಟ್ಟತಕ್ಷಣದಿಂದ ಶಕ್ತಿನಗರವನ್ನು ಸೀಲ್‌ಡೌನ್ ಮಾಡಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದುವರೆಗೆ ಫಸ್ವ್‌ನ್ಯೂರೊ ಆಸ್ಪತ್ರೆಯಲ್ಲೇ ಇದ್ದ ಇವರನ್ನು ಸೋಂಕು ಪತ್ತೆಯಾಗುತ್ತಿದ್ದಂತೆ ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಸೋಂಕಿತ ವೃದ್ಧೆಯ ಪಕ್ಕದ ಬೆಡ್‌ನಲ್ಲಿದ್ದರು: ಫಸ್ವ್ ನ್ಯೂರೊ ಆಸ್ಪತ್ರೆಯಲ್ಲಿ ಬಂಟ್ವಾಳ ಕೆಳಪೇಟೆಯ ವೃದ್ಧೆ ಪಾಶ್ರ್ವವಾಯು ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಅವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡು ಏ.21ರಂದು ಮೃತಪಟ್ಟಿದ್ದರು. ಸೋಂಕಿಗೆ ತುತ್ತಾದ 80 ವರ್ಷದ ವೃದ್ಧೆ ಆಸ್ಪತ್ರೆಯಲ್ಲಿ ಅವರ ಪಕ್ಕದ ಬೆಡ್‌ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. 45 ವರ್ಷದ ಮಗ ತಾಯಿಯನ್ನು ನೋಡಿಕೊಳ್ಳುತ್ತಿದ್ದರು.
ರಸ್ತೆಯಲ್ಲೇ ಕೊರೋನಾ ವಾರಿಯರ್‌ಗೆ ಅವಮಾನಿಸಿ ಜೀವ ಬೆದರಿಕೆ
ಬಂಟ್ವಾಳದ ಮಹಿಳೆ ಮೃತಪಟ್ಟಬಳಿಕ ಅಂದೇ ಇಡೀ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಿ ಅಲ್ಲಿದ್ದ ಎಲ್ಲ 198 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಮಾತ್ರವಲ್ಲದೆ, ಅಲ್ಲಿನವರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸದ್ಯ ಎಲ್ಲರೂ ಕ್ವಾರೆಂಟೈನ್‌ನಲ್ಲಿದ್ದು, ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಇದುವರೆಗೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಾತ್ರ ಸೋಂಕು ಕಂಡುಬಂದಿದ್ದು ಇದೀಗ ಈ ಪ್ರಕರಣದ ಮೂಲಕ ಮಂಗಳೂರು ನಗರದಲ್ಲೂ ಕಾಣಿಸಿಕೊಂಡಂತಾಗಿದೆ.
ಕುಲಶೇಖರ ಶಕ್ತಿನಗರ ವ್ಯಾಪ್ತಿ ಸೀಲ್‌ಡೌನ್
ಶಕ್ತಿನಗರದ ಮಹಿಳೆ ಹಾಗೂ ಅವರ ಮಗನಿಗೆ ಕೊರೊನಾ ಪಾಸಿಟಿವ್ ದೃಢಗೊಂಡಿರುವ ಹಿನ್ನೆಲೆಯಲ್ಲಿ ಕುಲಶೇಖರ- ಶಕ್ತಿನಗರದ ಅವರ ಮನೆಯ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗಿದೆ. ಕುಲಶೇಖರ ಪ್ರದೇಶದ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಗ್ರಾಮಸ್ಥರ ಮೇಲೆ ನಿಗಾ ವಹಿಸಲಾಗುತ್ತಿದೆ. ಸೋಂಕಿತರು ವಾಸ ಮಾಡುತ್ತಿದ್ದ ಮನೆಯಿಂದ 200 ಮೀಟರ್ ಸುತ್ತ ಸೀಲ್‌ಡೌನ್ ಆಗಿದ್ದರೆ, ಆ ಮನೆಯನ್ನು ಕೇಂದ್ರವಾಗಿಟ್ಟು 5 ಕಿಲೋ ಮೀಟರ್ ವ್ಯಾಪ್ತಿಯನ್ನು ಬಫರ್ ಝೋನ್ ಆಗಿ ಗುರುತಿಸಲಾಗಿದೆ.
ಉಡುಪಿ ಈಗ ಗ್ರೀನ್ ಝೋನ್, ಆದರೂ ಸಡಿಲವಾಗದ ಲಾಕ್‌ಡೌನ್
ಪೂರ್ವಕ್ಕೆ ವಾಮಂಜೂರು ಜಂಕ್ಷನ್, ಪಶ್ಚಿಮಕ್ಕೆ ಉರ್ವ ಮಾರ್ಕೆಟ್, ಉತ್ತರಕ್ಕೆ ಪದವಿನಂಗಡಿ, ದಕ್ಷಿಣಕ್ಕೆ ಬಂಟ್ಸ್ ಹಾಸ್ಟಲ್ ಜಂಕ್ಷನ್ ಬಫರ್ ಝೋನ್ ಆಗಿದ್ದು, ಹೊರಗಿನವರ ಓಡಾಟಕ್ಕೆ ಈ ವ್ಯಾಪ್ತಿಯಲ್ಲಿ ನಿರ್ಬಂಧ ಇರಲಿದೆ. ಬಫರ್ ಝೋನ್ ಅಡಿ 4800 ಮನೆಗಳು, 1300 ಕಚೇರಿ ಮತ್ತು ಅಂಗಡಿಗಳು, 73 ಸಾವಿರ ಜನರು ವಾಸವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಫಸ್ವ್ ನ್ಯೂರೋ ಸಂಪರ್ಕ ಐವರಿಗೆ ಸೋಂಕು!
ಫಸ್ವ್ ನ್ಯೂರೋ ಆಸ್ಪತ್ರೆ ಸಂಪರ್ಕ ಇರುವ ಒಟ್ಟು ಐವರಿಗೆ ಇದುವರೆಗೆ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಆಸ್ಪತ್ರೆಯಿಂದ ಸೋಂಕಿತರ ಸಂಖ್ಯೆ ಇನ್ನಷ್ಟುಏರಿಕೆಯಾಗುವ ಆತಂಕವಿದೆ. ಅಲ್ಲಿರುವ ಒಟ್ಟು 198 ಜನರಲ್ಲಿ ಎಲ್ಲರ ಸ್ಯಾಂಪಲ್ ಪರೀಕ್ಷೆ ಆಗಿಲ್ಲ. ಇನ್ನೆರಡು ದಿನಗಳಲ್ಲಿ ಪೂರ್ತಿ ಪರೀಕ್ಷೆ ನಡೆದ ಬಳಿಕ ಖಚಿತ ಮಾಹಿತಿ ಸಿಗಲಿದೆ.
ಸದ್ಯ ಏಳು ಆಕ್ಟಿವ್ ಪ್ರಕರಣಗಳು
ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು 21 ಸೋಂಕಿತರಲ್ಲಿ ಪ್ರಸ್ತುತ 7 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಉಪ್ಪಿನಂಗಡಿಯ ಪತಿ- ಪತ್ನಿ, ಬಂಟ್ವಾಳ ಕೆಳಪೇಟೆಯ ತಾಯಿ- ಮಗಳು, ಇದೀಗ ಶಕ್ತಿನಗರದ ತಾಯಿ- ಮಗ ಸೇರ್ಪಡೆಯಾಗಿದ್ದಾರೆ.
