ಹಳ್ಳದಲ್ಲಿ ಬಿದ್ದು ಮೃತಪಟ್ಟ ಇಬ್ಬರು ಬಾಲಕರು| ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅಸೋಗಾ ಗ್ರಾಮದ ಬಳಿ ನಡೆದ ಘಟನೆ| 3 ದಿನಗಳ ಹಿಂದೆ ಹಾಲತ್ರಿ ಹಳ್ಳಕ್ಕೆ ಪ್ರವಾಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಮೃತ ಬಾಲಕರು| ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಬಾಲಕರ ಶವ ಹಸ್ತಾಂತರ| 

ಬೆಳಗಾವಿ(ನ.16): ಪ್ರವಾಸಕ್ಕೆಂದು ಹೋಗಿ ನಾಪತ್ತೆಯಾಗಿದ್ದ ಇಬ್ಬರ ಬಾಲಕರು ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಅಸೋಗಾ ಗ್ರಾಮದ ಬಳಿಯ ಹಾಲತ್ರಿ ಹಳ್ಳದಲ್ಲಿ ಇಂದು(ಸೋಮವಾರ) ನಡೆದಿದೆ. ಮೃತ ಬಾಲಕರನ್ನ ಖಾನಾಪುರ ಪಟ್ಟಣದ ಉಮರ್ ಖಲೀಫಾ(16) ಅರ್ಫಾತ್ ಅರಕಾಟಿ (16) ಎಂದು ಗುರುತಿಸಲಾಗಿದೆ. 

ಮೃತ ಬಾಲಕರು 3 ದಿನಗಳ ಹಿಂದೆ ಹಾಲತ್ರಿ ಹಳ್ಳಕ್ಕೆ ಪ್ರವಾಸಕ್ಕೆಂದು ತೆರಳಿ ನಾಪತ್ತೆಯಾಗಿದ್ದರು. ಬಾಲಕರು ನಾಪತ್ತೆಯಾಗಿದ್ದರ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ಮೊಬೈಲ್ ನೆಟ್ವರ್ಕ್ ಆಧರಿಸಿ ಬಾಲಕರ ಸುಳಿವು ಪತ್ತೆಹಚ್ಚಿದ್ದಾರೆ. 

ದೀಪಾವಳಿ ದಿನವೇ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರ್ಮರಣ

ಹಾಲತ್ರಿ ಹಳ್ಳದ ಬಳಿ ಯುವಕರ ಬಟ್ಟೆ, ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಖಾನಾಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ನಿನ್ನೆ(ಭಾನುವಾರ) ಶೋಧಕಾರ್ಯ ಆರಂಭಿಸಿದ್ದರು. ಇಂದು ಬೆಳಗ್ಗೆ ಹಾಲತ್ರಿ ಹಳ್ಳದಲ್ಲಿ ಬಾಲಕರು ‌ಶವಗಳು ಪತ್ತೆಯಾಗಿವೆ. ಬಾಲಕರ ಮೃತದೇಹ ನೋಡುತ್ತಿದ್ದಂತೆ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಬಾಲಕರ ಶವ ಹಸ್ತಾಂತರಿಸಲಾಗಿದೆ.