ಕಲಬುರಗಿ(ಮಾ.10): ಜಿಲ್ಲೆಗೆ ಮಂಜೂರಾಗಿ ಈಚೆಗೆ ಕೈಬಿಟ್ಟು ಹೋಗಿರುವ ಟೆಕ್ಸ್‌ಟೈಲ್‌ ಪಾರ್ಕ್ ವಿಚಾರ ಮುಂದಿಟ್ಟುಕೊಂಡು ಸಂಸದ ಡಾ.ಉಮೇಶ ಜಾಧವ್‌ ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ಮಧ್ಯೆ ಟ್ವಿಟರ್‌ ವಾರ್‌ ಶುರುವಾಗಿದೆ.

2011ರಲ್ಲೇ ಮಂಜೂರಾಗಿದ್ದ ಟೆಕ್ಸ್‌ಟೈಲ್‌ ಪಾರ್ಕ್ ಕೈಬಿಟ್ಟು ಹೋಯ್ತು. ಇದು ಮೈಸೂರಿಗೆ ದಕ್ಕಿದೆ ಎಂದು ಪ್ರಿಯಾಂಕ್‌ ಖರ್ಗೆ ಟ್ವೀಟ್‌ ಮಾಡುವ ಮೂಲಕ ಬಿಜೆಪಿ ಹಾಗೂ ಸಂಸದ ಡಾ.ಉಮೇಶ ಜಾಧವರನ್ನು ಕೆಣಕಿದ್ದರು. ಪ್ರಿಯಾಂಕ್‌ ಟ್ವೀಟ್‌ಗೆ ಉತ್ತರಿಸಿರುವ ಡಾ.ಉಮೇಶ ಜಾಧವ್‌, ಮೈಸೂರಿಗೆ ದಕ್ಕಿರುವ ಟೆಕ್ಸ್‌ಟೈಲ್‌ ಪಾರ್ಕ್ ಕಲಬುರಗಿಯಿಂದ ಸ್ಥಳಾಂತರಗೊಂಡದ್ದಲ್ಲ. ಅಲ್ಲಿನವರ ಮನವಿಗೆ ಬೇರೆ ಯೋಜನೆಯಲ್ಲಿ ಮಂಜೂರು ಮಾಡಲಾಗಿದೆಯೇ ಹೊರತು ಕಲಬುರಗಿ ಪ್ರಕರಣಕ್ಕೂ ಮೈಸೂರಿಗೂ ತಳಕು ಹಾಕೋದು ಬೇಡ. ಜನರಿಗೆ ತಪ್ಪು ದಾರಿಗೆ ಎಳೆಯೋದು ನಿಲ್ಲಿಸಿರಿ ಎಂದು ಯೋಜನೆ ಬಗ್ಗೆ ಕೆಲವು ಅಂಕಿ-ಸಂಖ್ಯೆ ಸಮೇತ ಮಾಹಿತಿ ನೀಡಿದ್ದಾರೆ.

ಪ್ರಿಯಾಂಕ್‌ ಹೇಳಿದ್ದು:

ಮೈಸೂರಿಗೆ ಟೆಕ್ಸ್‌ಟೈಲ್‌ ಪಾರ್ಕ್ ಸ್ಥಾಪಿಸಲು ಕೇಂದ್ರಕ್ಕೆ ಸಿಎಂ ಶಿಫಾರಸು ಎಂಬ ಪತ್ರಿಕೆಯ ಕ್ಲಿಪ್ಪಿಂಗ್‌ ಜೊತೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್‌, ಸಂಸದ ಜಾಧವ್‌ಗೆ ಅಭಿನಂದನೆ ತಿಳಿಸುವ ಮೂಲಕ ಲೇವಡಿ ಮಾಡಿದ್ದರು. ಇದು ಕಲಬುರಗಿಗೆ ನಷ್ಟ, ಮೈಸೂರಿಗೆ ಲಾಭ. ಬಿಜೆಪಿ ನಾಯಕರ ಕಿರೀಟಕ್ಕೆ ಮತ್ತೊಂದು ಗರಿ, ಅಭಿನಂದನೆಗಳು ಎಂದು ಟ್ವಿಟ್‌ ಮೂಲಕ ಖಾರವಾಗಿ ಆಕ್ರೋಶ ಹೊರಹಾಕಿದ್ದಾರೆ. ಡಬಲ್‌ ಇಂಜಿನ್‌ ಸರ್ಕಾರದಲ್ಲಿ ಅನುದಾನಕ್ಕಾಗಿ ಕಲಬುರಗಿಯ ಜನತೆ ವಿಧಾನಸೌಧದ ಮುಂದೆ ಭಿಕ್ಷೆ ಬೇಡಲು ಪ್ರಾರಂಭಿಸಬೇಕಾಗುತ್ತದೆ ಎಂದು ವ್ಯಂಗ್ಯವಾಗಿ ಕುಟುಕಿದ್ದರು.

ದೇಶದ ಮೊದಲ ಕೋವಿಡ್ ಸಾವಿಗೆ ವರ್ಷ- ಸಾವಿನ ಅಪಖ್ಯಾತಿ ಪಡೆದ ಜಿಲ್ಲೆ ಕಲಬುರಗಿ

ಡಾ.ಜಾಧವ್‌ ಮಾರುತ್ತರ:

ಪ್ರಿಯಾಂಕ್‌ ಟ್ವೀಟ್‌ಗೆ ಮಾರುತ್ತರ ನೀಡಿರುವ ಜಾಧವ್‌, ಮೊದಲು ಮೈಸೂರಿಗೆ ಮಂಜೂರಾಗಿರುವ ಟೆಕ್ಸ್‌ಟೈಲ್‌ ಪಾರ್ಕ್ ಯಾವುದು? ಅದರ ಇತಿಮಿತಿಗಳನ್ನು ಅರಿಯಿರಿ. ಆ ಮೇಲೆ ಇಂತಹ ಸಂದೇಶ ಹಾಕಿರಿ ಎಂದು ಛೇಡಿಸಿದ್ದಾರೆ. ಎಸ್ಸೈಟಿಪಿ ಮತ್ತು ಮಿತ್ರಾ ಸ್ಕೀಂಗಳಲ್ಲಿ ವ್ಯತ್ಯಾಸವಿದೆ ಎಂಬುದನ್ನು ಮೊದಲು ತಾವು ಅರಿತು ಸಂದೇಶ ಹಾಕುವಂತೆಯೂ ಸಲಹೆ ನೀಡಿದ್ದಾರೆ.

2011ರಲ್ಲಿ ಕಲಬುರಗಿಗೆ ಟೆಕ್ಸ್‌ಟೈಲ್‌ ಪಾರ್ಕ್-ಎಸ್‌ಐಟಿಪಿ ಮಂಜೂರಾಗಿತ್ತು. ಆದರೆ ಇಕ್ವಿಟಿ ಶೇರ್‌ ಸಂಗ್ರಹದಲ್ಲಿ ಯೋಜನೆ ಎಡವಿತು. ಸಣ್ಣ ಉತ್ಪಾದಕರಿಂದ ಷೇರಿನ ಹಣ ಸಂಗ್ರಹಿಸಲಾಗಲೇ ಇಲ್ಲ. ಹೀಗಾಗಿ 2019ರಲ್ಲಿ ಕೇಂದ್ರದ ಜವಳಿ ಸಚಿವಾಲಯ ಕಲಬುರಗಿಯ ಟೆಕ್ಸ್‌ಟೈಲ್‌ ಪಾರ್ಕ್ ಕೈಬಿಟ್ಟಿದ್ದಾಗಿ ಹೇಳಿತು. ಆದರೆ ಈ ಪ್ರಕರಣದಲ್ಲಿ ಜವಳಿ ಸಚಿವಾಲಯ ಸೇರಿದಂತೆ ಅನೇಕ ಹಂತಗಳಲ್ಲಿ ಈ ಯೋಜನೆ ಕಲಬುರಗಿಗೆ ಉಳಿಸಿಕೊಳ್ಳುವಲ್ಲಿ ನಿರಂತರ ಪ್ರಯತ್ನ ಮುಂದುವರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಹರ್ಷಾನಂದ ಗುತ್ತೇದಾರ್‌-ರದ್ದೇವಾಡಗಿ ಟೀಕೆ

ಶಾಸಕ ಪ್ರಿಯಾಂಕ್‌ ಖರ್ಗೆ ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಟ್ವೀಟ್‌ ಮತ್ತು ಜವಳಿ ಪಾರ್ಕ್ ವಿಷಯದಲ್ಲಿ ಜನರ ದಾರಿ ತಪ್ಪಿಸುತ್ತಿರುವ ವಿಷಯಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮತ್ತು ಜಿಪಂ ಸದಸ್ಯ ಹರ್ಷಾನಂದ ಎಸ್‌ ಗುತ್ತೇದಾರ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜವಳಿ ಪಾರ್ಕ್ ಮೈಸೂರಿಗೆ ಹೊಸದಾಗಿ ಮಂಜೂರಿಯಾಗಿದೆ. ಆದರೆ ಅದು ಕಲಬುರಗಿಗೆ ಮಂಜೂರಿಯಾಗಿರುವುದಲ್ಲ. ಕಲಬುರಗಿಗೆ ಮಂಜೂರಿಯಾಗಿ ಅದು ಮೈಸೂರಿಗೆ ಎತ್ತಂಗಡಿಯಾಗಿದ್ದರೆ, ಅದರ ಬಗ್ಗೆ ತಾವು ಪ್ರಶ್ನೆ ಎತ್ತಬಹುದಿತ್ತು. ಆದರೆ ತಾವು ಕೇವಲ ವಿರೋಧ ಮಾಡುವುದಕ್ಕಾಗಿ ಮಾತ್ರ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ನೀಡಿರುವ ವಕ್ತಾರನ ಸ್ಥಾನದ ಘನತೆ ತುಂಬುವುದಕ್ಕಾಗಿ ಮತ್ತು ಪ್ರತಿದಿನ ಮಾಧ್ಯಮದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಉಮೇದಿಯೊಂದಿಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಸುಳ್ಳುಗಳನ್ನು ಜನರಿಗೆ ಹೇಳುತ್ತಿದ್ದಾರೆ. ಸದ್ಯ ಕಾಂಗ್ರೆಸ್‌ಗೆ ದೇಶದಲ್ಲಿ ನೆಲೆಯಿಲ್ಲ. ಕೇವಲ ಅಪಪ್ರಚಾರ ಮಾಡಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ಛೇಡಿಸಿದ್ದಾರೆ.