ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ 11 ತಿಂಗಳ ಸಂಬಳ ನೀಡದ ಕಾರಣ ಲ್ಯಾಬ್ ಟೆಕ್ನಿಷಿಯನ್ ನಿಲೋಫರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂಬಳ ಕೇಳಿದಾಗ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದ್ದು, ನ್ಯಾಯಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.

ಬೀದರ್ (ಫೆ.27): ಬೀದರ್‌ನ ಪ್ರತಿಷ್ಠಿತ ಬ್ರಿಮ್ಸ್ (BRIMS) ಆಸ್ಪತ್ರೆಯಲ್ಲಿ ಕಳೆದ 7 ವರ್ಷಗಳಿಂದ ಲ್ಯಾಬ್ ಟೆಕ್ನಿಷಿಯನ್ ಆಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ನಿಲೋಫರ್ ಎಂಬ ಯುವತಿ, ಇಂದು ಸಂಜೆ ಮಾತ್ರೆ ನುಂಗಿ ಆತ್ಮ೧ಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಕಳೆದ 11 ತಿಂಗಳಿನಿಂದ ಕೆಲಸ ಮಾಡಿದ ಸಂಬಳ ನೀಡದೆ ಆಡಳಿತ ಮಂಡಳಿ ಸತಾಯಿಸುತ್ತಿದ್ದರಿಂದ ಮನನೊಂದ ಯುವತಿ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ. ಸದ್ಯ ಯುವತಿಯನ್ನು ಅದೇ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

Add Asianetnews Kannada as a Preferred SourcegooglePreferred

ಸಂಬಳ ಕೇಳಿದ್ದಕ್ಕೆ ಧಮ್ಕಿ, ಮಾನಸಿಕ ಕಿರುಕುಳ

ಯುವತಿಯ ಆತ್ಮ೧ಹತ್ಯೆ ಯತ್ನದ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆಯ ತಾಯಿ ರಿಜ್ವಾನಾ ಬ್ರಿಮ್ಸ್ ಆಡಳಿತ ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. 'ನನ್ನ ಮಗಳು ಹಗಲಿರುಳು ಕೆಲಸ ಮಾಡುತ್ತಾಳೆ, ಆದರೆ ಸಂಬಳ ಕೇಳಲು ಹೋದರೆ ಆಕೆಗೆ ಅಲ್ಲಿನ ಅಧಿಕಾರಿಗಳು ಧಮ್ಕಿ ಹಾಕಿ, ಮಾನಸಿಕ ಕಿರುಕುಳ ನೀಡಿದ್ದಾರೆ. 11 ತಿಂಗಳಿಂದ ಸಂಬಳ ನೀಡದೆ ಸತಾಯಿಸುತ್ತಿರುವುದೇ ನನ್ನ ಮಗಳ ಈ ಸ್ಥಿತಿಗೆ ಕಾರಣ' ಎಂದು ಕಣ್ಣೀರು ಹಾಕುತ್ತಾ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಯುವತಿ

ನಿಲೋಫರ್ ಅವರ ಕುಟುಂಬ ಈಗಾಗಲೇ ಸಂಕಷ್ಟದಲ್ಲಿದೆ. ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ಆಕೆಯ ತಂದೆ ನಿಧನರಾಗಿದ್ದು, ಇಡೀ ಕುಟುಂಬದ ಹೊಣೆಗಾರಿಕೆ ನಿಲೋಫರ್ ಮೇಲೆ ಬಿದ್ದಿತ್ತು. ತಂದೆಯ ಸಾವಿನ ದುಃಖದ ನಡುವೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯುವತಿಗೆ ಆಸ್ಪತ್ರೆಯ ಕಿರುಕುಳ ಗಾಯದ ಮೇಲೆ ಬರೆ ಎಳೆದಂತಾಗಿದೆ. 'ಸಂಬಳವಿಲ್ಲದೆ ಸಂಸಾರ ನಡೆಸುವುದು ತುಂಬಾ ಕಷ್ಟವಾಗಿದೆ' ಎಂದು ತಾಯಿ ರಿಜ್ವಾನಾ ಅಳಲು ತೋಡಿಕೊಂಡಿದ್ದಾರೆ.

ನ್ಯಾಯ ಕೊಡಿಸಿ ಸಚಿವರೇ ಎಂದು ಕಣ್ಣೀರಿಟ್ಟ ತಾಯಿ

ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಾಯಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಮೊರೆ ಹೋಗಿದ್ದಾರೆ. 'ನಮಗೆ ನ್ಯಾಯ ಕೊಡಿಸಿ ಈಶ್ವರ ಖಂಡ್ರೆ ಸಾಹೇಬ್ರೆ, ಬಡವರ ಬದುಕನ್ನು ಈ ರೀತಿ ಬೀದಿಗೆ ತರಬೇಡಿ' ಎಂದು ಕೈಮುಗಿದು ಬೇಡಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆಡಳಿತ ಮಂಡಳಿಯ ವಿರುದ್ಧ ತಕ್ಷಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.