ದೇಶದ ಮೊದಲ ಕೋವಿಡ್ ಸಾವಿಗೆ ವರ್ಷ- ಸಾವಿನ ಅಪಖ್ಯಾತಿ ಪಡೆದ ಜಿಲ್ಲೆ ಕಲಬುರಗಿ
ದೇಶದ ಮೊದಲ ಕೊರೋನಾ ವೈರಸ್ ಸಾವಿಗೆ ಒಂದು ವರ್ಷ ಕಂಪ್ಲೀಟ್ ಆಗಿದೆ. ಕಲಬುರಗಿಯಲ್ಲಿ 76 ವರ್ಷದ ವೃದ್ಧ ಮಹಾಮಾರಿಗೆ ಬಲಿಯಾಗಿದ್ದು ಸಾಕಷ್ಟು ಆತಂಕವನ್ನೇ ಉಂಟು ಮಾಡಿತ್ತು.
ಕಲಬುರಗಿ (ಮಾ.09): 2020ನೇ ಇಸ್ವಿಯ ಮಾರ್ಚ್ 10ನೇ ದಿನಾಂಕ ನೆನೆದರೆ ಸಾಕು, ಕಲಬುರಗಿಯಷ್ಟೇ ಅಲ್ಲ, ಇಡೀ ದೇಶವೇ ಬೆಚ್ಚಿ ಬೀಳುತ್ತದೆ! ಸದ್ಯ ಕೊರೋನಾಗೆ ವ್ಯಾಕ್ಸಿನ್ ಕಂಡು ಹಿಡಿದಿದ್ದು, ಆತಂಕ ಕೊಂಚ ಕಡಿಮೆಯಾದರೂ ಪ್ರಕರಣಗಳು ಮಾತ್ರ ಇನ್ನೂ ಪತ್ತೆಯಾಗುತ್ತಲೇ ಇದೆ.
ದೇಶದಲ್ಲೇ ಮೊದಲ ಕೋವಿಡ್- 19 ಸಾವಿಗೆ ಕಲಬುರಗಿ ನಗರ ಸಾಕ್ಷಿಯಾಗಿದ್ದು ಇದೇ ದಿನ. ದೇಶದಲ್ಲಿ ಬಹುದೊಡ್ಡ ಮಟ್ಟದ ಆತಂಕ ಹುಟ್ಟುಹಾಕಿದ್ದ ಈ ಸಾವು ಸಂಭವಿಸಿ ವರ್ಷ ಪೂರೈಸುತ್ತಿದೆ.
ಭಾರತವಷ್ಟೇ ಅಲ್ಲ, ದಕ್ಷಿಣ ಏಷಿಯಾ ಭಾಗದಲ್ಲೇ ಕಲಬುರಗಿಯಲ್ಲಾದ ಕೋವಿಡ್ ರೋಗಿಯ ಸಾವಿನ ಸಂಗತಿ ಆತಂಕ ಹುಟ್ಟುಹಾಕಿತ್ತಲ್ಲದೆ, ವಿಶ್ವಸಂಸ್ಥೆ ಸಹ ಕಲಬುರಗಿಯತ್ತ ಕಡೆ ಗಮನಹರಿಸಿತ್ತು.
ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಕೊರೋನಾ ಮತ್ತಷ್ಟು ಹೆಚ್ಚಳ!
130 ಕೋಟಿ ಜನವಸತಿಯ ಭಾರತದಲ್ಲಿ ಕೋವಿಡ್- 19 ಸೋಂಕಿನ ಸಾವು ಸಂಭವಿಸಿದರೆ ಅದನ್ನು ನಿಯಂತ್ರಣಕ್ಕೆ ತರುವುದು ಬಹುದೊಡ್ಡ ಸವಾಲು ಎಂಬ ಕಾರಣಕ್ಕಾಗಿ ವಿಶ್ವಸಂಸ್ಥೆಯವರು ಸತತ ಕಲಬುರಗಿ ಮೇಲೆ ಕಣ್ಣಿಟ್ಟಿತ್ತು. ಜಿಲ್ಲಾಡಳಿತವೂ ಈ ಬಗ್ಗೆ ತೀವ್ರ ಗಮನಹರಿಸಿತ್ತು. ಕಲಬುರಗಿಯ ಪ್ರಕರಣ ಕೊರೋನಾ ಕಾಲಖಂಡದಲ್ಲಿ ಅದೆಷ್ಟು ಮಹತ್ವ ಪಡೆದಿತ್ತು ಎಂಬುದನ್ನು ಊಹಿಸಬಹುದು.
ಭಾರತದಲ್ಲಿ ಕೊರೋನಾಗೆ ಮೊದಲ ಬಲಿ? ಕರ್ನಾಟಕದ ವ್ಯಕ್ತಿ ಸಾವು! .
ಸೌದಿ ಅರೇಬಿಯಾದಿಂದ ಆಗಮಿಸಿದ್ದ ಕಲಬುರಗಿಯ 76 ವರ್ಷದ ವೃದ್ಧ ಕೊರೋನಾ ವೈರಸ್‌ನಿಂದ ಸಾವಿಗೀಡಾಗಿದ್ದರು. ಕೊರೋನಾದಿಂದ ಆತ ಮೃತಪಟ್ಟಿದ್ದೆಂದು ಆರೋಗ್ಯ ಇಲಾಖೆ ದೃಢಪಡಿಸಿತ್ತು. ಇದು ದೇಶದಲ್ಲೇ ಕೊರೋನಾದಿಂದ ಸಂಭವಿಸಿದ ಮೊದಲ ಸಾವಾಗಿತ್ತು.