ಕುಲ​ಪತಿ ಆಪ್ತ ಸಹಾ​ಯಕ ಸೇರಿ ಇಬ್ಬರ ವಿರುದ್ಧ ಪ್ರಕ​ರಣ ದಾಖಲು| ಜ. 30ರಂದು ಅಂಕೋಲಾ ಬಳಿ ನಡೆ​ದಿತ್ತು ಅಪ​ಘಾ​ತ| ಯುವ​ತಿ​ಯರ ಪಾಲ​ಕ​ರಿಂದ ಉಪ ನಗರ ಪೊಲೀಸ್‌ ಠಾಣೆಗೆ ದೂರು| ಆಪ್ತ ಸಹಾ​ಯಕ ಮುಲ್ಲಾ ಲೈಂಗಿಕ ಕಿರು​ಕುಳ ನೀಡು​ತ್ತಿದ್ದ ಎಂದು ದೂರಿ​ನಲ್ಲಿ ಆರೋ​ಪ| 

ಧಾರ​ವಾಡ(ಏ.23): ಕಳೆದ ಜನವರಿಯಲ್ಲಿ ನಡೆದ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಇಬ್ಬರು ಮಹಿಳಾ ಗುತ್ತಿಗೆ ನೌಕ​ರರ ಅಪ​ಘಾತ ಪ್ರಕ​ರಣ ಇದೀಗ ಹೊಸ ತಿರುವು ಪಡೆ​ದು​ಕೊಂಡಿದ್ದು ಮೃತ​ಪಟ್ಟ ಯುವ​ತಿ​ಯರ ಪಾಲ​ಕರು ಉಪನಗರ ಪೊಲೀಸ್‌ ಠಾಣೆ​ಯಲ್ಲಿ ದೂರು ದಾಖಲಿಸಿದ್ದಾರೆ.

ಕೃಷಿ ವಿವಿ ಕುಲಪತಿ ಆಪ್ತ ಸಹಾಯಕ ಎಂ.ಎ. ಮುಲ್ಲಾ ಹಾಗೂ ಶೀಘ್ರ ಲಿಪಿಕಾರ ಉಳವಪ್ಪ ಮೇಸ್ತಿ್ರ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದ್ದು, ತಮಗೆ ನ್ಯಾಯ ಕೊಡಿಸಿ ಎಂದು ಪೊಲೀ​ಸ​ರಲ್ಲಿ ಮೃತ ಯುವ​ತಿ​ಯರ ಪಾಲ​ಕರು ಮನವಿ ಮಾಡಿ​ದ್ದಾರೆ.

ಕಳೆದ ಜ. 30ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ನಡೆ​ದ ಅಪಘಾತದಲ್ಲಿ ಮೇಘನಾ ಸಿಂಗನಾಥ ಮತ್ತು ರೇಖಾ ಕೊಕಟನೂರ ಮೃತಪಟ್ಟಿದ್ದರು. ಇವರು ಕ್ರಿಯೇಟಿವ್‌ ಏಜೆನ್ಸಿ ಮೂಲಕ ವಿವಿಯಲ್ಲಿ 2020ರ ಫೆ. 1ರಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.

ಹುಬ್ಬಳ್ಳಿ: ರುಂಡ ಮುಂಡ ಪ್ರಕರಣ ಮಾಡೆಲ್‌ ಶನಾಯಾ ಬಂಧನ

ಈ ಇಬ್ಬರು ಯುವತಿಯರಿಗೆ ಮುಲ್ಲಾ ಲೈಂಗಿಕ ಕಿರುಕುಳ ನೀಡುತ್ತಿದ್ದನು. ವಿವಿ ಕೆಲಸ ನಿಮಿತ್ತ ಬಾಗಲಕೋಟೆಗೆ ಹೋಗಬೇಕು ಎಂದು ಯುವತಿಯರನ್ನು ಪುಸಲಾಯಿಸಿ ಮೇಸ್ತ್ರಿ ಜತೆಗೆ ಗೋವಾಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಯುವತಿಯರ ಮೇಲೆ ಈತ ಅತ್ಯಾಚಾರವೆಸಗಿದ್ದ. ಘಟನೆಯನ್ನು ಯಾರಿಗೂ ತಿಳಿಸಿದಂತೆ ಬೆದರಿಸಿದ್ದ. ಅಲ್ಲಿಂದ ಧಾರವಾಡಕ್ಕೆ ವಾಪಸ್ಸಾಗುವಾಗ ಸಂಭವಿಸಿದ ಅಪಘಾತದಲ್ಲಿ ಯುವತಿಯರು ಮೃತಪಟ್ಟಿದ್ದಾರೆ ಎಂದು ಮೇಘನಾ ತಾಯಿ ಪ್ರತಿಭಾ ಸಿಂಘನಾಥ ದೂರಿನಲ್ಲಿ ಆರೋಪಿಸಿದ್ದಾರೆ.

ಕೆಲಸಕ್ಕೆ ಸೇರಿದ ದಿನದಿಂದ ಮಗಳಿಗೆ ಮುಲ್ಲಾ ತೀವ್ರವಾಗಿ ಕಿರುಕುಳ ನೀಡುತ್ತಿದ್ದ. ಕೆಲಸದ ಸಮಯ ಮುಗಿದಿದ್ದರೂ, ಅನಗತ್ಯವಾಗಿ ಕಚೇರಿಯಲ್ಲಿ ಕೂರಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ. ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕುತ್ತಿದ್ದ. ಈ ಕುರಿತು ಪುತ್ರಿ ತನ್ನ ಸ್ನೇಹಿತೆಯರೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಮಧ್ಯೆ ಘಟನೆ ಕುರಿತು ಕಾಂಗ್ರೆಸ್‌ ಮುಖಂಡರು ಹಾಗೂ ಜಯ ಕರ್ನಾ​ಟಕ ಸೇರಿ​ದಂತೆ ಹಲವು ಸಂಘ​ಟ​ನೆ​ಗಳು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿ ಕೃಷಿ ಸಚಿವ ಹಾಗೂ ಕಾಂಗ್ರೆಸ್‌ನಿಂದ ರಾಜ್ಯಪಾಲರಿಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿ​ಸ​ಬ​ಹುದು.