Asianet Suvarna News Asianet Suvarna News

ಹುಬ್ಬಳ್ಳಿ: ರುಂಡ ಮುಂಡ ಪ್ರಕರಣ,ಮಾಡೆಲ್‌ ಶನಾಯಾ ಬಂಧನ

ದೇವರಗುಡಿಹಾಳದಲ್ಲಿ ರುಂಡ, ಕೇಶ್ವಾಪುರದಲ್ಲಿ ಕೈಕಾಲಿಲ್ಲದ ಸಿಕ್ಕ ಮುಂಡ ಪ್ರಕರಣ| ನಿಯಾಝ್‌ ತಂದೆ ಸೈಫುದ್ದಿನ್‌ ಕೂಡ ಕಂಬಿ ಹಿಂದೆ| ಪ್ರಕರಣದ ತನಿಖೆಗಾಗಿ ಐದು ತಂಡಗಳ ರಚನೆ| ಹುಬ್ಬಳ್ಳಿಯ ಕಥೆ ಆಧಾರಿತ ಛೋಟಾ ಬಾಂಬೆ ಚಿತ್ರದ ನಾಯಕ ನಟಿ ಶನಾಯಾ| 

Actress Shanaya Arrested for Murder Case in Hubballi grg
Author
Bengaluru, First Published Apr 23, 2021, 11:54 AM IST

ಹುಬ್ಬಳ್ಳಿ(ಏ.23): ರುಂಡ ಮುಂಡ ಪ್ರಕರಣ ಮಾಡೆಲ್‌ ಶನಾಯಾ ಕಾಟವೆ ಬಂಧನವಾಗುವ ಮೂಲಕ ಟ್ವಿಸ್ಟ್‌ ಪಡೆದಿದೆ. ಈಕೆ ಸೇರಿ ಭೀಕರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಮೂವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು, ಇಲ್ಲಿವರೆಗೆ ಒಟ್ಟಾರೆ 8 ಆರೋಪಿಗಳು ಕಂಬಿ ಹಿಂದೆ ಸರಿದಂತಾಗಿದೆ.

ಗುರುವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ರಾಕೇಶ ಕಾಟವೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಲ್ಲಿಕ್‌ (18), ಫಿರೋಝ್‌ (18), ಪ್ರಮುಖ ಆರೋಪಿ ಬಂಧಿತ ನಿಯಾಜ್‌ ತಂದೆ ಸೈಫುದ್ದಿನ್‌ (59) ಹಾಗೂ ಶನಾಯಾ ಕಾಟವೆ ಬಂಧಿಸಲಾಗಿದೆ ಎಂದು ತಿಳಿಸಿದರು.

ಈ ಮೊದಲೆ ಬಂಧಿತನಾಗಿರುವ ನಿಯಾಜ್‌ ಹಾಗೂ ಶನಾಯಾ ಪ್ರೇಮ ಪ್ರಕರಣವೇ ಕೊಲೆಗೆ ಕಾರಣ ಎಂಬುದು ಇಲ್ಲಿವರೆಗಿನ ತನಿಖೆಯಿಂದ ತಿಳಿದುಬಂದಿದೆ. ಮಲ್ಲಿಕ್‌ ಹಾಗೂ ಫಿರೋಜ್‌ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಸೈಫುದ್ದಿನ್‌ ಮೇಲೆ ಕೊಲೆಗೆ ಸಲಹೆ ನೀಡಿರುವ ಆರೋಪವಿದೆ. ಇನ್ನು, ಶನಾಯಾಗೆ ಕೊಲೆ ಪ್ರಕರಣ ತಿಳಿದಿತ್ತು. ಮೃತದೇಹದ ಜತೆ ಆಕೆ ಮೂರು ದಿನ ಇದ್ದಳೆ? ಎಂಬುದು ಸೇರಿದಂತೆ ಹೆಚ್ಚಿನ ಪಾತ್ರದ ಬಗ್ಗೆ ತನಿಖೆಯಿಂದ ಗೊತ್ತಾಗಬೇಕಿದೆ ಎಂದರು.

ಸುಂದರಿ ಮಾಡೆಲ್..  ಹುಬ್ಬಳ್ಳಿಯ ಭೀಕರ ಕೊಲೆ..  ರುಂಡ ಬೇರೆ-ಮುಂಡ ಬೇರೆ!

ಬೆಂಗಳೂರಿನಲ್ಲಿ ಮಾಡೆಲ್‌, ನಟಿಯಾಗಿರುವ ಶನಾಯಾ ಹಾಗೂ ನಿಯಾಜ್‌ ಇಬ್ಬರದ್ದೂ ಹುಬ್ಬಳ್ಳಿಯ ವಿಶಾಲನಗರದಲ್ಲಿ ಒಂದೇ ಮನೆಯ ವಿಳಾಸವಿದೆ. ಇಬ್ಬರೂ ಚಿಕ್ಕಂದಿನಿಂದ ಪ್ರೀತಿಸುತ್ತಿದ್ದರು. ಇದಕ್ಕೆ ರಾಕೇಶ ವಿರೋಧವಿತ್ತು. ಅದಲ್ಲದೆ ರಾಕೇಶ ಹಾಗೂ ನಿಯಾಜ್‌ ನಡುವೆ ಇನ್ನು ಕೆಲ ವೈಷಮ್ಯವಿದ್ದ ಬಗ್ಗೆ ತಿಳಿದುಬಂದಿದೆ. ದೇವರ ಗುಡಿಹಾಳದಲ್ಲಿ ಸುಟ್ಟರುಂಡ ಎಸೆದು ಹಾಗೂ ಕೇಶ್ವಾಪುರದಲ್ಲಿ ಮುಂಡದ ಭಾಗ ಎಸೆದಿರುವ ಹಿಂದೆ ಸಾಕ್ಷ್ಯ ನಾಶದ ಉದ್ದೇಶವಿತ್ತು ಎಂದು ತಿಳಿಸಿದರು.

ಇನ್ನು, ಪ್ರಕರಣದ ತನಿಖೆಗಾಗಿ ಐದು ತಂಡಗಳನ್ನು ರಚಿಸಲಾಗಿತ್ತು. ಗ್ರಾಮೀಣ ಪೊಲೀಸ್‌ ಇನ್‌ಸ್ಪೆಕ್ಟರ್‌ ರಮೇಶ ಗೋಕಾಕ್‌ ನೇತೃತ್ವದಲ್ಲಿ ಒಂದು ತಂಡ, ತಾಂತ್ರಿಕತೆ ನಿರ್ವಹಿಸಲು, ಕಾಣೆಯಾದವರ ಪತ್ತೆಗಾಗಿ, ಜೂಜು ವಿಚಾರಕ್ಕಾಗಿ, ಕುಡಿತ ರೀತಿಯ ವಿಷಯಕ್ಕೆ ಸಂಬಂಧಿಸಿ ತಂಡ ರಚಿಸಲಾಗಿತ್ತು ಎಂದರು.

ರುಂಡ ಮುಂಡ

ಕಳೆದ ಏ. 10ರಂದು ಮಧ್ಯಾಹ್ನ ದೇವರಗುಡಿಹಾಳದಲ್ಲಿ ಅಪರಿಚಿತ ರುಂಡ ಸುಟ್ಟ ಹಾಗೂ ಹುಳ ಹಿಡಿದ ರೀತಿಯಲ್ಲಿ ಸಿಕ್ಕಿತ್ತು. ಸಂಜೆ ಕೇಶ್ವಾಪುರ ಸರಹದ್ದಿನಲ್ಲಿ ಕೈಕಾಲು ಇಲ್ಲದ ಮುಂಡ ಪತ್ತೆಯಾಗಿತ್ತು. ಹೀಗೆ ಭೀಕರವಾಗಿ ಕೊಲೆಯಾಗಿದ್ದು ಯಾರು? ಎಲ್ಲಿಯವ ಎಂಬ ಸಣ್ಣ ಸುಳಿವೂ ಇರಲಿಲ್ಲ. ಈ ಪ್ರಕರಣ ಮಹಾನಗರದಲ್ಲಿ ಸಾಕಷ್ಟುಕುತೂಹಲಕ್ಕೆ ಕಾರಣವಾಗಿತ್ತು. ಗ್ರಾಮೀಣ ಹಾಗೂ ಕೇಶ್ವಾಪುರ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದರು. ಕ್ಷಿಪ್ರಗತಿಯ ತನಿಖೆ ನಡೆಸಿದ ಪೊಲೀಸರು ಏ. 19ರಂದು ಕೊಲೆಯಾಗಿದ್ದು ರಾಕೇಶ ಕಾಟವೆ ಎಂದು ಪತ್ತೆ ಮಾಡಿದ್ದರು. ಅಲ್ಲದೆ, ನಿಯಾಜ್‌ ಅಹ್ಮದ್‌ ಸೈಫುದ್ದಿನ್‌ ಕಟಿಗಾರ, ತೌಸಿಫ್‌ ಚನ್ನಾಪುರ, ಅಲ್ತಾಫ್‌ ಮುಲ್ಲಾ ಹಾಗೂ ಅಮನ್‌ ಗಿರಣಿವಾಲೆ ಎಂಬ ನಾಲ್ವರನ್ನು ಬಂಧಿಸಿದ್ದರು. ಈಗ ಪ್ರಕರಣದ 8ನೇ ಆರೋಪಿಯಾಗಿರುವ ಶನಾಯಾ ಹುಬ್ಬಳ್ಳಿಯ ಕಥೆ ಆಧಾರಿತ ಛೋಟಾ ಬಾಂಬೆ ಚಿತ್ರದ ನಾಯಕ ನಟಿ ಎಂದಿದ್ದಾರೆ ಎಸ್‌ಪಿ ಕೃಷ್ಣಕಾಂತ.
 

Follow Us:
Download App:
  • android
  • ios