ತಮ್ಮ 50 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಜನಸೇವೆಯೇ ಮುಖ್ಯ ಗುರಿಯಾಗಿಟ್ಟುಕೊಂಡು ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ಭಾಗಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ದಾಂಡೇಲಿ (ಮಾ.21): ಸಹಾಯಕ ಸಾರಿಗೆ ಕಚೇರಿ ಉದ್ಘಾಟನೆಗೊಂಡು ಇನ್ನು ಒಂದು ವರ್ಷವಾಗಿಲ್ಲ. ಆಗಲೆ ಇನ್ನೊಂದು ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥದ ಉದ್ಘಾಟನೆಗೆ ಬಂದಿದ್ದೇನೆ ಎಂದರೆ ಇದಕ್ಕೆಲ್ಲ ಕಾರಣ ನಿಮ್ಮ ಈ ಭಾಗದ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ. ಅವರು 9 ಬಾರಿ ವಿಧಾನಸಭೆಗೆ ಆಯ್ಕೆಯಾದ ಹಿರಿಯ ರಾಜಕಾರಣಿಗಳಲ್ಲಿ ಎರಡನೆಯವರಾಗಿದ್ದಾರೆ. ತಮ್ಮ 50 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಜನಸೇವೆಯೇ ಮುಖ್ಯ ಗುರಿಯಾಗಿಟ್ಟುಕೊಂಡು ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ಭಾಗಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಅಂಬೇವಾಡಿಯ ಸಹಾಯಕ ಪ್ರಾದೇಶಿಕ ಅಧಿಕಾರಿಗಳ ಕಚೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ದೇಶಪಾಂಡೆಯವರು ಯಾವದಾದರೊಂದು ಕೆಲಸ ಕೈಗೆತ್ತಿಕೊಂಡರೆ ಅದು ಪೂರ್ಣಗೊಳಿಸುವವರೆಗೆ ನಿಲ್ಲುವುದಿಲ್ಲ ಎಂದರು. ರಾಜ್ಯದಲ್ಲಿ ಸುಮಾರು 20 ಕಡೆಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣಗೊಂಡಿವೆ. ಇನ್ನು ಬಾಕಿ ಉಳಿದಿರುವ ಸುಮಾರು 25 ಕಡೆಗಳಲ್ಲಿ ಆದಷ್ಟು ಬೇಗನೆ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ ಕೆಲಸ ಮಾಡಿ ಮುಗಿಸುತ್ತೇವೆ. ಇದರಿಂದ ಮದ್ಯವರ್ತಿಗಳಾಗಲಿ, ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳಾಗಲಿ ಯಾರು ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ.

ಅಧಿಕಾರಿಗಳ ಹಸ್ತಕ್ಷೇಪ ಇರುವುದಿಲ್ಲ

ಕಾರಣ ಇದು ಸೆನ್ಸಾರ್‌ಗಳ ಅಳವಡಿಕೆ ಹೊಂದಿದ್ದು, ಎಲ್ಲವನ್ನು ಸೆನ್ಸಾರ್‌ ಮೂಲಕ ತೀರ್ಮಾನಗೊಳ್ಳುತ್ತದೆ. ಸರಿಯಾಗಿ ಚಾಲನೆಯನ್ನು ಕಲಿತ ಚಾಲಕರು ಮಾತ್ರ ಇಲ್ಲಿ ಉತ್ತೀರ್ಣರಾಗಲು ಸಾಧ್ಯ, ಚಾಲನೆಯಲ್ಲಿ ತಪ್ಪಿದಲ್ಲಿ ಮತ್ತೆ ತರಬೇತಿ ಪಡೆದು ಇಲ್ಲಿಗೆ ಬರಬೇಕಾಗುತ್ತದೆ. ಇದರಿಂದ ಇನ್ನು ಮುಂದಿನ ದಿನಗಳಲ್ಲಿ ಈ ಪರೀಕ್ಷೆಯಲ್ಲಿ ಕಚೇರಿಯ ಅಧಿಕಾರಿಗಳ ಹಸ್ತಕ್ಷೇಪ ಇರುವುದಿಲ್ಲ ಹಾಗೂ ಅವರು ಅನುಭವಿಸುತ್ತಿರುವ ಆಪಾದನೆಗಳು ಕೂಡ ತಪ್ಪುತ್ತವೆ ಎಂದರು. ನಗರದ ಬಸ್‌ ನಿಲ್ದಾಣವನ್ನು ಹೈಟೆಕ್‌ ಆಗಿ ಮಾಡುವುದು ಮತ್ತು ಬೆಂಗಳೂರು ದಾಂಡೇಲಿಗೆ ಪಲ್ಲಕ್ಕಿ ಬಸ್‌ ಆರಂಭಿಸುವುದಕ್ಕೆ ಹಿರಿಯ ಶಾಸಕ ಆರ್‌.ವಿ. ದೇಶಪಾಂಡೆ ಮನವಿ ಮಾಡಿದ್ದಾರೆ.

ಅದರಂತೆ ಈ ಬಜಟ್‌ನಲ್ಲಿ ದಾಂಡೇಲಿ ಹೈಟೆಕ್‌ ಬಸ್‌ನಿಲ್ದಾಣಕ್ಕೆ ಅನುಮತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪಲ್ಲಕ್ಕಿ ಬಸ್‌ಗಳನ್ನು ಬೆಂಗಳೂರು-ದಾಂಡೇಲಿಗೆ ಪ್ರಾರಂಭಿಸುತ್ತೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆರ್.ವಿ. ದೇಶಪಾಂಡೆ, ದಾಂಡೇಲಿ ಪಟ್ಟಣ ಬೆಳೆಯುತ್ತಿದೆ ಎಷ್ಟೊಂದು ಮನೆಗಳು ನಿರ್ಮಾಣಗೊಂಡಿವೆ. ಹೊಸ ನಿವೇಶನಗಳು ಆಗುತ್ತಿವೆ ನೋಡಿದರೆ ಖುಷಿಯಾಗುತ್ತದೆ. ಈ ಹಿಂದೆ ಇಲ್ಲಿ ಮೂರು ಕಾರ್ಖಾನೆಗಳಿದ್ದವು ವೆಸ್ಟ್‌ಕೋಸ್ಟ್‌ ಕಾಗದ ಕಾರ್ಖಾನೆ, ದಾಂಡೇಲಿ ಫೇರೋ ಅಲೈಯಿಸ್‌, ಇಂಡಿಯನ್ ಪ್ಲಾಯ್‌ವುಡ್‌. ಇವುಗಳಲ್ಲಿ ವೆಸ್ಟ್‌ಕೋಸ್ಟ್‌ ಕಾಗದ ಕಾರ್ಖಾನೆ ಸಾಕಷ್ಟು ಪ್ರಯತ್ನದಿಂದ ಉಳಿದಿದೆ.

ಇಂದು ಸಾವಿರಾರು ಜನ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಆರಂಭಗೊಂಡಿದ್ದರಿಂದ ದಾಂಡೇಲಿ-ಜೋಯಿಡಾ ಭಾಗ ಅಭಿವೃದ್ದಿ ಹೊಂದುತ್ತಿವೆ. ಇದರಿಂದ ಉದ್ಯೋಗ ಸಿಗುತ್ತಿದೆ. ಪ್ರವಾಸಿಗರು ದೇಶ, ವಿದೇಶಗಳಿಂದ ಇಲ್ಲಿಗೆ ಬರುತ್ತಿದ್ದಾರೆ. ಹಾಗಾಗಿ ದಾಂಡೇಲಿ ನಗರ ಎಲ್ಲ ರೀತಿಯಿಂದ ಅಭಿವೃದ್ದಿಯಾಗಬೇಕು ಎಂದರು. ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ, ಬೆಳಗಾವಿ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ, ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ಡಿಎಸ್‌ಪಿ ಶಿವಾನಂದ ಮದರಕಂಡಿ, ಎಆರ್‌ಟಿಓ ಅವಿನಾಶ ಕಾವೇರಿ, ಮೋಟಾರ ವಾಹನ ನಿರೀಕ್ಷಕ ಮಂಜುನಾಥ ಕಂಬಾರ, ಎಆರ್‌ಟಿಓ ಕಚೇರಿ ಖಜಾಂಚಿ ಎಸ್.ಎಂ. ಖಾಜಿ ಮುಂತಾದವರಿದ್ದರು.