ಚಿತ್ರದುರ್ಗದ ಡಿಎಆರ್‌ RSI ವರುಣ್‌ಕುಮಾರ್ ವಿರುದ್ಧ ಯುವತಿಯೊಬ್ಬಳು ಮದುವೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ದೂರು ನೀಡಿದ್ದಳು. ಇದೀಗ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಯುವತಿಯೇ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿ ಹನಿಟ್ರ್ಯಾಪ್ ಮಾಡುತ್ತಿದ್ದಾಳೆ ಎಂದು RSI ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ದಾವಣಗೆರೆ : ಮದುವೆಯ ಆಮಿಷವೊಡ್ಡಿ ಚಿತ್ರದುರ್ಗ ಡಿಎಆರ್‌ (DAR) ವಿಭಾಗದ RSI ವಿರುದ್ಧ ಯುವತಿ ನೀಡಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ RSI ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದರೂ, ಇದೀಗ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಹೊರಬಂದಿದ್ದು, ಯುವತಿಯ ಮೇಲೆಯೇ ಮೋಸದ ಆರೋಪಗಳು ಕೇಳಿಬರುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿತ್ರದುರ್ಗದಲ್ಲಿ ಡಿಎಆರ್‌ RSI ಆಗಿ ಸೇವೆ ಸಲ್ಲಿಸುತ್ತಿರುವ ದಾವಣಗೆರೆ ಮೂಲದ ವರುಣ್‌ಕುಮಾರ್ ವಿರುದ್ಧ, ಮದುವೆಯ ಭರವಸೆ ನೀಡಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ದೂರು ಹೊರಬಿದ್ದ ತಕ್ಷಣವೇ ಪ್ರಕರಣವು ಚರ್ಚೆಗೆ ಗ್ರಾಸವಾಗಿತ್ತು.

ಮಹತ್ವದ ಫೋಟೋಗಳನ್ನು ಬಿಡುಗಡೆ ಮಾಡಿದ ವರುಣ್‌ ಕುಟುಂಬಸ್ಥರು

ಇದೀಗ RSI ವರುಣ್‌ಕುಮಾರ್ ಕುಟುಂಬಸ್ಥರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಹತ್ವದ ಫೋಟೋಗಳನ್ನು ಬಿಡುಗಡೆ ಮಾಡಿ, ಯುವತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಯುವತಿ ಪೊಲೀಸ್ ಸಿಬ್ಬಂದಿಯನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮೂಲಕ ಹಣ ವಸೂಲಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕುಟುಂಬಸ್ಥರ ಪ್ರಕಾರ, ಯುವತಿ ಮೊದಲು ಇನ್‌ಸ್ಟಾಗ್ರಾಂ ಮೂಲಕ ವರುಣ್‌ಕುಮಾರ್ ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿದ್ದಳು. ನಂತರ ಆಕೆಯ ವರ್ತನೆ ಬಗ್ಗೆ ಅನುಮಾನಗೊಂಡ ವರುಣ್ ದೂರವಾಗಲು ಯತ್ನಿಸಿದ್ದಾನೆ. ಇದಾದ ಬಳಿಕ ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದು, ಇಲ್ಲವಾದರೆ 10 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ ಎಂದು ಅವರು ಹೇಳಿದ್ದಾರೆ.

ಮತ್ತೋರ್ವ ಪೊಲೀಸ್ ಪೇದೆಗೆ ಮೋಸ ಮಾಡಿದ್ದಾಳೆ ಎಂಬ ಆರೋಪ

ಹಣ ನೀಡಲು ಒಪ್ಪದಿದ್ದ ಹಿನ್ನೆಲೆಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ ಎಂಬುದು ಕುಟುಂಬಸ್ಥರ ವಾದ. ಅಲ್ಲದೆ, ಇದೇ ರೀತಿಯಲ್ಲಿ ಈ ಯುವತಿ ಈ ಹಿಂದೆಯೂ ದಾವಣಗೆರೆಯಲ್ಲಿ ಒಬ್ಬ ಯುವಕನಿಗೆ ಹಾಗೂ ಮತ್ತೋರ್ವ ಪೊಲೀಸ್ ಪೇದೆಗೆ ಮೋಸ ಮಾಡಿದ್ದಾಳೆ ಎಂಬ ಆರೋಪವನ್ನೂ ಅವರು ಮುಂದಿಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಎಂದು ಮತ್ತೋರ್ವ ಪೊಲೀಸ್ ಸಿಬ್ಬಂದಿಯೊಂದಿಗೆ ಇರುವ ಫೋಟೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸುತ್ತಿದ್ದಾಳೆ. ಅನೇಕ ಯುವಕರು ಆಕೆಯ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದರ ನಡುವೆ, ದೂರು ದಾಖಲಾದ ದಿನದಿಂದ RSI ವರುಣ್‌ಕುಮಾರ್ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ವರುಣ್‌ಗೆ ಏನೇ ಅನಾಹುತವಾದರೂ ಅದಕ್ಕೆ ಆ ಯುವತಿಯೇ ಹೊಣೆ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಮಗ್ರ ತನಿಖೆ ಅಗತ್ಯವಿದೆ ಎಂದು ಆಗ್ರಹಿಸಿರುವ ಕುಟುಂಬಸ್ಥರು, ತಮ್ಮ ಮಗನಿಗೆ ನ್ಯಾಯ ಒದಗಿಸಬೇಕೆಂದು ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ಒಟ್ಟಾರೆ, ಮದುವೆ ಆಮಿಷ, ಲೈಂಗಿಕ ದೌರ್ಜನ್ಯ ಆರೋಪ ಮತ್ತು ಹನಿಟ್ರ್ಯಾಪ್ ಆರೋಪಗಳ ನಡುವೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಯ ಫಲಿತಾಂಶವೇ ಸತ್ಯವನ್ನು ಹೊರತರುವ ನಿರೀಕ್ಷೆಯಿದೆ.