ಬೆಂಗಳೂರಿನ ಶ್ರೀಗಂಧನಗರದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಚಿತ್ರದುರ್ಗ ಮೂಲದ ಯುವಕ ತಿಪ್ಪೇಸ್ವಾಮಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ವಾಸಿಸುತ್ತಿದ್ದ ಆತನ ಸಾವಿಗೆ ಆಕೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ನಗರದ ಶ್ರೀಗಂಧನಗರದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮ*ಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಸಾವಿನ ಬಗ್ಗೆ ಮೃತನ ಪೋಷಕರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಮೃತ ವ್ಯಕ್ತಿಯಾಗಿದ್ದು, ಆತ ಬೆಂಗಳೂರಿನ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇದೇ ವೇಳೆ, ದಾವಣಗೆರೆ ಮೂಲದ ಮಹಿಳೆಯೊಬ್ಬಳೊಂದಿಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿಬಳಿಕ ಇಬ್ಬರೂ ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಾ ಹತ್ತಿರವಾಗಿದ್ದರು. ಕಳೆದ ಎರಡು ತಿಂಗಳಿನಿಂದ ಅವರು ಲಿವ್-ಇನ್ ಸಂಬಂಧದಲ್ಲಿದ್ದು, ಶ್ರೀಗಂಧನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು.

ಮದುವೆಯಾಗಿ ಇಬ್ಬರು ಮಕ್ಕಳ ತಾಯಿ

ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ, ಆ ಮಹಿಳೆ ತನ್ನ ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ತಿಪ್ಪೇಸ್ವಾಮಿ ಜೊತೆ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ಮನೆ ಮಾಲೀಕರಿಗೆ ನಾವಿಬ್ಬರೂ ಗಂಡ-ಹೆಂಡತಿ ಎಂದು ಹೇಳಿದ ಜೋಡಿ ತಿಂಗಳಿಗೆ ಸುಮಾರು 3 ಸಾವಿರ ರೂಪಾಯಿ ಬಾಡಿಗೆ ನೀಡಿ ಜೊತೆಯಾಗಿ ವಾಸಿಸುತ್ತಿದ್ದರು.

ಇಬ್ಬರ ಮಧ್ಯೆ ಕಲಹ

ಆದರೆ ಕೆಲ ದಿನಗಳಿಂದ ಜೋಡಿಗಳಿಬ್ಬರ ನಡುವೆ ಕಲಹ ಉಂಟಾಗಿತ್ತಂತೆ, “ನನ್ನನ್ನು ನೋಡಿಕೊಳ್ಳಲು ಆಗುವುದಿಲ್ಲ, ನನ್ನನ್ನು ಬಿಟ್ಟುಬಿಡು” ಎಂದು ಮಹಿಳೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಮನನೊಂದ ತಿಪ್ಪೇಸ್ವಾಮಿ ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದೇ ವೇಳೆ, ತಿಪ್ಪೇಸ್ವಾಮಿ ಸಾವಿಗೆ ಪ್ರಿಯಾಂಕಾ ಎಂಬ ಮಹಿಳೆಯೇ ಕಾರಣ ಎಂದು ಮೃತನ ಕುಟುಂಬಸ್ಥರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸದ್ಯ ನಾಪತ್ತೆಯಾಗಿರುವ ಮಹಿಳೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.