ಈರುಳ್ಳಿ ಬೆಳೆಯುವ ನಾಡಿಗೆ ಕಡಿಮೆ ಬೆಲೆಗೆ ಟರ್ಕಿ ಈರುಳ್ಳಿ ಲಗ್ಗೆ : ಬೆಲೆ ಎಷ್ಟಿದೆ?
ಈರುಳ್ಳಿ ದರ ಗಗನಕ್ಕೇರಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. ಆದರೆ ಇದೀಗ ಇದೀಗ ಈರುಳ್ಳಿ ಬೆಳೆಯುವ ನಾಡಿಗೆ ಟರ್ಕಿ ಈರುಳ್ಳೀ ಪ್ರವೇಶಿಸಿ ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ.
ಚಳ್ಳಕೆರೆ [ಜ.05]: ಈರುಳ್ಳಿ ಇದ್ದರೆ ಮಾತ್ರ ಅಡುಗೆಗೆ ರುಚಿ, ಜೊತೆಗೆ ಉತ್ತಮ ಆರೋಗ್ಯವೂ ದೊರೆಯುತ್ತದೆ. ಇತ್ತೀಚೆಗೆ ಈರುಳ್ಳಿ ದರ ಗಗನಕ್ಕೇರಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. ಈರುಳ್ಳಿ ಖರೀದಿಸಲು ಬಡವಷ್ಟೇಯಲ್ಲ, ಶ್ರೀಮಂತರೂ ಗಾಬರಿಯಾಗಿದ್ದರು.
ತಾಲೂಕಿನಾದ್ಯಂತ ಪ್ರತಿವರ್ಷ ನೂರಾರು ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆಯುತ್ತಿದ್ದು, ನೀರಿನ ಅಭಾವ, ಮಳೆಯ ಕೊರತೆ ಹಿನ್ನೆಲೆಯಲ್ಲಿ ಈ ಭಾಗದ ಎಲ್ಲೂ ಹೆಚ್ಚು ಈರುಳ್ಳಿ ಇಲ್ಲದ ಕಾರಣ ಲಭ್ಯವಿರುವ ಈರುಳ್ಳಿಯನ್ನೇ ಉಪಯೋಗಿಸಲಾಗುತ್ತಿತ್ತು. ಕೇವಲ 10 ರಿಂದ 20 ರು.ಗೆ ಸಿಗುತ್ತಿದ್ದ ಈರುಳ್ಳಿ ದರ 200 ರು.ಕ್ಕೆ ಜಿಗಿಯಿತು. ಮಾರುಕಟ್ಟೆಯಲ್ಲಿ ಯಾರಾದರೂ ಕಡೆಯ ಪಕ್ಷ 2 ಕೆ.ಜಿ.ಈರುಳ್ಳಿ ಖರೀದಿಸಿದರೆ ಸುತ್ತಲಿನ ಜನ ಅವರನ್ನೇ ದಿಟ್ಟಿಸಿ ನೋಡುವ ಪರಿಸ್ಥಿತಿ ಉಂಟಾಗಿತ್ತು. ಬಹುತೇಕ ಮನೆಗಳಲ್ಲಿ ಹೋಟೆಲ್ ಹಾಗೂ ಡಾಬಾಗಳಲ್ಲಿ ಸ್ವಲ್ಪಭಾಗ ಮಾತ್ರ ಈರುಳ್ಳಿ ಜನರಿಗೆ ತೋರಿಸಲಾಗುತ್ತಿತ್ತು. ಹೆಚ್ಚು ಕೇಳಿದರೆ ಈರುಳ್ಳಿ ಇರುತ್ತಿರಲಿಲ್ಲ. ಮಾರುಕಟ್ಟೆಯಲ್ಲೂ ಈರುಳ್ಳಿ ಅಭಾವ ತಲೆದೋರಿದ್ದು, ಹೆಚ್ಚಿನ ದರವೂ ನಿಗದಿಯಾಗಿ, ಈರುಳ್ಳಿ ಖರೀದಿಸುವುದೇ ಪವಾಡದ ವಿಷಯವಾಗಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಜನರ ಈರುಳ್ಳಿ ಬೇಡಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಟರ್ಕಿ ದೇಶದ ನವೀನ ಶೈಲಿಯ ಕೆಂಪುಗಡ್ಡೆ ಈರುಳ್ಳಿಯನ್ನು ಮಾರುಕಟ್ಟೆಗೆ ತರಲಾಗಿದೆ. ದೂರದ ಟರ್ಕಿ ದೇಶದಿಂದ ಹಡಗಿನಲ್ಲಿ ಮಂಗಳೂರು ತಲುಪುವ ಈರುಳ್ಳಿ ಅಲ್ಲಿಂದ ನೇರವಾಗಿ ಬೆಂಗಳೂರು, ದಾವಣಗೆರೆ, ಹುಬ್ಬಳಿ ಮಾರುಕಟ್ಟೆಗಳಿಗೆ ಸರಬರಾಜುತ್ತಿದೆ. ಸ್ಥಳೀಯ ಈರುಳ್ಳಿ ನಿಗದಿತ ಪ್ರಮಾಣದಲ್ಲಿ ದೊರೆಯದೇ ಇರುವುದು ಹಾಗೂ ದರವೂ ಹೆಚ್ಚಿರುವ ಕಾರಣ ಈರುಳ್ಳಿ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಈ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಕೆ.ಜಿ.ಗೆ 160ರಿಂದ 200 ರು.ರವರೆಗೆ ಏರಿಕೆಯಾಗಿದೆ. ಟರ್ಕಿ ದೇಶದ ಈರುಳ್ಳಿ ಬೆಲೆ ಅತಿ ಕಡಿಮೆ ಇದ್ದು, ಇದು ಕೆ.ಜಿ.ಗೆ 80ರಿಂದ 100 ಆಗುತ್ತಿದೆ. ಗಡ್ಡೆಯೂ ಗಟ್ಟಿಯಾಗಿದ್ದು, ಕೆಂಪು ಈರುಳ್ಳಿ ಸಿಪ್ಪೆ ತೆಗೆದರೆ ಬಿಳಿ ಈರುಳ್ಳಿಯಾಗಿ ಎಲ್ಲರ ಗಮನ ಸೆಳೆಯುತ್ತದೆ. ಟರ್ಕಿ ಈರುಳ್ಳಿ ಈಗ ಚಳ್ಳಕೆರೆ ಮಾರುಕಟ್ಟೆಗೂ ಲಗ್ಗೆ ಇಟ್ಟಿದ್ದು, ಶನಿವಾರ ಬೆಳಗ್ಗೆ ಇಲ್ಲಿನ ಈರುಳ್ಳಿ ವ್ಯಾಪಾರಿ ರುದ್ರಪ್ಪ ಎಂಬುವರು ಈ ಈರುಳ್ಳಿಯನ್ನು ಚಳ್ಳಕೆರೆಗೆ ತಂದಿದ್ದಾರೆ. ಕಡಿಮೆ ಬೆಲೆ ಹಾಗೂ ಸಿಪ್ಪೆ ಸುಲಿದರೆ ತಾಜಾವಾಗಿರುವ ಕಾರಣ ಕೆಲವೇ ನಿಮಿಷಗಳಲ್ಲಿ ಟರ್ಕಿ ಈರುಳ್ಳಿಯನ್ನು ಜನ ಮುಗಿಬಿದ್ದು ಖರೀದಿಸಿದ್ದಾರೆ.
ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲೂ ಈಗ ಟರ್ಕಿ ಈರುಳ್ಳಿ ಉಪಯೋಗಿಸಲಾಗುತ್ತಿದೆ. ಈ ಈರುಳ್ಳಿ ವಿಶೇಷವೆಂದರೆ ಒಂದು ಕೆ.ಜಿ.ಗೆ ಕೇವಲ 2 ಗಡ್ಡೆ ಲಭ್ಯವಿದ್ದು, ಗಡ್ಡೆಯ ಮೇಲ್ಪದರ ತೆಗೆದರೆ ಬಳಭಾಗದಲ್ಲಿ ಬಿಳಿ ಈರುಳ್ಳಿ ಸಿಗುತ್ತದೆ. ಒಟ್ಟಿನಲ್ಲಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಗಮಿಸಿರುವ ಟರ್ಕಿ ಈರುಳ್ಳಿ ಕೇವಲ ವರ್ತಕರಷ್ಟೇ ಅಲ್ಲ ಜನರಿಗೂ ಪ್ರಿಯವಾಗಿ ಪರಿಣಮಿಸಿದೆ.