ಹೊಸಪೇಟೆ: ಟಿಬಿ ಡ್ಯಾಂ ನೀರು ಸಾಮರ್ಥ್ಯ 5 ಟಿಎಂಸಿ ಹೆಚ್ಚಳ..!

*  ಟೊಪೊಗ್ರಾಫಿಕ್‌ ಸರ್ವೆಯಲ್ಲಿ ನೀರಿನ ಸಂಗ್ರಹ ಅಳತೆ
*  100.855ರಿಂದ 105.788 ಟಿಎಂಸಿಗೆ ಏರಿಕೆ
*   2016ರಲ್ಲಿ ನಡೆದಿದ್ದ ಸಮೀಕ್ಷೆ ವರದಿ ಈಗ ಬಹಿರಂಗ
 

Tungabhadra Dam Water Capacity 5 TMC Increase grg

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಜೂ.25):  ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ ಟೊಪೊಗ್ರಾಫಿ ಸರ್ವೆಯಲ್ಲಿ 105.788ಕ್ಕೆ ಏರಿದ್ದು, ಈ ಲೆಕ್ಕಾಚಾರದಿಂದ ಜಲಾಶಯದ ಸಂಗ್ರಹಣಾ ಸಾಮರ್ಥ್ಯ ಐದು ಟಿಎಂಸಿಯಷ್ಟು ಹೆಚ್ಚಾಗಲಿದೆ.

ತುಂಗಭದ್ರಾ ಜಲಾಶಯದಲ್ಲಿ 2008ರಿಂದ 100.855 ಟಿಎಂಸಿ ಸಂಗ್ರಹ ಸಾಮರ್ಥ್ಯ ಇದೆ ಎಂದು ಲೆಕ್ಕಾಚಾರ ಇದೆ. 2016ರಲ್ಲಿ ನಡೆದ ಸರ್ವೇಯನ್ನು ಈಗ ಜಾರಿ ಮಾಡಲಾಗಿದ್ದು, ಇದರನ್ವಯ ಜಲಾಶಯದ ಸಂಗ್ರಹ ಸಾಮರ್ಥ್ಯ 105.788ಕ್ಕೆ ಹೆಚ್ಚಳವಾಗಿದೆ.

ಕೊಪ್ಪಳ: ತುಂಗಭದ್ರಾ ಡ್ಯಾಂನಲ್ಲಿ ನೀರುಂಟು, ಬಿಡುವುದಕ್ಕೇನು ಗಂಟು?

ಸಾಮರ್ಥ್ಯ ಹೆಚ್ಚಳ:

ಕಳೆದ ಮೂವತ್ತು ವರ್ಷಗಳಲ್ಲಿ ನಡೆದ ಒಟ್ಟು 8 ಸಮೀಕ್ಷೆಗಳಲ್ಲಿ ಇದೇ ಮೊದಲ ಬಾರಿಗೆ ಸಾಮರ್ಥ್ಯ ಏರಿಕೆ ಕಂಡಿದೆ. 1972ರಲ್ಲಿ ನಡೆದ ಸಮೀಕ್ಷೆಯಲ್ಲಿ 6 ಟಿಎಂಸಿ ಏರಿಕೆ ಕಂಡಿತ್ತು. ನಂತರದ ಸಮೀಕ್ಷೆಗಳಲ್ಲಿ ಸಾಮರ್ಥ್ಯ ಕುಸಿಯುತ್ತಲೇ ಬಂದಿತ್ತು. ಆದರೆ, 2016ರಲ್ಲಿ ನಡೆದ ಸಮೀಕ್ಷೆಯ ವರದಿಗೆ ಈ ಬಾರಿ ಅನುಮೋದನೆ ನೀಡಲಾಗಿದೆ.

ಜಲಾಶಯದ ಇತಿಹಾಸದಲ್ಲಿ ಮೊದಲಿನಿಂದಲೂ ಹೈಡ್ರೋಗ್ರಾಫಿಕ್‌ ಸಮೀಕ್ಷೆ ಮಾಡಲಾಗುತ್ತಿತ್ತು. ಇದೇ ಮೊದಲು 2016ರಲ್ಲಿ ಕೈಗೊಂಡಿರುವ ಟೊಪೊಗ್ರಾಫಿ ಸಮೀಕ್ಷೆಯಲ್ಲಿ ಸಾಮರ್ಥ್ಯ ಹೆಚ್ಚಳವಾಗಿದೆ. ಹೈದರಾಬಾದ್‌ನ ಆವೀರ್‍ ಅಸೋಸಿಯೇಟ್ಸ್‌ ನಿಂದ ಸಮೀಕ್ಷೆ ಕೈಗೊಂಡಿದ್ದು, .2 ಕೋಟಿ ವೆಚ್ಚ ತಗುಲಿದೆ. ಸಮಿತಿಯ ವರದಿಯನ್ನು 2017ರಲ್ಲಿ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಒಪ್ಪಿಗೆ ಸೂಚಿಸಿದ್ದವು. ಆದರೆ, ಕರ್ನಾಟಕ ರಾಜ್ಯ ಮರು ಸರ್ವೇಗೆ ಒತ್ತಾಯಿಸಿತ್ತು.

ಏನಿದು ಹೈಡ್ರೋಗ್ರಾಫಿಕಲ್‌ ಸರ್ವೆ?

ಈ ಮಾದರಿಯ ಸಮೀಕ್ಷೆಯಲ್ಲಿ ಕೇವಲ ನಾಲ್ಕಾರು ಜನರ ತಂಡವೊಂದು ಜಲಾಶಯ ಸಂಪೂರ್ಣ ಭರ್ತಿಯಾದಾಗ ಬೋಟ್‌ನಲ್ಲಿ ತೆರಳಿ ಭೂಮಿಯ ತಳದಿಂದ ನೀರಿನ ಎತ್ತರದ ಅಳತೆಯನ್ನು ಮಾಡುವ ಮೂಲಕ ನೀರಿನ ಗಾತ್ರ ನಿರ್ಧರಿಸುತ್ತಿತ್ತು. ಜಲರಾಶಿ ಇದ್ದಾಗ ಈ ಸಮೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಸುಮಾರು .50ರಿಂದ 60 ಲಕ್ಷ ವೆಚ್ಚವಾಗಲಿದೆ.

ಏನೀದು ಟೊಪೊಗ್ರಾಫಿಕ್‌ ಸರ್ವೆ?:

ಈ ಸರ್ವೆಯನ್ನು ಜಲಾಶಯ ಖಾಲಿ ಇದ್ದಾಗ ನಡೆಸಲಾಗುತ್ತದೆ. 2016ರಲ್ಲಿ ಮೊದಲಿಗೆ ಈ ಸರ್ವೆ ನಡೆಸಲಾಗಿತ್ತು. ಇದು ಭೂ ಸರ್ವೆಯ ಮಾದರಿಯಲ್ಲಿ ನಡೆಯಲಿದ್ದು, ಹೆಚ್ಚಿನ ಮಾನವ ಸಂಪನ್ಮೂಲವೂ ಇದಕ್ಕೆ ಅಗತ್ಯವಾಗಿದೆ. ಜಲಾಶಯದ ಪ್ರದೇಶದಲ್ಲಿ ಎಲ್ಲೆಲ್ಲಿ ಎಷ್ಟು ತಗ್ಗು, ಆಳವಿದೆ ಎಂಬುದನ್ನು ಸರ್ವೇಯಲ್ಲಿ ತಿಳಿಸಲಾಗುತ್ತದೆ.

ಟೊಪೊಗ್ರಾಫಿಕ್‌ ಸಮೀಕ್ಷೆಯಲ್ಲಿ 29 ತಂಡಗಳು ಕಾರ್ಯನಿರ್ವಹಿಸಿದ್ದವು. ನಾಲ್ಕೈದು ಜನರನ್ನೊಳಗೊಂಡ ಈ ತಂಡಗಳಿಗೆ ಪ್ರತ್ಯೇಕ ಕೆಲಸಗಳನ್ನು ನಿಗದಿಸಲಾಗಿತ್ತು. ಮಣ್ಣು ಮಾದರಿ ಸೇರಿದಂತೆ ಹಲವಾರು ಕೆಲಸಗಳನ್ನು ಈ ತಂಡಗಳು ನಿರ್ವಹಿಸಿವೆ. ಈ ಸರ್ವೆಯಲ್ಲಿ ನಿಖರ ಮಾಹಿತಿ ತಿಳಿಯುತ್ತದೆ.

ಒಂಬತ್ತು ಸಲ ಹೈಡ್ರೋಗ್ರಾಫಿಕ್‌ ಸರ್ವೆ:

ತುಂಗಭದ್ರಾ ಜಲಾಶಯದಲ್ಲಿ ಇದು ವರೆಗೆ 9 ಬಾರಿ ಹೈಡ್ರೋಗ್ರಾಫಿಕ್‌ ಸರ್ವೆ ನಡೆದಿದ್ದು, ಅದರಲ್ಲಿ 1953ರಲ್ಲಿ ಮೊದಲ ಬಾರಿ ಸರ್ವೆ ನಡೆದಿದ್ದು 132.473 ಟಿಎಂಸಿ ನೀರಿತ್ತು. 1963ರಲ್ಲಿ ನಡೆದ ಸಮೀಕ್ಷೆಯಲ್ಲಿ 114.660 ಟಿಎಂಸಿ ಸಾಮರ್ಥ್ಯವಿತ್ತು. 18 ಟಿಎಂಸಿ ಕುಸಿದಿತ್ತು. ನಂತರ ನಡೆದ ಸಮೀಕ್ಷೆಗಳಲ್ಲಿ 1972ರಲ್ಲಿ 121.080 ಟಿಎಂಸಿ ಸಾಮರ್ಥ್ಯ ಅಂದರೆ 6 ಟಿಎಂಸಿ ಏರಿಕೆ ಕಂಡಿತ್ತು. ಅದಾದ ಬಳಿಕ 1978ರಲ್ಲಿ 117.695, 1981ರಲ್ಲಿ 115.680, 1985ರಲ್ಲಿ 111.832, 1993ರಲ್ಲಿ 111.50, 2004ರಲ್ಲಿ 104.340, 2008ರಲ್ಲಿ 100.855 ಟಿಎಂಸಿ ಸಾಮರ್ಥ್ಯ ಕಂಡುಬಂದಿತ್ತು. ಅದಾದ 8 ವರ್ಷಗಳ ಬಳಿಕ ನಡೆದ ಸರ್ವೆಯಲ್ಲಿ ಅಂದರೆ 2016ರಲ್ಲಿ 105.788 ಟಿಎಂಸಿ ನೀರಿದೆ ಎಂದು ಗೊತ್ತಾಗಿತ್ತು. ಇದೀಗ ಅದಕ್ಕೆ ಅನುಮೋದನೆ ನೀಡಲಾಗಿದೆ.

Koppal: ತುಂಗಭದ್ರಾ ಜಲಾಶಯದಲ್ಲಿ 31 ಟಿಎಂಸಿ ನೀರು ಸಂಗ್ರಹ

ಹಂಚಿಕೆಯ ಪಾಲು:

2016ರ ಸಮೀಕ್ಷೆಯಲ್ಲಿ ಕಂಡುಬಂದ ಜಲಾಶಯದ ಸಾಮರ್ಥ್ಯದಂತೆ ಐದು ಟಿಎಂಸಿಯಲ್ಲಿ ಕರ್ನಾಟಕ ರಾಜ್ಯಕ್ಕೆ 3.23 ಟಿಎಂಸಿ, ಆಂಧ್ರಕ್ಕೆ 1.5 ಟಿಎಂಸಿ, ತೆಲಂಗಾಣ ರಾಜ್ಯಕ್ಕೆ 0.15 ಟಿಎಂಸಿ ನೀರು ಹಂಚಿಕೆಯಾಗಲಿದೆ. ಈ ಜಲಾಶಯದಿಂದ ಕರ್ನಾಟಕಕ್ಕೆ 66.12, ಆಂಧ್ರಕ್ಕೆ 31.62, ತೆಲಂಗಾಣಕ್ಕೆ 3.09 ಟಿಎಂಸಿ ನೀರು ದೊರೆಯುತ್ತದೆ.

ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಮೊದಲು 100.855 ಟಿಎಂಸಿಯಷ್ಟಿತ್ತು. 2016ರ ಟೊಪೊಗ್ರಾಫಿಕ್‌ ಸರ್ವೆಯಂತೆ ಜಲಾಶಯದ ಸಾಮರ್ಥ್ಯ 5 ಟಿಎಂಸಿ ಹೆಚ್ಚಳವಾಗಿದೆ. ಇದರನ್ವಯ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿಗೆ ಹೆಚ್ಚಳವಾಗಿದೆ ಅಂತ ತುಂಗಭದ್ರಾ ಮಂಡಳಿ ಕಾರ್ಯದರ್ಶಿ ನಾಗಮೋಹನ್‌ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios