Koppal: ತುಂಗಭದ್ರಾ ಜಲಾಶಯದಲ್ಲಿ 31 ಟಿಎಂಸಿ ನೀರು ಸಂಗ್ರಹ
* 4 ದಿನದಲ್ಲಿ ಜಲಾಶಯಕ್ಕೆ 2,10,347 ಲಕ್ಷ ಕ್ಯುಸೆಕ್ ಒಳಹರಿವು
* ಜಲಾಶಯದ ಗರಿಷ್ಠ ನೀರಿನ ಮಟ್ಟ 1633 ಅಡಿ
* ಜಲಾಶಯ ಭರ್ತಿಯಾಗಲು ಇನ್ನು 25 ಅಡಿ ನೀರು ಬೇಕು
ಮುನಿರಾಬಾದ್(ಮೇ.24): ಸೋಮವಾರ ತುಂಗಭದ್ರಾ ಜಲಾಶಯಕ್ಕೆ 43,446 ಕ್ಯುಸೆಕ್ ನೀರು ಹರಿದು ಬಂದಿದ್ದು, ಜಲಾಶಯದ ನೀರಿನ ಮಟ್ಟವು 1608 ಅಡಿಗೆ ತಲುಪಿದೆ.
ಜಲಾಶಯದ ಗರಿಷ್ಠ ನೀರಿನ ಮಟ್ಟ 1633 ಅಡಿ. ಜಲಾಶಯವು ಭರ್ತಿಯಾಗಲು ಇನ್ನು 25 ಅಡಿ ನೀರು ಬೇಕು. ಜಲಾಶಯದಲ್ಲಿ 31 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದ ನೀರಿನ ಮಟ್ಟ 1585 ಹಾಗೂ ಜಲಾಶಯದ ಒಳಹರಿವು ಕೇವಲ 764 ಕ್ಯುಸೆಕ್ ಇತ್ತು. ಕೇವಲ 7 ಟಿಎಂಸಿಯಷ್ಟು ನೀರು ಮಾತ್ರ ನೀರು ಶೇಖರಣೆಯಾಗಿತ್ತು.
ಕಳೆದ 4 ದಿನದಲ್ಲಿ ಜಲಾಶಯಕ್ಕೆ 2,10,347 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿದೆ. ಶುಕ್ರವಾರ 16,048, ಶನಿವಾರ 61,189, ಭಾನುವಾರ 89,664 ಹಾಗೂ ಸೋಮವಾರ 43,446 ಕ್ಯುಸೆಕ್ ನೀರು ಹರಿದು ಬಂದಿದೆ.
ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಅದರೂ ಮೇ ಅಂತ್ಯದವರೆಗೆ ಜಲಾಶಯದಲ್ಲಿ 40 ಟಿಎಂಸಿ ನೀರು ಸಂಗ್ರಹವಾಗಲಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.
ಡ್ಯಾಂ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ: 1,600 ಅಡಿ ತಲುಪಿದ ತುಂಗಭದ್ರಾ ನೀರಿನ ಮಟ್ಟ
ಆಲಮಟ್ಟಿ ಡ್ಯಾಂ ಒಳಹರಿವು ಆರಂಭ
ಆಲಮಟ್ಟಿ: ಮುಂಗಾರು ಪೂರ್ವ ಮಳೆ ಸುರಿದ ಪರಿಣಾಮ ಈ ವರ್ಷದಲ್ಲಿ ಮೊದಲ ಬಾರಿಗೆ ಆಲಮಟ್ಟಿಜಲಾಶಯಕ್ಕೆ ಶನಿವಾರದಿಂದ ಒಳಹರಿವು ಆರಂಭಗೊಂಡಿದೆ. ಶನಿವಾರ ಜಲಾಶಯಕ್ಕೆ 1897 ಕ್ಯುಸೆಕ್ ನೀರು ಹರಿದು ಬಂದಿದೆ. ಭಾನುವಾರ ಅದು 28,077 ಕ್ಯುಸೆಕ್‌ಗೆ ಏರಿಕೆಯಾಗಿದೆ.
ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಈ ಒಳಹರಿವು ಬಂದಿದ್ದು, ಇದು ತಾತ್ಕಾಲಿಕ, ಇನ್ನೂ ಮಹಾರಾಷ್ಟ್ರದಲ್ಲಿ ಮಳೆ ಆರಂಭಗೊಂಡಿಲ್ಲ, ಜೂನ್ ವೇಳೆಗೆ ಒಳಹರಿವು ಹೆಚ್ಚಲಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ. ಹತ್ತು ವರ್ಷದಲ್ಲಿಯೇ ಅತಿ ಹೆಚ್ಚು ನೀರು ಸಂಗ್ರಹವೂ ಈ ವರ್ಷ ಇದೆ.
519.60 ಮೀ, ಎತ್ತರದ ಜಲಾಶಯದಲ್ಲಿ ಭಾನುವಾರ 511.41 ಮೀ ವರೆಗೆ ನೀರಿದ್ದು, 37 37 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ 508.43 ಮೀ ವರೆಗೆ ನೀರು ಸಂಗ್ರಹವಿತ್ತು. ಕಳೆದ ವರ್ಷ ಇನ್ನೂ ಒಳಹರಿವು ಆರಂಭಗೊಂಡಿರಲಿಲ್ಲ.