ವರದಿ : ಉಗಮ ಶ್ರೀನಿವಾಸ್‌

 ತುಮಕೂರು (ಆ.24): ಈವರೆಗೆ ಬರೋಬ್ಬರಿ 6 ಉಪಚುನಾವಣೆಯನ್ನು ಜಿಲ್ಲೆ ಕಂಡಿದ್ದು 7ನೇ ಉಪಚುನಾವಣೆಗೆ ಶಿರಾ ತಾಲೂಕು ಸದ್ದಿಲ್ಲದೆ ಸಜ್ಜಾಗುತ್ತಿದೆ. 1962 ರಲ್ಲಿ ತುಮಕೂರು ಲೋಕಸಭೆಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಎಂ.ವಿ. ಕೃಷ್ಣಪ್ಪ ಅವರು ಆಯ್ಕೆಯಾಗಿದ್ದರು. ಆ ವೇಳೆ ಉತ್ತರ ಭಾರತದಲ್ಲಿ ಜವಹರಲಾಲ್‌ ನೆಹರು ಅವರ ಪರಮಾಪ್ತ ಅಜಿತ್‌ ಪ್ರಸಾದ್‌ ಜೈನ್‌ ಪರಾಭವಗೊಂಡಿದ್ದರು. ಲೋಕಸಭೆಗೆ ಜೈನ್‌ ಅವರ ಅವಶ್ಯಕತೆ ನೆಹರು ಅವರಿಗಿತ್ತು. ಆಗ ಅವರ ಕಣ್ಣಿಗೆ ಬಿದ್ದಿದ್ದು ತುಮಕೂರು.

ತುಮಕೂರು ಲೋಕಸಭೆಯಿಂದ ಆಯ್ಕೆಯಾಗಿದ್ದ ಎಂ.ವಿ. ಕೃಷ್ಣಪ್ಪ ಅವರ ರಾಜಿನಾಮೆ ಕೊಡಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಉತ್ತರ ಭಾರತದಿಂದ ಆಗಮಿಸಿದ್ದ ಅಜಿತ್‌ ಪ್ರಸಾದ್‌ ಜೈನ್‌ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜೈನ್‌ ಅವರು 83151 ಮತಗಳನ್ನು ಪಡೆದು ಪ್ರಜಾ ಸೋಷಿಯಲಿಸ್ಡ್‌ ಪಾರ್ಟಿಯ ಎಂ. ಬುಡ್ಡದಾಸ್‌ ಅವರನ್ನು ಪರಾಭವಗೊಳಿಸಿದ್ದರು. ಬುಡ್ಡದಾಸ್‌ ಅವರು ಆ ಚುನಾವಣೆಯಲ್ಲಿ 36633 ಮತಗಳನ್ನು ಪಡೆದರು.

BSY ಸ್ಥಾನಪಲ್ಲಟಕ್ಕೆ ಬಿಜೆಪಿ ಸಚಿವರಲ್ಲೇ ಗೊಂದಲದ ಹೇಳಿಕೆ'...

1963ರಲ್ಲಿ ವಿಧಾನಸಭೆಗೆ ಎರಡು ಉಪಚುನಾವಣೆಯನ್ನು ಜಿಲ್ಲೆ ಕಂಡಂತಾಯಿತು. 1962 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೊರಟಗೆರೆ ಮೀಸಲು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಆರ್‌. ಚೆನ್ನಿಗರಾಮಯ್ಯ ಅವರ ರಾಜಿನಾಮೆಯಿಂದ ನಡೆದ ಉಪಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಎಸ್‌. ಆಂಜನೇಯ ಆಯ್ಕೆಯಾದರು. ಆ ಚುನಾವಣೆಯಲ್ಲಿ ಎಸ್‌. ಆಂಜನೇಯ ಅವರು 12594 ಮತಗಳನ್ನು ಪಡೆದು ವಿಧಾನಸಭಾ ಉಪಚುನಾವಣೆಗ ಆಯ್ಕೆಯಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹೆಚ್‌.ಎಂ. ಗಂಗಾಧರಯ್ಯ ಅವರು 11602 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು.

ತುರುವೇಕೆರೆಯಿಂದ ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯಿಂದ ಆಯ್ಕೆಯಾಗಿದ್ದ ಬಿ. ಹುಚ್ಚೆಗೌಡ ಅವರ ನಿಧನದಿಂದಾಗಿ ನಡೆದ ಉಪಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷದಿಂದ ಸ್ಪರ್ಧಿಸಿದ್ದ ಬಿ. ಭೈರಪ್ಪಾಜಿ ಅವರು 20289 ಮತಗಳನ್ನು ಪಡೆದು ಉಪಚುನಾವಣೆಯಲ್ಲಿ ಗೆದ್ದರು.ಆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ಹೆಚ್‌. ಪದ್ಮಾವತಿ ಅವರು 13238 ಮತಗಳನ್ನು ಪಡೆದು ಸೋಲುಂಡರು.

1967 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಎಸ್‌. ನೀಲಕಂಠಸ್ವಾಮಿ ಅವರ ನಿಧನದಿಂದಾಗಿ 1967 ರಲ್ಲಿ ಮತ್ತೊಂದು ಉಪಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷದಿಂದ ಸ್ಪರ್ಧಿಸಿದ್ದ ವಿ.ಎಲ್‌. ಶಿವಪ್ಪ ಅವರು 26742 ಮತಗಳನ್ನು ಪಡೆದು ಆಯ್ಕೆಯಾದರು. ಆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಟಿ.ಎಂ. ಮಂಜುನಾಥ್‌ ಅವರು 19932 ಮತಗಳನ್ನು ಪಡೆದು ಪರಾಭವಗೊಂಡರು.

ಶೀಘ್ರ ಮುಂದಿನ ರಾಜಕೀಯ ನಡೆ ಪ್ರಕಟಿಸುವೆ ಎಂದ್ರು ಕೈ ಮುಖಂಡ... 

2008 ರಲ್ಲಿ ತುಮಕೂರು ಜಿಲ್ಲೆ ಎರಡು ಉಪಚುನಾವಣೆಯನ್ನು ಕಾಣುವಂತಾಯಿತು. 2008 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಧುಗಿರಿಯಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಗೌರಿಶಂಕರ್‌ ಹಾಗೂ ತುರುವೇಕೆರೆಯಿಂದ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಸಿನಿಮಾ ನಟ ಜಗ್ಗೇಶ್‌ ಅವರು ಆಪರೇಷನ್‌ ಕಮಲ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆಗ ಎರಡು ಉಪಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಮಧುಗಿರಿಯಿಂದ ಅನಿತಾ ಕುಮಾರಸ್ವಾಮಿ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಅನಿತಾ ಕುಮಾರಸ್ವಾಮಿ ಅವರು ಆ ಚುನಾವಣೆಯಲ್ಲಿ 49768 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಎನ್‌. ರಾಜಣ್ಣ ಅವರು 46287 ಮತಗಳನ್ನು ಪಡೆದು ಪರಾಭವಗೊಂಡರು. ಇನ್ನು ತುರುವೇಕೆರೆ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಎಂ.ಟಿ. ಕೃಷ್ಣಪ್ಪ ಅವರು 55827 ಮತಗಳನ್ನು ಪಡೆದು ಆಯ್ಕೆಯಾದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಡಿ.ಲಕ್ಷ್ಮೇನಾರಾಯಣ್‌ ಅವರು 52526 ಮತಗಳನ್ನು ಪಡೆದರು.

ಈಗ ಶಿರಾ ವಿಧಾನಸಭೆಯಿಂದ ಜೆಡಿಎಸ್‌ ಶಾಸಕರಾಗಿದ್ದ ಬಿ. ಸತ್ಯನಾರಾಯಣ್‌ ಅವರ ನಿಧನದಿಂದಾಗಿ ಮತ್ತೊಂದು ಉಪಚುನಾವಣೆ ನಡೆಯಲಿದ್ದು ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಉಪಚುನಾವಣೆಯಲ್ಲಿ ಗೆದ್ದವರು

1962ರ ಲೋಕಸಭೆಯಲ್ಲಿ ಉತ್ತರ ಭಾರತದ ಅಜಿತ ಪ್ರಸಾದ್‌ ಜೈನ್‌

1963ರ ಕೊರಟಗೆರೆ ವಿಧಾನಸಭೆಯಲ್ಲಿ ಎಸ್‌. ಆಂಜನೇಯ ಆಯ್ಕೆ

1963ರ ತುರುವೇಕೆರೆ ವಿಧಾನಸಭೆಯಲ್ಲಿ ಬಿ. ಭೈರಪ್ಪಾಜಿ ಜಯಶಾಲಿ

1967 ರ ತಿಪಟೂರು ವಿಧಾನಸಭೆಯಲ್ಲಿ ವಿ.ಎಲ್‌. ಶಿವಪ್ಪ ವಿಜಯ

2008 ರ ಮಧುಗಿರಿ ವಿಧಾನಸಭೆಯಲ್ಲಿ ಅನಿತಾ ಕುಮಾರಸ್ವಾಮಿ ಜಯ

2008 ರ ತುರುವೇಕೆರೆ ವಿಧಾನಸಭೆಯಲ್ಲಿ ಎಂ.ಟಿ. ಕೃಷ್ಣಪ್ಪ ಜಯಶಾಲಿ

ಯಾರ ಕಾರಣಕ್ಕೆ ನಡೆದಿತ್ತು ಉಪಚುನಾವಣೆ

1. ಎಂ.ವಿ. ಕೃಷ್ಣಪ್ಪ ಅವರ ರಾಜಿನಾಮೆಯಿಂದ ನಡೆದ ಚುನಾವಣೆ

2. ಕೊರಟಗೆರೆಯಲ್ಲಿ ಗೆದ್ದಿದ್ದ ಚನ್ನಿಗಾರಾಮಯ್ಯ ರಾಜಿನಾಮೆ ನೀಡಿದ್ದರು

3. ತುರುವೇಕೆರೆಯಲ್ಲಿ ಜಯಶಾಲಿಯಾಗಿದ್ದ ಹುಚ್ಚೆಗೌಡರ ನಿಧನದಿಂದ

4. ತಿಪಟೂರಿನಲ್ಲಿ ಎಂ.ಎಸ್‌. ನೀಲಕಂಠಸ್ವಾಮಿ ಅವರ ಅಕಾಲಿಕ ಮರಣದಿಂದ

5. ಮಧುಗಿರಿಯಲ್ಲಿ ಆಪರೇಷನ್‌ ಕಮಲದಿಂದ ಡಿ.ಸಿ. ಗೌರಿಶಂಕರ್‌ ರಾಜಿನಾಮೆ

6. ತುರುವೇಕೆರೆಯಲ್ಲಿ ಆಪರೇಷನ್‌ ಕಮಲದಿಂದ ಜಗ್ಗೇಶ್‌ ರಾಜಿನಾಮೆ ನೀಡಿದ್ದರು