ಗುಬ್ಬಿ (ಆ.21):  ಕೋವಿಡ್‌ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ದುರುಪಯೋಗವಾಗಿರುವ ಬಗ್ಗೆ ತನಿಖೆ ನಡೆಸಬೇಕಿದೆ. ಆದರೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲು ಕೆಲ ಮಂತ್ರಿವರ್ಯರೇ ಪ್ರತಿಕ್ರಿಯೆ ನೀಡುತ್ತಿರುವುದು ಗಮನಿಸಿದರೆ ಮುಖ್ಯಮಂತ್ರಿಗಳನ್ನೇ ದಿಕ್ಕು ತಪ್ಪಿಸುವ ಕೆಲಸ ನಡೆದಿದೆ ಎಂದು ಕಾಂಗ್ರೆಸ್‌ ರಾಜ್ಯ ವಕ್ತಾರ ಮುರುಳೀಧರ ಹಾಲಪ್ಪ ಆರೋಪಿಸಿದರು.

ಪಟ್ಟಣದ ಚನ್ನಬಸವೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಕಾಂಗ್ರೆಸ್‌ ಘಟಕ ಆಯೋಜಿಸಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಪಿಪಿಇ ಕಿಟ್‌ ವಿತರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯನ್ನು ಸ್ಥಾನಪಲ್ಲಟ ಮಾಡಲು ಅವರಲ್ಲೇ ಗೊಂದಲ ಹೇಳಿಕೆಗಳು ಮೂಡತ್ತಿವೆ. ತನಿಖೆಗೆ ಆಗ್ರಹಿಸಿದರೆ ಸಮರ್ಥನೆಗೆ ಮುಂದಾಗಿದ್ದಾರೆ ಎಂದರು.

ಬದಲಾಗಲಿದೆ ಗ್ರಾಮೀಣ ಪ್ರದೇಶ'...

ಕೇಂದ್ರ ಮತ್ತು ರಾಜ್ಯ ಸರ್ಕಾರ ಸಲ್ಲದ ಕಾಯಿದೆ ತಿದ್ದುಪಡಿ ತಂದು ರೈತರ ಬಾಳಲ್ಲಿ ಆಟವಾಡುತ್ತಿದ್ದಾರೆ. ಈ ಬಗ್ಗೆ ಮರು ಪರಿಶೀಲನೆ ಆಗಬೇಕಿದೆ. ಎಪಿಎಂಸಿ ಕಾಯಿದೆ, ವಿದ್ಯುತ್‌ ಕಾಯಿದೆ, ಭೂ ಸುಧಾರಣೆ ಕಾಯಿದೆ ತಿದ್ದುಪಡಿಗಳು ಖಂಡನೀಯ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಆರ್‌.ರಾಮಕೃಷ್ಣಯ್ಯ ಮಾತನಾಡಿ, ಶಿರಾ ಕ್ಷೇತ್ರದ ಅಭ್ಯರ್ಥಿ ಎಂದು ಹೇಳದ ಕೆ.ಎನ್‌.ರಾಜಣ್ಣ ಅವರ ಹೇಳಿಕೆ ತಿರುಚಲಾಗಿದೆ. ಇದೇ ತಿಂಗಳ 27 ರ ನಂತರ ಅಭ್ಯರ್ಥಿ ಆಯ್ಕೆ ನಡೆಯಲಿದೆ. ನಾನು ಕಾರ್ಯಕರ್ತರೊಂದಿಗೆ ಚರ್ಚಿಸುತ್ತೇನೆ ಎಂದಷ್ಟೇ ಹೇಳಿದ್ದಾರೆ. ಕೆಪಿಸಿಸಿ ಅಂತಿಮ ತೀರ್ಮಾನ ಮಾಡಲಿದೆ. ಜಯಚಂದ್ರ ಅವರ ಬಗ್ಗೆ ಒಲವು ಇದೆ ಎಂದರು.

ಶೀಘ್ರ ಮುಂದಿನ ರಾಜಕೀಯ ನಡೆ ಪ್ರಕಟಿಸುವೆ ಎಂದ್ರು ಕೈ ಮುಖಂಡ..

ಈ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ ಆಯ್ಕೆ ಮಾಡಿದ ಕಾರ್ಯಕರ್ತರಿಗೆ ಪಿಪಿಇ ಕಿಟ್‌ ವಿತರಣೆ ಮಾಡಲಾಯಿತು. ಪ್ರತಿ ಮನೆಗೂ ತೆರಳಿ ಕೊರೋನಾ ಬಗ್ಗೆ ಪರೀಕ್ಷೆ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಲು ಸೂಚನೆ ನೀಡಲಾಯಿತು. ನಂತರ ತಾಲ್ಲೂಕು ಕಚೇರಿಗೆ ತಲುಪಿ ಜನಧ್ವನಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿಸಿಯ ಉಸ್ತುವಾರಿ ರಿಜ್ವಾನ್‌ವುಲ್ಲಾ ಖಾನ್‌, ಜಿಲ್ಲಾ ವೀಕ್ಷಕ ರೇವಣಸಿದ್ದಯ್ಯ, ಗುಬ್ಬಿ ಬ್ಲಾಕ್‌ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಕೆ.ಆರ್‌.ತಾತಯ್ಯ, ಹೊನ್ನಗಿರಿಗೌಡ, ಬಿ.ಆರ್‌.ಭರತ್‌ಗೌಡ, ಜಿ.ವಿ.ಮಂಜುನಾಥ್‌ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.