ತುಮಕೂರಿನಲ್ಲಿ ಪತ್ನಿಯ ಕಿರುಕುಳ, ಹಣಕ್ಕಾಗಿ ಪೀಡನೆ ಮತ್ತು ಎಐಎಂಐಎಂ ಮುಖಂಡನೊಂದಿಗಿನ ಆಕೆಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಫೇಸ್‌ಬುಕ್ ಲೈವ್‌ನಲ್ಲಿ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ಸಹ ಪತ್ನಿಯ ಕುಟುಂಬಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತುಮಕೂರು (ಅ.07): ಹೆಂಡತಿಯಿಂದ ನಿರಂತರವಾಗಿ ಕಿರುಕುಳ, ಹಣಕ್ಕಾಗಿ ಪೀಡನೆ ಮತ್ತು ಸಂಸದ ಓವೈಸಿ ಅವರ ಎಐಎಂಐಎಂ (AIMIM) ಪಕ್ಷದ ತುಮಕೂರು ಜಿಲ್ಲಾಧ್ಯಕ್ಷನೊಂದಿಗೆ ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಗಂಡ ಫೇಸ್‌ಬುಕ್ ಲೈವ್ ಮೂಲಕ ಸಾಯುವುದಕ್ಕಾಗಿ ವಿಷ ಸೇವಿಸಿದ ಘಟನೆ ನಡೆದಿದೆ. ತುಮಕೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯು ನಗರದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸಾಯಲು ಯತ್ನಿಸಿದ ಸಲ್ಮಾನ್ ಪಾಷ:
ಸ್ವಯಂ ಸಾವಿಗೆ ಯತ್ನಿಸಿದ ವ್ಯಕ್ತಿಯನ್ನು ಸಲ್ಮಾನ್ ಪಾಷ ಎಂದು ಗುರುತಿಸಲಾಗಿದೆ. ಇವರು ಇತ್ತೀಚೆಗೆ ಕುವೈತ್‌ನಿಂದ ಮರಳಿದ್ದರು. ಸಲ್ಮಾನ್, 4 ವರ್ಷಗಳ ಹಿಂದೆ ಸೈಯದ್ ನಿಕತ್ ಫಿರ್ದೋಸ್ ಎಂಬುವವರನ್ನು ವಿವಾಹವಾಗಿದ್ದರು. ಮದುವೆಯ ನಂತರ 2 ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದರು. 2ನೇ ಮಗುವಿಗೆ ಪತ್ನಿ ಗರ್ಭಿಣಿಯಾದಾಗ, ಸಲ್ಮಾನ್ ಮತ್ತೆ ಕುವೈತ್‌ನಲ್ಲಿ ಹೈಡ್ರಾಲಿಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುವುದಕ್ಕೆ ತೆರಳಿದ್ದರು.
ವಿದೇಶಕ್ಕೆ ತೆರಳಿದ ಬಳಿಕ ಶುರುವಾದ ಸಂಕಟ:
ಸಲ್ಮಾನ್ ವಿದೇಶಕ್ಕೆ ಹೋದ ನಂತರ ಪತ್ನಿ ತವರು ಮನೆಗೆ ತೆರಳಿದ್ದಳು. ಆ ಬಳಿಕ ಗಂಡ ಕುವೈತ್‌ನಿಂದ ವಾಪಸ್ ಬಂದರೂ ಪತಿ-ಪತ್ನಿಯರ ಸಂಸಾರದಲ್ಲಿ ಬಿರುಕು ಮೂಡಿ, ನಿತ್ಯ ಜಗಳ ಆರಂಭವಾಯಿತು. ಪತ್ನಿ ಸೈಯದ್ ನಿಕತ್ ಫಿರ್ದೋಸ್, ಆಕೆಯ ಕುಟುಂಬದವರು ಮತ್ತು ಆಕೆಯ ಸಂಬಂಧಿ ಹಾಗೂ ಸಂಸದ ಓವೈಸಿ ಅವರ ಎಐಎಂಐಎಂ (AIMIM) ಪಕ್ಷದ ತುಮಕೂರು ಜಿಲ್ಲಾಧ್ಯಕ್ಷನೂ ಆಗಿರುವ ಸೈಯದ್ ಬುರ್ಹಾನ್ ಉದ್ದೀನ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ, ಸೈಯದ್ ಬುರ್ಹಾನ್ ಉದ್ದೀನ್ ಅವರಿಂದ ಸಲ್ಮಾನ್‌ಗೆ ತೀವ್ರ ಕಿರುಕುಳ ಆರಂಭವಾಯಿತು ಎಂದು ಆರೋಪಿಸಲಾಗಿದೆ. ರಾಜಕೀಯ ಪ್ರಭಾವವನ್ನು ಬಳಸಿ ಆತ ಕಿರುಕುಳ ನೀಡಲು ಬೆಂಬಲ ನೀಡುತ್ತಿದ್ದಾನೆ ಎಂದು ಸಲ್ಮಾನ್ ತಾಯಿ ಗಂಭೀರ ಆರೋಪ ಮಾಡಿದ್ದಾರೆ.
ಹಣ, ವಿಚ್ಛೇದನ ಮತ್ತು ಅಕ್ರಮ ಸಂಬಂಧದ ಆರೋಪ:
ಸಲ್ಮಾನ್‌ಗೆ ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಪತ್ನಿ ನಿರಂತರವಾಗಿ ಪೀಡಿಸಿದ್ದಳು. ಹಣ ಕೊಡದಿದ್ದರೆ ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದಳು ಎನ್ನಲಾಗಿದೆ. ಹಣಕಾಸಿನ ಕಿರುಕುಳಕ್ಕೆ ಸಂಬಂಧಿ ಬುರ್ಹಾನ್ ಸಹ ಕೈಜೋಡಿಸಿದ್ದಾನೆ. ಇದರ ಜೊತೆಗೆ, ಪತ್ನಿ ಮತ್ತು ಬುರ್ಹಾನ್ ನಡುವೆ ಅಕ್ರಮ ಸಂಬಂಧ ಇರುವುದಾಗಿಯೂ ಸಲ್ಮಾನ್ ಗಂಭೀರ ಆರೋಪ ಮಾಡಿದ್ದಾರೆ. ವಿದೇಶದ ಕೆಲಸ ಬಿಟ್ಟು ತುಮಕೂರಿಗೆ ಮರಳಿದರೂ, ಪತ್ನಿ ಅವರಿಗೆ ಇಬ್ಬರು ಮಕ್ಕಳನ್ನು ತೋರಿಸಲು ನಿರಾಕರಿಸಿದ್ದಳು. ಇದರಿಂದ ತೀವ್ರವಾಗಿ ನೊಂದು, ನ್ಯಾಯ ಸಿಗದಿರುವ ಆಕ್ರೋಶದಲ್ಲಿ ಸಲ್ಮಾನ್ ಪಾಷ ಫೇಸ್‌ಬುಕ್ ಲೈವ್‌ನಲ್ಲಿ ಸಾವಿಗೆ ಯತ್ನಿಸಿದ್ದಾರೆ.
ಪೊಲೀಸರ ಮೇಲೂ ಆರೋಪ, ಎಸ್ಪಿ ಕಚೇರಿಗೆ ದೂರು:
ಗಂಡ-ಹೆಂಡತಿ ಕುಟುಂಬದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಸಮಸ್ಯೆ ಬಗೆಹರಿದಿರಲಿಲ್ಲ. ಇನ್ನು, ತುಮಕೂರು ಮಹಿಳಾ ಠಾಣೆಯ ಪೊಲೀಸರು ಸಹ ಹೆಂಡತಿ ಕುಟುಂಬಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ ಸಲ್ಮಾನ್, ಇದೇ ಕಾರಣಕ್ಕೆ ಸಾಯಲು ಪ್ರಯತ್ನಿಸಿದ್ದಾರಂತೆ. ಈ ಹಿಂದೆ ಸಂಬಂಧಿಕರ ನಡುವಿನ ಜಗಳದಲ್ಲಿ ಸುಳ್ಳು ಕೇಸ್ ಹಾಕಿಸಿ ತನ್ನನ್ನು ಜೈಲಿಗೂ ಕಳುಹಿಸಲಾಗಿತ್ತು ಎಂದು ಸಲ್ಮಾನ್ ದೂರಿದ್ದಾರೆ. ಸಾಯಲು ಯತ್ನಿಸಿ ಅಸ್ವಸ್ಥರಾದ ಸಲ್ಮಾನ್‌ರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ, ಸಲ್ಮಾನ್ ಪಾಷ ಅವರ ಕುಟುಂಬಸ್ಥರು ಎಸ್ಪಿ ಕಚೇರಿಗೆ ದೂರು ನೀಡಿದ್ದು, ನ್ಯಾಯಯುತ ತನಿಖೆಗೆ ಆಗ್ರಹಿಸಿದ್ದಾರೆ.
