ಕಲಬುರಗಿಯ ಉಡಚಣ ಮಠದ ಆವರಣದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದ ಶಾಂತಲಿಂಗ ಸ್ವಾಮೀಜಿ ಬಂಧನವಾಗಿದೆ. ವಿವಾದಿತ ಸ್ವಾಮೀಜಿಯ ಬಂಧನದ ಹಿಂದಿನ ಕಾರಣ, ವೈರಲ್ ವಿಡಿಯೋ ಬಗ್ಗೆ ಪೂರ್ಣ ಮಾಹಿತಿ ತಿಳಿಯಿರಿ.

ಕಲಬುರಗಿ (ಡಿ.23): ಉಡಚಣ ಮಠದ ಆವರಣದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಮಠದ ಶ್ರೀ ಶಾಂತಲಿಂಗ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆ (Arms Act) ಉಲ್ಲಂಘನೆಯಡಿ ಸ್ವಾಮೀಜಿಯನ್ನು ತಡರಾತ್ರಿ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿದಿದೆ.

ಘಟನೆಯ ಹಿನ್ನೆಲೆ

ಕಳೆದ ಎರಡು ದಿನಗಳ ಹಿಂದೆ ಮಠದ ಆವರಣದಲ್ಲಿ ಸ್ವಾಮೀಜಿಯು ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ವಿರೋಧಿಗಳಿಗೆ ಎಚ್ಚರಿಕೆ ನೀಡುವಂತೆ 'ಬಿಲ್ಡಪ್' ಕೊಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸ್ವಾಮೀಜಿಯ ಈ ಉದ್ದಟತನದ ವರ್ತನೆಯನ್ನು ವಿರೋಧಿಸಿ ಉಡಚಣ ಗ್ರಾಮಸ್ಥರು ರಾತ್ರೋರಾತ್ರಿ ಪ್ರತಿಭಟನೆಗೆ ಇಳಿದಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಅಫಜಲಪುರ ಪೊಲೀಸರು ಮಠಕ್ಕೆ ದಾಳಿ ನಡೆಸಿ, ಸ್ವಾಮೀಜಿ ಹಾಗೂ ಅವರು ಬಳಸಿದ್ದ ಗನ್ ಅನ್ನು ವಶಕ್ಕೆ ಪಡೆದಿದ್ದಾರೆ.

ಹಳೆ ಚಾಳಿ ಬಿಡದ ಸ್ವಾಮಿ

ಈ ಶಾಂತಲಿಂಗ ಸ್ವಾಮೀಜಿಯ ಇತಿಹಾಸವೇ ವಿವಾದಗಳಿಂದ ಕೂಡಿದೆ. ಸುಮಾರು ಎಂಟು ತಿಂಗಳ ಹಿಂದೆ ಇದೇ ಸ್ವಾಮೀಜಿ ಮದ್ಯಪಾನ ಮಾಡಿ ಅತಿ ವೇಗವಾಗಿ ಕಾರ್ ಚಲಾಯಿಸಿ ಅಪಘಾತ ಮಾಡಿದ್ದರು. ಆ ಸಮಯದಲ್ಲಿ ಅವರು ನಿಲ್ಲಲೂ ಆಗದಷ್ಟು ನಶೆಯಲ್ಲಿದ್ದು, ಲುಂಗಿ ಬಿಚ್ಚಿಕೊಂಡು ರಸ್ತೆಯಲ್ಲಿ ಅಡ್ಡಾಡುತ್ತಿದ್ದ ವಿಡಿಯೋ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಆ ಘಟನೆಯ ಬಳಿಕ ಮಠದಿಂದ ದೂರವಿದ್ದ ಇವರು, ಕಳೆದ ನವೆಂಬರ್‌ನಲ್ಲಿ ನಡೆದ ಮಠದ ಜಾತ್ರೆಗಾಗಿ ಮತ್ತೆ ಮಠಕ್ಕೆ ಮರಳಿದ್ದರು.

ವಿರೋಧಿಗಳಿಗೆ ಬೆದರಿಕೆ

ಜಾತ್ರೆಗೆ ಮರಳಿದ ನಂತರ ಸುಧಾರಿಸಿಕೊಳ್ಳುವ ಬದಲು ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದ್ದರು. ತನ್ನ ವಿರೋಧಿಗಳಿಗೆ ಭಯ ಹುಟ್ಟಿಸುವ ಉದ್ದೇಶದಿಂದ ಬಂದೂಕು ಪ್ರದರ್ಶನ ಮಾಡಿ, ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇದು ಗ್ರಾಮಸ್ಥರ ತಾಳ್ಮೆ ಕೆಡಿಸಿತ್ತು. ಸದ್ಯ ಪೊಲೀಸರು ಆರ್ಮ್ಸ್ ಆಕ್ಟ್ ರೂಲ್ಸ್ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಿದ್ದು, ಸ್ವಾಮೀಜಿಯ ಪರವಾನಗಿ ರದ್ದುಗೊಳಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಒಬ್ಬ ಧರ್ಮಗುರುವಾಗಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ವ್ಯಕ್ತಿ, ಪದೇ ಪದೇ ಕಾನೂನು ಉಲ್ಲಂಘಿಸಿ ಜೈಲು ಪಾಲಾಗುತ್ತಿರುವುದು ಭಕ್ತ ವಲಯದಲ್ಲಿ ತೀವ್ರ ಮುಜುಗರ ಉಂಟುಮಾಡಿದೆ.