ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ ಮೃತಪಟ್ಟ ಮನೋಜ್‌ನ ಅಜ್ಜಿ ದೇವಿರಮ್ಮ, ಮೊಮ್ಮಗನ ಸಾವಿನ ದುಃಖ ತಾಳಲಾರದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ನಾಗಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ತುಮಕೂರು (ಜೂ. 9): ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಮನೋಜ್ (33) ಎಂಬ ಯುವಕನ ಸಾವಿನ ದುಃಖ ತಾಳಲಾರದೆ, ಅವನ ಅಜ್ಜಿ ದೇವಿರಮ್ಮ (70) ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆಯಿಂದಾಗಿ ದುರಂತದ ಮೃತರ ನೋವು ಮತ್ತಷ್ಟು ದುಃಖವನ್ನೇ ಮರುಕಳಿಸುವಂತೆ ಮಾಡುತ್ತಿದೆ. ಮೃತ ದೇವಿರಮ್ಮ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಾಗಸಂದ್ರ ಗ್ರಾಮದ ನಿವಾಸಿಯಾಗಿದ್ದರು.

ಅಜ್ಜಿಯ ದುಃಖದ ಹಿನ್ನೆಲೆ:

ಆರ್‌ಸಿಬಿ ಜಯೋತ್ಸವದ ವೇಳೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈದಾಗಿ ಉಂಟಾದ ಜನಸಮುದಾಯದ ತೀವ್ರ ಕಾಲ್ತುಳಿತದಲ್ಲಿ ಯುವಕ ಮನೋಜ್ ಮೃತಪಟ್ಟಿದ್ದನು. ಈ ಸುದ್ದಿ ಮನೋಜ್‌ ಕುಟುಂಬವನ್ನು ಶೋಕಸಾಗರಕ್ಕೆ ಎಳೆದಿತ್ತು. ಮನೋಜ್‌ನ ಸಾವಿನ ಸುದ್ದಿ ಕೇವಲ ಕುಟುಂಬವನ್ನೇ ಅಲ್ಲ, ಇಡೀ ಊರನ್ನೇ ದುಃಖದಲ್ಲಿ ಮುಳುಗಿಸಿತ್ತು. ಅವನ ಅಜ್ಜಿ ದೇವಿರಮ್ಮ, ಮೊಮ್ಮಗನ ಮರಣ ಸುದ್ದಿ ಕೇಳಿದ ಬಳಿಕದಿಂದಲೇ ಊಟ ನೀರಿಗೂ ಕೈಹಾಕದೆ, ನಿರಂತರವಾಗಿ ನೋವಿನ ಶೋಕದಲ್ಲಿಯೇ ಮುಳುಗಿದ್ದರು. ತಾನು ಎತ್ತಿ ಆಡಿಸಿದ ಮೊಮ್ಮಗನ ಜೀವನ ಒಂದು ಸ್ಥಿತಿಗೆ ತಲುಪುವ ಮುನ್ನವೇ ದುರಂತ ಸಾವಿಗೀಡಾಗಿದ್ದಕ್ಕೆ ಭಾರೀ ನೊಂದುಕೊಂಡಿದ್ದರು.

ಮೊಮ್ಮಗನ ಸಾವಿನ ಶೋಕದಿಂದ ಅಜ್ಜಿ ದೇವೀರಮ್ಮ ಊಟವನ್ನೂ ಬಿಟ್ಟಿದ್ದರಿಂದ ದೈಹಿಕವಾಗಿ ಕುಸಿದಿದ್ದರು. ಸೋಮವಾರ ಇಂದು ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಒಂದೇ ಕುಟುಂಬದಲ್ಲಿ ಎರಡು ಮರಣಗಳು ಸಂಭವಿಸಿದ ಹಿನ್ನೆಲೆ, ನಾಗಸಂದ್ರ ಗ್ರಾಮದ ಜನತೆ ತೀವ್ರವಾಗಿ ದುಃಖಿತರಾಗಿದ್ದಾರೆ. ಮೊಮ್ಮಗನ ಮರಣದ ನೋವಿನಿಂದ ನೊಂದ ಅಜ್ಜಿ ಜೀವ ತ್ಯಾಗ ಮಾಡಿದ ಘಟನೆ ಇಡೀ ರಾಜ್ಯದಲ್ಲಿ ತೀವ್ರ ಭಾವುಕತೆಯನ್ನು ಮೂಡಿಸಿದೆ.