ವರದಿ : ಉಗಮ ಶ್ರೀನಿವಾಸ್‌

 ತುಮಕೂರು (ಅ.08): ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್‌ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸುವುದರೊಂದಿಗೆ ಜಿಲ್ಲೆಯ ಜನತೆ ಮೂರನೇ ಬಾರಿಗೆ ಮಹಿಳೆಗೆ ಮಣೆ ಹಾಕುತ್ತದೆಯೇ ಎಂಬ ನಿರೀಕ್ಷೆ ಹೆಚ್ಚಾಗಿದೆ.

1952 ರಿಂದ ಆರಂಭವಾಗಿ ಇಲ್ಲಿಯ ತನಕ ನಡೆದ ಚುನಾವಣೆಯಲ್ಲಿ ವಿಧಾನಸಭೆಗೆ ಮಹಿಳೆಯರು ಆಯ್ಕೆಯಾಗಿರುವುದು ಎರಡು ಸಲ ಮಾತ್ರ. 1962 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನಿಂದ ಸ್ಪರ್ಧಿಸಿದ್ದ ಜಿ.ಸಿ. ಭಾಗೀರಥಮ್ಮ ಅವರು ಆಯ್ಕೆಯಾಗಿದ್ದರು. ಅಂದು ನಡೆದ ಚುನಾವಣೆಯಲ್ಲಿ ಭಾಗೀರಥಮ್ಮನವರು 15 ಸಾವಿರದ 178 ಮತಗಳನ್ನು ಪಡೆದು ಜಿಲ್ಲೆಯಿಂದ ಶಾಸನಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿ.ಎಸ್‌. ಮಲ್ಲಿಕಾರ್ಜುನಯ್ಯ ಅವರು 10 ಸಾವಿರದ 919 ಮತಗಳನ್ನು ಪಡೆದು ಪರಾಭವಗೊಂಡರು.

ಬಿಜೆಪಿ ಬಂಡಾಯ ಅಭ್ಯರ್ಥಿ ಬಳಿ ಸ್ವಲ್ಪವೂ ಚಿನ್ನ​ವಿ​ಲ್ಲ .

ಇದಾದ ಬಳಿಕ ಮತ್ತೆ ಮಹಿಳೆಯೊಬ್ಬರು ಆಯ್ಕೆಯಾಗಲು ಬರೋಬ್ಬರಿ 46 ವರ್ಷಗಳೇ ಬೇಕಾಯಿತು. 2008 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಮಾಜಿ ಸಚಿವ ಸಿ. ಚನ್ನಿಗಪ್ಪ ಅವರ ಪುತ್ರ ಗೌರಿಶಂಕರ್‌ ಜೆಡಿಎಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ಆಪರೇಷನ್‌ ಕಮಲಕ್ಕೆ ತುತ್ತಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಆಗ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಿದರು. ಆ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು ಆಯ್ಕೆಯಾಗುವುದರೊಂದಿಗೆ ಎರಡನೇ ಬಾರಿಗೆ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಗೆಲುವು ಸಾಧಿಸಿದರು.

ಅಂದಿನ ಚುನಾವಣೆಯಲ್ಲಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಅವರು 49768 ಮತಗಳನ್ನು ಪಡೆದು ಜಯಗಳಿಸಿದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಎನ್‌. ರಾಜಣ್ಣ ಅವರು 46 ಸಾವಿರದ 287 ಮತಗಳನ್ನು ಪಡೆದು ಸೋಲನ್ನು ಅನುಭವಿಸಬೇಕಾಯಿತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ. ಚನ್ನಿಗಪ್ಪ ಅವರು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಈಗ ಶಿರಾ ಶಾಸಕರಾಗಿದ್ದ ಬಿ. ಸತ್ಯನಾರಾಯಣ ಅವರ ನಿಧನದಿಂದ ನಡೆಯುತ್ತಿರುವ ಉಪಚುನಾವಣೆಗೆ ಜೆಡಿಎಸ್‌ ಪಕ್ಷ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ ಮೂರನೇ ಬಾರಿಗೆ ಮಹಿಳೆಯೊಬ್ಬರಿಗೆ ಶಿರಾ ಕ್ಷೇತ್ರದ ಮತದಾರರು ಮಣೆ ಹಾಕುತ್ತಾರೆಯೇ ಎಂಬ ಪ್ರಶ್ನೆ ಎದ್ದಿದೆ.

ಪರಿಷತ್‌ ಚುನಾವಣೆ: 17 ನಾಮಪತ್ರ ಸಲ್ಲಿಕೆ ..

ಈ ಮಧ್ಯೆ ಮಹಿಳೆಯರು ಪ್ರಮುಖ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದರೂ ಗೆಲುವು ಸಾಧಿಸಿರಲಿಲ್ಲ. 1963 ರಲ್ಲಿ ತುರುವೇಕೆರೆ ಶಾಸಕರಾಗಿದ್ದ ಹುಚ್ಚೇಗೌಡರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಿ.ಹೆಚ್‌. ಪದ್ಮಾವತಿ ಅವರನ್ನು ಕಣಕ್ಕಳಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಅವರು 13238 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದರು. 1967 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಭಾಗೀರಥಮ್ಮನವರು ಪರಾಭವಗೊಂಡರು. ಆ ಚುನಾವಣೆಯಲ್ಲಿ ಭಾಗೀರಥಮ್ಮ ಅವರ 7938 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದರು. ಆಗ ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯ ಬಿ.ಪಿ. ಗಂಗಾಧರ್‌ ಗೆಲುವು ಸಾಧಿಸಿದ್ದರು.

1984 ರ ಚುನಾವಣೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ ಮಾಜಿ ಸಚಿವ ಟಿ.ಎಂ. ಮಂಜುನಾಥ್‌ ಅವರ ಪತ್ನಿ ಅನ್ನಪೂರ್ಣ ಮಂಜುನಾಥ್‌ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಅನ್ನಪೂರ್ಣ ಅವರು 27 ಸಾವಿರದ 708 ಮತ ಪಡೆದು ಪರಾಭವಗೊಂಡರು.

1985 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಆಲಿಯಾ ಬೇಗಂ ಅವರಿಗೆ ಪಕ್ಷದ ಟಿಕೆಟ್‌ ನೀಡಿತ್ತು. ಆ ಚುನಾವಣೆಯಲ್ಲಿ ಆಲಿಯಾ ಅವರು 26 ಸಾವಿರದ911 ಮತಗಳನ್ನು ಪಡೆದು ಪರಾಭವಗೊಂಡರು. ಆ ಚುನಾವಣೆಯಲ್ಲಿ ಮತದಾರರು ಲಕ್ಷ್ಮೇನರಸಿಂಹಯ್ಯ ಅವರನ್ನು ಗೆಲ್ಲಿಸಿದ್ದರು.

2004ರ ಚುನಾವಣೆಯಲ್ಲಿ ಹುಲಿಯೂರು ದುರ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಅನುಸೂಯಮ್ಮ ಅವರು ಪರಾಭವಗೊಂಡಿದ್ದರು. ಆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಡಿ. ನಾಗರಾಜಯ್ಯ ಅವರು 27848 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ ಅನುಸೂಯಮ್ಮ ಅವರು 23 ಸಾವಿರದ 106 ಮತಗಳನ್ನು ಪಡೆದು ಪರಾಭವಗೊಂಡರು.

ಮುಖ್ಯಾಂಶಗಳು

1. ಮೊದಲ ಗೆಲುವಿಗೂ, ಎರಡನೇ ಗೆಲುವಿಗೂ 46 ವರ್ಷ ಅಂತರ

2. ಒಮ್ಮೆ ಸಾರ್ವತ್ರಿಕ, ಮತ್ತೊಮ್ಮೆ ಉಪಚುನಾವಣೆಯಲ್ಲಿ ಮಹಿಳೆಗೆ ಮಣೆ

3. ಮಾಜಿ ಸಚಿವರ ಪತ್ನಿಯರು ಕೂಡ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ

ಸೋತ ಪ್ರಮುಖ ಮಹಿಳೆಯರು

1. 1963ರಲ್ಲಿ ತುರುವೇಕೆರೆಯಲ್ಲಿ ಪದ್ಮಾವತಿ

2. 1967ರಲ್ಲಿ ತುಮಕೂರಿನಲ್ಲಿ ಭಾಗೀರಥಮ್ಮ

3. 1984ರಲ್ಲಿ ತಿಪಟೂರಿನಲ್ಲಿ ಅನ್ನಪೂರ್ಣ ಮಂಜುನಾಥ್‌

4. 1985ರಲ್ಲಿ ತುಮಕೂರಿನಿಂದ ಆಲಿಯಾ ಬೇಗಂ

5. 2004ರಲ್ಲಿ ಹುಲಿಯೂರುದುರ್ಗದಿಂದ ಅನುಸೂಯಮ್ಮ