Asianet Suvarna News Asianet Suvarna News

ಪರಿಷತ್‌ ಚುನಾವಣೆ: 17 ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ನಡೆಯುವ ಪರಿಷತ್ ಚುನಾವಣೆಗೆ 17 ನಾಮಪತ್ರ ಸಲ್ಲಿಕೆಯಾಗಿವೆ. ಅದರಲ್ಲಿ ಹಲವು ಮಂದಿ ಕೋಟ್ಯದೀಶರಾಗಿದ್ದಾರೆ

17 nomination Filed For Parishat Election in Karnataka
Author
Bengaluru, First Published Oct 8, 2020, 8:03 AM IST

 ಬೆಂಗಳೂರು (ಅ.08):  ವಿಧಾನ ಪರಿಷತ್ತಿಗೆ ಅ.28ಕ್ಕೆ ನಡೆಯಲಿರುವ ಚುನಾವಣೆಗೆ ಬುಧವಾರ ರಾಜ್ಯದಲ್ಲಿ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 3 ನಾಮಪತ್ರಗಳು ಸಲ್ಲಿಕೆಯಾಗಿದ್ದರೆ, ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದಲ್ಲಿ ಮತ್ತು ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ತಲಾ 7 ನಾಮಪತ್ರಗಳು ಸಲ್ಲಿಸಲ್ಪಟ್ಟಿವೆ.

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಆರ್‌.ಚೌಡರೆಡ್ಡಿ ತೂಪಲ್ಲಿ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಮೇಶ್‌ಬಾಬು, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶ್ರೀನಿವಾಸ್‌ ಅವರು ಬೆಂಗಳೂರಿನಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆರ್‌.ಚೌಡರೆಡ್ಡಿ ತೂಪಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ವಿಧಾನಪರಿಷತ್‌ ಸದಸ್ಯರಾದ ಬಸವರಾಜ್‌ ಹೊರಟ್ಟಿ, ರಮೇಶ್‌ಗೌಡ ಇತರರು ಉಪಸ್ಥಿತರಿದ್ದರು.

ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ಶಶೀಲ ಜಿ.ನಮೋಶಿ, ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರು, ಜೆಡಿಎಸ್‌ನಿಂದ ತಿಮ್ಮಯ್ಯ ಪುರ್ಲೆ ಕಲಬುರಗಿಯಲ್ಲಿ ಒಟ್ಟು 7 ನಾಮಪತ್ರ ಸಲ್ಲಿಸಿದ್ದಾರೆ. ಇದೇವೇಳೆ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನಿಂದ ಆರ್‌.ಎಂ. ಕುಬೇರಪ್ಪ, ಬಿಜೆಪಿಯಿಂದ ಎಸ್‌.ವಿ.ಸಂಕನೂರ, ಜೆಡಿಎಸ್‌ನಿಂದ ಶಿವಶಂಕರ ಕಲ್ಲೂರ, ಆಜಾದ್‌ ಮಜ್ದೂರ್‌ ಕಿಸಾನ್‌ ಪಾರ್ಟಿ ಅಭ್ಯರ್ಥಿಯಾಗಿ ಪ್ರಕಾಶ ಕಾಂಬಳೆ ನಾಮಪತ್ರ ಸಲ್ಲಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ಶಿವಕುಮಾರ್‌ ತಳವಾರ, ಬಸವರಾಜ ತೇರದಾಳ, ಚರಣರಾಜ್‌ ಕೆ.ಎ.ನಾಮಪತ್ರ ಸಲ್ಲಿಸಿದ್ದಾರೆ. ಶಶೀಲ ಜಿ.ನಮೋಶಿ ನಾಮಪತ್ರ ಸಲ್ಲಿಸುವ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. ಕಾಂಗ್ರೆಸ್‌ನ ಶರಣಪ್ಪ ಮಟ್ಟೂರು ನಾಮಪತ್ರ ಸಲ್ಲಿಸುವ ವೇಳೆ ಶಾಸಕರಾದ ಪ್ರಿಯಾಂಕ್‌ ಖರ್ಗೆ, ಡಾ.ಅಜಯ್‌ ಸಿಂಗ್‌ ಇದ್ದರು.

ಅ.8ರಂದು ಈ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಗುರುವಾರವೂ ಕೆಲವು ನಾಮಪತ್ರಗಳು ಸಲ್ಲಿಕೆಯಾಗುವ ಸಾಧ್ಯತೆಗಳಿವೆ. ಅ.9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.12ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ.

RR ನಗರ ಬೈ ಎಲೆಕ್ಷನ್: ಟಿಕೆಟ್ ಘೋಷಣೆ ಬೆನ್ನಲ್ಲೇ ಪಣತೊಟ್ಟ ಕಾಂಗ್ರೆಸ್ ಅಭ್ಯರ್ಥಿ

3.23 ಕೋಟಿ ಆಸ್ತಿ ಒಡೆಯ ಕುಬೇರಪ್ಪ

ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿರುವ ಆರ್‌.ಎಂ.ಕುಬೇರಪ್ಪ ಒಟ್ಟು . 3.23 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಕೈಯಲ್ಲಿ 5 ಲಕ್ಷ ರು. ನಗದು, 30 ಗ್ರಾಂ ಚಿನ್ನಾಭರಣ, ವಿವಿಧ ಮೂಲಗಳಿಂದ ಒಟ್ಟು 71 ಲಕ್ಷ  ರು. ಚರಾಸ್ತಿ ಹೊಂದಿದ್ದಾರೆ. ಪತ್ನಿ ಅನಿತಾ ಹೆಸರಿನಲ್ಲಿ 45 ಲಕ್ಷ ಚರಾಸ್ತಿ ಹೊಂದಿದ್ದು ಒಟ್ಟು 1.28 ಕೋಟಿ ಚರಾಸ್ತಿ ಹೊಂದಿದ್ದಾರೆ. ಕುಬೇರಪ್ಪ ಹೆಸರಿನಲ್ಲಿ 1.35 ಕೋಟಿ ಚಿರಾಸ್ತಿ, ಪತ್ನಿ ಹೆಸರಿನಲ್ಲಿ 60 ಲಕ್ಷ ಚಿರಾಸ್ತಿ ಸೇರಿ ಒಟ್ಟು 1.95 ಕೋಟಿ ರು. ಚಿರಾಸ್ತಿ ಇದೆ.

ಎಸ್‌.ವಿ.ಸಂಕನೂರು ಸಹ ಕೋಟ್ಯಾಧೀಶ

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಎಸ್‌.ವಿ.ಸಂಕನೂರು ಚರಾಸ್ತಿ, ಚರಾಸ್ತಿ ಸೇರಿ ಒಟ್ಟು 1.28 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದಾರೆ. ಸಂಕನೂರು ಬಳಿ 50 ಸಾವಿರ ನಗದು, ಪತ್ನಿ ಶರಣಮ್ಮ ಬಳಿ 5 ಸಾವಿರ ರು. ನಗದು ಸೇರಿ ಒಟ್ಟು 29 ಲಕ್ಷ ಚರಾಸ್ತಿ ಹೊಂದಿದ್ದಾರೆ. ಕೃಷಿ ಭೂಮಿ, ಕೃಷಿಯೇತರ ಭೂಮಿ ಸೇರಿ ಒಟ್ಟು 92 ಲಕ್ಷ ರು. ಚರಾಸ್ತಿ ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 18.5 ಲಕ್ಷ ರು. ಸಾಲವಿದೆ.

Follow Us:
Download App:
  • android
  • ios