ಶಿರಾ (ಸೆ.28):  ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಕ್ಷೇತ್ರದಾದ್ಯಂತ ಈಗಾಗಲೇ ಬೂತ್‌ಮಟ್ಟದ ಸಭೆಗಳನ್ನು ನಡೆಸುತ್ತಿದೆ. ಆದರೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಹೊರಗಿನವರ ಹೆಸರು ಕೇಳಿಬರುತ್ತಿರುವುದರಿಂದ ಕಾರ್ಯಕರ್ತರು ಎಸ್‌.ಆರ್‌. ಗೌಡ ಅವರಿಗಾಗಲೀ ಅಥವಾ ಬಿ.ಕೆ. ಮಂಜುನಾಥ್‌ ಅವರಿಗಾಗಲೀ ಟಿಕೆಟ್‌ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ ಬಿ.ಕೆ.ಮಂಜುನಾಥ್‌ ಅವರಿಗೆ ಬಿಜೆಪಿ ಮೊದಲು ಟಿಕೆಟ್‌ ಘೋಷಣೆಯಾಯಿತು. ನಂತರ ಎಸ್‌.ಆರ್‌.ಗೌಡ ಅಭಿಮಾನಿಗಳು ಟಿಕೆಟನ್ನು ಎಸ್‌.ಆರ್‌.ಗೌಡ ಅವರಿಗೆ ನೀಡಬೇಕು ಎಂದು ಒತ್ತಾಯ ಮಾಡಿದರು. ಇದಾದ ಬಳಿಕ ಬಿ.ಕೆ. ಮಂಜುನಾಥ್‌ ಅವರು ನನಗೆ ಟಿಕೆಟ್‌ ಬೇಡ ಎಂದರು. ನಂತರ ಎಸ್‌.ಆರ್‌.ಗೌಡ ಅವರಿಗೆ ಟಿಕೆಟ್‌ ನೀಡಲಾಯಿತು. ಈ ರೀತಿಯ ಗೊಂದಲದ ನಡುವೆ ಚುನಾವಣೆ ಎದುರಿಸಿದ ಎಸ್‌.ಆರ್‌.ಗೌಡ ಅವರು ಎಲ್ಲಾ ರೀತಿಯ ಶ್ರಮ ಹಾಕಿದರು ವಿಜಯ ಸಾಧಿ​ಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಕ್ಷೇತ್ರದಲ್ಲಿನ ಚರ್ಚೆಗಳು ಬಿ.ಕೆ.ಮಂಜುನಾಥ್‌ ಅವರು ಮನಿಸಿಕೊಂಡು ತಟಸ್ಥವಾದರು. ಹಾಗೂ ಸಿ.ಎಂ.ನಾಗರಾಜು ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತರು ಇವೆಲ್ಲಾ ಅಡೆತಡೆಗಳಿಂದ ಬಿಜೆಪಿ ಮೂರನೇ ಸ್ಥಾನ ಪಡೆಯಿತು.

ಶಿರಾ ಉಪಚುನಾವಣೆ ಮೇಲೆ ತ್ರಿಪಕ್ಷಗಳ ಕಣ್ಣು! ನಡೆದಿದೆ ರಣತಂತ್ರ

ಇಬ್ಬರಲ್ಲಿ ಯಾರಿಗಾದರೂ ಕೊಡಿ: ಈ ಬಾರಿಯ ವಿಧಾನಸಭಾ ಉಪಚುನಾವಣೆಯಲ್ಲಿ ಬೇರೆಯದ್ದೇ ಚರ್ಚೆ ನಡೆಯುತ್ತಿದೆ. ಕಳೆದ ಬಾರಿ ಎಸ್‌.ಆರ್‌.ಗೌಡ ಅಭಿಮಾನಿಗಳು ಎಸ್‌.ಆರ್‌.ಗೌಡ ಅವರಿಗೆ ಟಿಕೆಟ್‌ ನೀಡಿ ಎಂದರೆ, ಬಿ.ಕೆ.ಮಂಜುನಾಥ್‌ ಅಭಿಮಾನಿಗಳು ಬಿ.ಕೆ.ಮಂಜುನಾಥ್‌ ಅವರಿಗೆ ಟಿಕೆಟ್‌ ನೀಡಿ ಎನ್ನುತ್ತಿದ್ದರು. ಆದರೆ ಈ ಬಾರಿಯ ವಿಧಾನಸಭಾ ಉಪಚುನಾವಣೆಯಲ್ಲಿ ಎಸ್‌.ಆರ್‌.ಗೌಡ ಹಾಗೂ ಬಿ.ಕೆ.ಮಂಜುನಾಥ್‌ ಅವರ ಎರಡೂ ಕಡೆಯ ಬೆಂಬಲಿಗರೂ ಬೇರೆಯದ್ದೇ ರೀತಿಯಲ್ಲಿ ಬೇಡಿಕೆ ಇಡುತ್ತಿದ್ದಾರೆ. ಎಸ್‌.ಆರ್‌.ಗೌಡ ಅವರಿಗಾಗಲಿ, ಇಲ್ಲವೆ ಬಿ.ಕೆ.ಮಂಜುನಾಥ್‌ ಅವರಿಗಾಗಲಿ ಯಾರಿಗಾದರೂ ಟಿಕೆಟ್‌ ನೀಡಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಿ ಎನ್ನುತ್ತಿದ್ದಾರೆ. ಈ ಮೂಲಕ ಹೊರಗಿನವರಿಗೆ ಟಿಕೆಟ್‌ ನೀಡಿದರೆ ನಮ್ಮ ವಿರೋಧವಿದೆ ಎಂಬುದನ್ನು ಬೇರೆ ರೀತಿಯಲ್ಲಿ ತೋರ್ಪಡಿಸುತ್ತಿದ್ದಾರೆ. ಒಂದು ವೇಳೆ ಬೇರೆ ಪಕ್ಷದವರಿಗಾಗಲಿ, ಹೊರಗಿನಿಂದ ಬಂದ ಅಭ್ಯರ್ಥಿಗಾಗಲಿ ಬಿಜೆಪಿಯಿಂದ ಟಿಕೆಟ್‌ ನೀಡಿದರೆ ನಮ್ಮ ಬೆಂಬಲ ಇಲ್ಲ ಎಂದು ಹೇಳುತ್ತಿದ್ದಾರೆ.

ಎಸ್‌.ಆರ್‌.ಗೌಡ: ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾಗಿರುವ ಎಸ್‌.ಆರ್‌.ಗೌಡ ಅವರು ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಆದರೂ ಅಂದಿನಿಂದಲೂ ಜನರ ಸೇವೆಯಲ್ಲಿ ನಿರತರಾಗಿದ್ದಾರೆ. ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾಗಿ ಬಿಜೆಪಿಯಿಂದ ಆಯ್ಕೆಯಾಗಿರುವ ಇವರು, ಶಿರಾ ತಾ.ಪಂ.ನಲ್ಲಿ ತಾ.ಪಂ. ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒದಗಿಸಿ, ಎಪಿಎಂಸಿಯಲ್ಲಿ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಒಂದು ಜಿ.ಪಂ. ಸ್ಥಾನ ಬಿಜೆಪಿಗೆ ಒಲಿಯಲು ಶ್ರಮಿಸಿದ್ದಾರೆ. ಈ ಬಾರಿಯೂ ಟಿಕೆಟ್‌ ನೀಡಿದರೆ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಆಶಾಭಾವನೆ ಹೊಂದಿದ್ದಾರೆ.

ಬಿ.ಕೆ.ಮಂಜುನಾಥ್‌: ಪ್ರಸ್ತುತ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿ.ಪಂ. ಮಾಜಿ ಸದಸ್ಯರು ಹಾಗೂ ತಾ.ಪಂ. ಅಧ್ಯಕ್ಷರು ಆಗಿದ್ದ ಬಿ.ಕೆ.ಮಂಜುನಾಥ್‌ ಅವರು ಬಿಜೆಪಿ ಪಕ್ಷದಿಂದ ಎರಡು ಬಾರಿ ಶಿರಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ದಿಸಿ ಸೋತಿದ್ದಾರೆ. ಇವರೂ ಸಹ ತಾಲೂಕಿನ ಬಿಜೆಪಿ ಕಾರ್ಯಕರ್ತರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಬಿಜೆಪಿಯಲ್ಲಿ ಸ್ಥಳೀಯವಾಗಿ ಸಾಕಷ್ಟುಸಮರ್ಥ ಅಭ್ಯರ್ಥಿಗಳಿದ್ದಾರೆ. ಹಾಗಾಗಿ ಶಿರಾ ಬಿಜೆಪಿಯಲ್ಲಿರುವ ಬಿ.ಕೆ.ಮಂಜುನಾಥ್‌ ಅಥವಾ ನನಗಾಗಲಿ ಟಿಕೆಟ್‌ ನೀಡಬೇಕು. ಬೇರೆಯವರಿಗೆ ಟಿಕೆಟ್‌ ನೀಡಿದರೆ ಕಾರ್ಯಕರ್ತರು ಸಹಿಸುವುದಿಲ್ಲ. ಬೇರೆಡೆಯಿಂದ ಬಂದವರನ್ನು ತಾಲೂಕು ಬಿಜೆಪಿ ಘಟಕ ಒಪ್ಪುವುದಿಲ್ಲ.

ಎಸ್‌.ಆರ್‌.ಗೌಡ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ

ಹೊರಗಿನಿಂದ ಬಂದವರಿಗೆ ಟಿಕೆಟ್‌ ನೀಡಿದರೆ ನಾವು ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ. ಈ ಬಗ್ಗೆ ವರಿಷ್ಠರ ಗಮನಕ್ಕೂ ತರಲಾಗಿದೆ. ಮುಂದಿನ ನಿರ್ಧಾರ ಪಕ್ಷದ ನಾಯಕರು ಮಾಡಲಿದ್ದಾರೆ.

ಬಿ.ಕೆ.ಮಂಜುನಾಥ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ