ವರದಿ : ಉಗಮ ಶ್ರೀನಿವಾಸ್‌

 ತುಮಕೂರು (ಸೆ.28):  ಶಿರಾ ಉಪಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ, ಆದರೂ ಮೂರು ಪಕ್ಷಗಳು ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ದಿನೇ ದಿನೇ ಚುನಾವಣಾ ಅಖಾಡ ಕಾವು ಪಡೆದುಕೊಳ್ಳುತ್ತಿದೆ. ಈಗಾಗಲೇ ಕಾಂಗ್ರೆಸ್‌ನಿಂದ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಟಿಕೆಟ್‌ ಖಚಿತವಾಗಿದ್ದು ಉಳಿದ ಎರಡು ಪಕ್ಷಗಳು ಯಾರನ್ನು ಅಭ್ಯರ್ಥಿಯನ್ನಾಗಿಸಬೇಕೆಂಬ ಜಿಜ್ಞಾಸೆಯಲ್ಲಿ ತೊಡಗಿದೆ.

ಒಮ್ಮೆ ಜನತಾದಳ, ಎರಡು ಬಾರಿ ಜೆಡಿಎಸ್‌ ಹಾಗೂ 10 ಬಾರಿ ಕಾಂಗ್ರೆಸ್‌ ಈ ಕ್ಷೇತ್ರವನ್ನು ಗೆದ್ದಿದ್ದು ಬಿ. ಸತ್ಯನಾರಾಯಣ ಅವರ ನಿಧನದಿಂದಾಗಿ ಶಿರಾದಲ್ಲಿ ನಡೆಯುತ್ತಿರುವ ಮೊದಲ ಉಪಚುನಾವಣೆ ಇದಾಗಿದೆ. ಕಳೆದ ಚುನಾವಣೆಯಲ್ಲಿ ಗೆದ್ದೇ ಬಿಡುವ ಹುಮ್ಮಸ್ಸಿನಲ್ಲಿದ್ದ ಜಯಚಂದ್ರ ಅವರನ್ನು ಬಿ. ಸತ್ಯನಾರಾಯಣ ಸೋಲಿಸಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದರು.ಆದರೆ ಅನಾರೋಗ್ಯದಿಂದ ನಿಧನರಾಗಿದ್ದು ಈಗ ಉಪಚುನಾವಣೆ ನಡೆಯುತ್ತಿದೆ.

ಈಗಾಗಲೇ ಕಾಂಗ್ರೆಸ್‌ ಜಯಚಂದ್ರ ಅವರ ಹೆಸರನ್ನು ಅಂತಿಮಗೊಳಿಸಿದೆ. ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಅತ್ಯಂತ ಹಿರಿಯ ಸದಸ್ಯರಾಗಿರುವ ಜಯಚಂದ್ರ ಅವರು 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1978 ರಲ್ಲಿ ಕಳ್ಳಂಬೆಳ್ಳದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ 27645 ಮತ ಪಡೆದು ಜೆಎನ್‌ಪಿಯ ಬಿ. ಗಂಗಣ್ಮ ಅವರನ್ನು ಪರಾಭವಗೊಳಿಸಿದರು. 1989 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ 37844 ಮತಗಳನ್ನು ಪಡೆದು ಜೆಡಿ ಯಿಂದ ಸ್ಪರ್ಧಿಸಿದ್ದ ಗಂಗಣ್ಣ ಅವಕನ್ನು ಪರಾಭವಗೊಳಿಸಿದರು.

ಪ್ರಮುಖ ಬಿಜೆಪಿ ನಾಯಕರಿಗೆ ಶಾಕ್: ಮುಂದಿನ ತಿಂಗ್ಳು ರಾಜ್ಯ ರಾಜಕಾರಣದಲ್ಲಿ ಸಂಚಲನ ...

1994 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಯಚಂದ್ರ 28729 ಮತ ಪಡೆದು ಜನತಾದಳದ ಗಂಗಣ್ಣ ಅವರನ್ನು ಸೋಲಿಸಿದರು. 1999 ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 44480 ಮತ ಪಡೆದು ಬಿಜೆಪಿಯ ಕಿರಣಕುಮಾರ್‌ ಅವರನ್ನು ಪರಾಭವಗೊಳಿಸಿದರು. 2008 ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾಗಿ ಕಳ್ಳಂಬೆಳ್ಳ ಕ್ಷೇತ್ರ ಇಲ್ಲವಾಗಿ ಜಯಚಂದ್ರ ಶಿರಾಕ್ಕೆ ಬಂದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಆಗ ಅವರು 60793 ಮತ ಪಡೆದು ಜೆಡಿಎಸ್‌ನ ಸತ್ಯನಾರಾಯಣ ಅವರನ್ನು ಸೋಲಿಸಿದರು. 2013 ರಲ್ಲಿ ಮತ್ತೆ ಶಿರಾದಿಂದ ಸ್ಪರ್ಧಿಸಿ 74089 ಮತ ಪಡೆದು ಜೆಡಿಎಸ್‌ನ ಸತ್ಯನಾರಾಯಣ ಅವರನ್ನು ಸೋಲಿಸಿದ್ದರು. 2018 ರಲ್ಲಿ ಬಿ. ಸತ್ಯನಾರಾಯಣ ವಿರುದ್ಧ ಪರಾಭವಗೊಂಡಿದ್ದರು. ಈಗ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅವರಿಗೆ ಟಿಕೆಟ್‌ ನೀಡುವುದು ನಿಶ್ಚಯವಾಗಿದೆ.

ಇನ್ನು ಜೆಡಿಎಸ್‌ ಈ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿಸಿಕೊಂಡಿದೆ. ಕಾರಣ ಈ ಕ್ಷೇತ್ರದ ಶಾಸಕರಾಗಿದ್ದವರು ಇದೇ ಪಕ್ಷದವರು. ಹೀಗಾಗಿ ಸೂಕ್ತ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆಂದು ತೀರ್ಮಾನಿಸಿದೆ. ಬಿ. ಸತ್ಯನಾರಾಯಣ ಪುತ್ರನಿಗೆ ಟಿಕೆಟ್‌ ನೀಡುವುದರ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಜೆಡಿಎಸ್‌ ನ ಕೆಲ ಕಾರ್ಯಕರ್ತರು ಸತ್ಯನಾರಾಯಣ ಪುತ್ರನಿಗೆ ಟಿಕೆಟ್‌ ನೀಡುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿದೆ. ಹೀಗಾಗಿ ಜೆಡಿಎಸ್‌ ಕೂಡ ಟಿಕೆಟ್‌ ಯಾರಿಗೆ ನೀಡಬೇಕೆಂಬುದರ ಬಗ್ಗೆ ಚರ್ಚೆ ನಡೆಸಿದೆ.

ಜಿಲ್ಲೆಯಲ್ಲಿ ನಾಲ್ವರು ಬಿಜೆಪಿ ಶಾಸಕರಿದ್ದರೂ ಕೂಡ ಶಿರಾದಲ್ಲಿ ಬಿಜೆಪಿಗೆ ಗಟ್ಟಿನೆಲೆಯಿಲ್ಲ. ಆದರೆ ಬಿಜೆಪಿ ಈ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಈಗಾಗಲೇ ಬಿಜೆಪಿ ಉಪಾಧ್ಯಕ್ಷ ಹಾಗೂ ಸಿಎಂ ಪುತ್ರ ವಿಜಯೇಂದ್ರ ಬಂದು ಬೂತ್‌ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶಗೌಡ ಇದೇ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಮೂಲಗಳ ಪ್ರಕಾರ ದೊಡ್ಡ ಸಂಖ್ಯೆಯಲ್ಲಿರುವ ಗೊಲ್ಲ ಸಮುದಾಯದವರಿಗೆ ಟಿಕೆಟ್‌ ನೀಡಬೇಕೆಂಬ ಚಿಂತನೆ ಬಿಜೆಪಿಯಲ್ಲಿದೆ. ಸಿ.ಎಂ. ನಾಗರಾಜು, ಹಿರಿಯೂರು ಶಾಸಕಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ್‌ಗೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಯಾವುದೂ ಅಂತಿಮವಾಗಿಲ್ಲ. ಸದ್ಯದ ಮಟ್ಟಿಗೆ ಬಿಜೆಪಿ ಗೊಲ್ಲ ಸಮುದಾಯದವರಿಗೆ ಟಿಕೆಟ್‌ ನೀಡುವ ಕುರಿತು ಗಂಭೀರ ಚಿಂತನೆ ನಡೆಸಿದೆ.

ಇದೇ ತಿಂಗಳ 29 ರಂದು ಶಿರಾ ಕ್ಷೇತ್ರದ ಉಪಚುನಾವಣೆ ಸಂಬಂಧ ದಿನಾಂಕ ಘೋಷಣೆಯಾಗಲಿದ್ದು ವಾರದೊಳಗೆ ಶಿರಾ ಕ್ಷೇತ್ರ ಮತ್ತಷ್ಟುರಂಗು ಪಡೆದುಕೊಳ್ಳಲಿದೆ.

ಮುಖ್ಯಾಂಶಗಳು--

1. ಮುಖಂಡರ ಭೇಟಿಯಲ್ಲಿ ತೊಡಗಿರುವ ಟಿ. ಬಿ. ಜಯಚಂದ್ರ

2. ಚುನಾವಣೆ ಹಿನ್ನೆಲೆ ದೇವಾಲಯಕ್ಕೆ ಪ್ಯಾಕೇಜ್‌ ನೀಡಿದ ಬಿಜೆಪಿ

3. ಯಾರಿಗೆ ಟಿಕೆಟ್‌ ನೀಡಬೇಕು ಎಂಬ ಕುರಿತು ಜೆಡಿಎಸ್‌ ಚರ್ಚೆ

4. ನೆಲೆ ಕಂಡುಕೊಳ್ಳಲು ಬಿಜೆಪಿ ನೀಡುತ್ತಿದೆ ತೀವ್ರ ಪೈಪೋಟಿ