ತುಮಕೂರು (ಮೇ.27): ಯೋಗೇಶ್ವರ್ ಅವರನ್ನ ಕ್ಯಾಬಿನೆಟ್ ನಿಂದ ಕಿತ್ತು ಹಾಕಿದರೆ ಬಂಡಾಯ ನಿಲ್ಲುತ್ತದೆ ಎಂದು ತುಮಕೂರಿನಲ್ಲಿ ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಹೇಳಿದರು. 

ತುಮಕೂರಿನಲ್ಲಿಂದು ಮಾತನಾಡಿದ ಸುರೇಶ್ ಗೌಡ ಯಡಿಯೂರಪ್ಪನವರನ್ನು ಬದಲಾವಣೆ ಮಾಡಬೇಕು ಎಂದು ದೆಹಲಿಗೆ ಹೋಗಿದ್ದಾರೆ. ಯೋಗೇಶ್ವರ್ ಸೋತರೂ ಅವರನ್ನ ಎಂಎಲ್‌ ಸಿ ಮಾಡಿ ಮಂತ್ರಿ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಅವರನ್ನು ಇಳಿಸಲು ಯೋಗೇಶ್ವರ್ ದೆಹಲಿಗೆ‌ ಹೋಗಿ ಲಾಭಿ ಮಾಡುತ್ತಿದ್ದಾರೆ ಎಂದರು.

ಯೋಗೇಶ್ವರ್ ಈಗಷ್ಟೇ ಪಕ್ಷಕ್ಕೆ ಬಂದವರು.  ಕಾಂಗ್ರೆಸ್ ನಲ್ಲಿ ಇದ್ದವರು, ಬಿಜೆಪಿ ಬಂದರು ಮತ್ತೆ ಸಮಾಜವಾದಿ ಪಕ್ಷಕ್ಕೆ ಹೋದರು ಮತ್ತೇ ಬಿಜೆಪಿಗೆ ಬಂದರು.  ಪಕ್ಷದಲ್ಲಿ ಮೂವತ್ತು ವರ್ಷದಿಂದ ಶಾಸಕರಾಗಿರುವವರು ಇದ್ದಾರೆ. ಆದರೆ  ಆದರೆ ಅವರನ್ನು ಬಿಟ್ಟು ಯೋಗೇಶ್ವರ್ ಸೋತಿದ್ದರೂ  ಮಂತ್ರಿ ಮಾಡಿದರು ಎಂದರು. 

ಸಚಿವರೊಬ್ಬರು ಸಿಎಂ ಬದಲಾವಣೆಗೆ ಒತ್ತಾಯಿಸಿದ್ದಾರೆ : ರೆಣುಕಾಚಾರ್ಯ ಬಾಂಬ್

ಯಡಿಯೂರಪ್ಪನವರ ಮೇಲೆ ವಿಶ್ವಾಸವಿಲ್ಲ ಅನ್ನೋ ಅಪಸ್ವರ ಇದ್ದರೆ ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಂದೇ ಗೌವರ್ನರ್ ಗೆ ವಜಾ ಪ್ರತಿಯನ್ನು ಕಳುಹಿಸಬೇಕು.  ಸಿಎಂ ಮೇಲೆ ವಿಶ್ವಾಸವಿಲ್ಲದ ವ್ಯಕ್ತಿ ಸಚಿವ ಸಂಪುಟದಲ್ಲಿ ಇರುವಂತಿಲ್ಲ. ಯೋಗೇಶ್ವರ್ ಅವರೆ ರಾಜೀನಾಮೆ ನೀಡಬೇಕು.  ಅವರನ್ನು ವಜಾಗೊಳಿಸಿದರೆ ಬಂಡಾಯ ಮುಗಿಯುತ್ತದೆ.  ಇಡೀ ದೇಶ ಸಂಕಷ್ಟದಲ್ಲಿ ಇದೆ. ಕೋವಿಡ್ ನಲ್ಲಿ ಸಂಕಷ್ಟಕ್ಕೆ ತುತ್ತಾದವರಿಗೆ ಆತ್ಮಸ್ಥೈರ್ಯ ತುಂಬ ಕೆಲಸ‌ ಮಾಡುತ್ತಿದ್ದಾರೆ.

ಪದೇ ಪದೇ ಬಂಡಾಯ ಮಾಡುತ್ತಿದ್ದಾರೆ, ಪಕ್ಷದ ವರ್ಚಸಿಗೆ ಧಕ್ಕೆ ತರುವವರ ಮೇಲೆ ಕ್ರಮ ಕೈಗೊಳ್ಳಬೇಕು. ಸಚಿವರಾಗಿರುವ ಯೋಗೇಶ್ವರ್ ರಾಮನಗರದಲ್ಲಿ ಹೋಗಿ ಕೆಲಸ ಮಾಡುವುದನ್ನು ಬಿಟ್ಟು ಬಂಡಾಯ ಮಾಡುತ್ತಿದ್ದಾರೆ.  ಯೋಗೇಶ್ವರ್ ಅವರನ್ನು ವಜಾ ಮಾಡಿದರೆ ಅವರ ಹಿಂದೆ ಯಾರಿದ್ದಾರೆಂದು ಗೊತ್ತಾಗಲಿದೆ ಎಂದು ಸುರೇಶ್ ಗೌಡ ಹೇಳಿದರು.