ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ತುಳು ಭಾಷೆಯನ್ನು ಎರಡನೇ ಭಾಷೆಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ. ಇದರ ಪ್ರಕಾರ ಎರಡೂ ಜಿಲ್ಲೆಗಳ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ತುಳುವಿನಲ್ಲಿ ಅರ್ಜಿ ಮತ್ತು ಮನವಿ ಸಲ್ಲಿಸಬಹುದು

ಮಂಗಳೂರು: ಕರಾವಳಿಗರ ಹಲವು ವರ್ಷಗಳ ಹೋರಾಟದ ಫಲವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಅನುಮೋದನೆ ನೀಡಿದ್ದು, ಅದರ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶದ ಅನ್ವಯ ಎರಡೂ ಜಿಲ್ಲೆಗಳ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಇನ್ನು ಮುಂದೆ ತುಳು ಭಾಷೆಯಲ್ಲೇ ಅರ್ಜಿ ಮತ್ತು ಮನವಿಗಳನ್ನು ಸಲ್ಲಿಸಬಹುದು. ಅವುಗಳಿಗೆ ಅಧಿಕಾರಿಗಳು ಕನ್ನಡದ ಜತೆಗೆ ತುಳುವಿನಲ್ಲೂ ಉತ್ತರಿಸುವರು. ಜಿಲ್ಲಾಧಿಕಾರಿ ಹಂತದಲ್ಲಿ ಹೊರಡುವ ಪ್ರಮುಖ ಆದೇಶಗಳು ಹಾಗೂ ಕಚೇರಿಗಳ ಪ್ರಮುಖ ಸೂಚನ ಫಲಕಗಳನ್ನು ಕನ್ನಡದ ಜತೆಗೆ ತುಳುವಿನಲ್ಲೂ ಪ್ರದರ್ಶಿಸಬೇಕು. ಆಡಳಿತದಲ್ಲಿ ತುಳು ಭಾಷೆಯನ್ನು ‘ಕನ್ನಡ ಲಿಪಿ’ಯಲ್ಲೇ ಬಳಸಲಾಗುವುದು.

ಎರಡೂ ಜಿಲ್ಲಾಡಳಿತ ಕಚೇರಿಗಳಲ್ಲಿ ಪ್ರತ್ಯೇಕ ‘ಅನುಷ್ಠಾನ ಘಟಕ’ ಸ್ಥಾಪಿಸಲಾಗುತ್ತದೆ. ಇದರೊಂದಿಗೆ ಒಟ್ಟು 20 ಭಾಷಾಂತರಕಾರರನ್ನು ನೇಮಿಸಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ತಲಾ ಇಬ್ಬರಂತೆ ಒಟ್ಟು 4 ಮಂದಿ ಹಾಗೂ ಎರಡೂ ಜಿಲ್ಲೆಗಳ ಒಟ್ಟು 16 ತಾಲೂಕುಗಳ (ದ.ಕ. ಮತ್ತು ಉಡುಪಿಯ 7) ತಹಶೀಲ್ದಾರ್‌ ಕಚೇರಿಗಳಲ್ಲಿ ತಲಾ ಒಬ್ಬರಂತೆ 16 ಮಂದಿ ಭಾಷಾಂತರಕಾರರು ಕಾರ್ಯನಿರ್ವಹಿಸಲಿದ್ದಾರೆ. ಇವರಿಗೆ ಎಲ್ಲ ವೆಚ್ಚಗಳೂ ಸೇರಿ ಮಾಸಿಕ 30,000 ರು. ಗೌರವ ಸಂಭಾವನೆ ನಿಗದಿಪಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತುಳು ಅಧಿಕೃತ ಭಾಷೆ ಆದೇಶ ಹೊರಡಿಸಿದ ಸರ್ಕಾರ: ಅಕಾಡೆಮಿ ಹರ್ಷ

ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳು ಭಾಷೆಯನ್ನು ಜಾರಿಗೊಳಿಸಿದ ಸಚಿವ ಸಂಪುಟ ಸಭೆಯ ನಿರ್ಣಯವನ್ನು ಅಧಿಕೃತವಾಗಿ ಸರ್ಕಾರಿ ಆದೇಶವಾಗಿ ಹೊರಡಿಸಿರುವುದನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ವಾಗತಿಸಿದೆ.

ಕಳೆದ ಸೆ.18ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಹೆಚ್ಚುವರಿ ಆಡಳಿತ ಭಾಷೆಯಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದ್ದರು.‌

ಸಂಪುಟ ಸಭೆಯ ನಿರ್ಣಯದ ಈ ಘೋಷಣೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಸರ್ಕಾರಿ ಆದೇಶವನ್ನು ರಾಜ್ಯಪಾಲರ ಪರವಾಗಿ ನ. 25ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರು ಪ್ರಕಟಿಸಿದ್ದಾರೆ. ಜಿಲ್ಲಾಡಳಿತದಲ್ಲಿ ತುಳು ಭಾಷೆಯನ್ನು ಅನುಷ್ಠಾನಗೊಳಿಸುವ ವಿಧಿ ವಿಧಾನಗಳ ಬಗ್ಗೆ ಈ ಆದೇಶ ನಿರ್ದೇಶನಗಳನ್ನು ನೀಡಿದೆ.

ತುಳುವರ ಬಹುಕಾಲದ ಬೇಡಿಕೆಯನ್ನು ಅನುಷ್ಠಾನಕ್ಕೆ ತಂದದಕ್ಕೆ ಸರ್ಕಾರವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿನಂದಿಸಿದ್ದಾರೆ.