ಬೆಂಗಳೂರಿನಲ್ಲಿ ಹೊಸ ರೇಷ್ಮೆ ಸೀರೆಯನ್ನು ಡ್ರೈ ಕ್ಲೀನ್‌ಗೆ ಕೊಟ್ಟಾಗ ಝರಿ ಸುಟ್ಟು ಹಾನಿಗೊಳಗಾಗಿತ್ತು. ಅಂಗಡಿಯವರು ನಿರ್ಲಕ್ಷ್ಯ ತೋರಿದಾಗ ಗ್ರಾಹಕರು ನ್ಯಾಯಾಲಯದ ಮೊರೆ ಹೋದರು. ಅಂತಿಮವಾಗಿ ನ್ಯಾಯಾಲಯವು ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದೆ.

ಬೆಂಗಳೂರು: ಕುಟುಂಬ ಕಾರ್ಯಕ್ರಮಕ್ಕಾಗಿ ಖರೀದಿಸಿದ ಹೊಸ ರೇಷ್ಮೆ ಸೀರೆಯನ್ನು ಡ್ರೈ ಕ್ಲೀನ್​ಗೆ ಕೊಟ್ಟಾಗ ಅವರು ಅದರ ಝರಿಯನ್ನು ಸುಟ್ಟು ಕಪ್ಪು ಕಲೆಗಳೊಂದಿಗೆ ಹಿಂತಿರುಗಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಲ್ಸನ್ ಗಾರ್ಡನ್‌ನ ನಿವಾಸಿ ಎಸ್ ಆರತಿ ಎನ್ನುವವರು, ಬಸವನಗುಡಿಯ ಟಂಬಲ್ಡ್ರಿ ಔಟ್‌ಲೆಟ್‌ನಲ್ಲಿ ಡ್ರೈ ಕ್ಲೀನಿಂಗ್‌ಗಾಗಿ ಮೂರು ಸೀರೆಗಳನ್ನು ನೀಡಿದ್ದರು. ಅದಕ್ಕಾಗಿ ಅವರು 564 ರೂ. ಪಾವತಿಸಿದ್ದರು ಅವರಿಗೆ ಸೀರೆಯನ್ನು ಸೆಪ್ಟೆಂಬರ್ 4 ಕ್ಕೆ ವಾಪಸ್​ ಮಾಡಲಾಯಿತು. ಆದರೆ, ಅವುಗಳ ಪೈಕಿ ಒಂದು ಸೀರೆ ತೀವ್ರವಾಗಿ ಹಾನಿಗೊಳಗಾಗಿತ್ತು. ಅದನ್ನು ಅವರು 12,540 ರೂ.ಗೆ ಖರೀದಿಸಿದ ಹೊಸ ಸೀರೆಯಾಗಿತ್ತು. ಇಷ್ಟಾಗುತ್ತಿದ್ದಂತೆಯೇ, ಅಂಗಡಿಗೆ ಹೋಗಿ ಆ ಬಗ್ಗೆ ವಿಚಾರಿಸಿದಾಗ ಅವರು ನಿರ್ಲಕ್ಷ್ಯ ತೋರಿದರು. ಆ ಸೀರೆಗಾಗಿ ಮಿಳೆ ಐದು ಸಾವಿರ ರೂಪಾಯಿ ಕೊಟ್ಟು ಬ್ಲೌಸ್​​ ಕೂಡ ಹೊಲಿಸಿದ್ದರು.

ಪದೇ ಪದೇ ವಿಚಾರಿಸಿದರೂ ಸರಿಯಾದ ಉತ್ತರ ಬರದ ಹಿನ್ನೆಲೆಯಲ್ಲಿ ಆರತಿ ಅವರು, ಗ್ರಾಹಕರ ವೇದಿಕೆ ಮೊರೆ ಹೋದರು. ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 35 ರ ಅಡಿಯಲ್ಲಿ ಕೇಸ್​ ದಾಖಲು ಮಾಡಿದರು. ಸೀರೆಗೆ 12,540 ರೂ. ಮತ್ತು ಮಾನಸಿಕ ಯಾತನೆ ಮತ್ತು ಹಾನಿಗಾಗಿ 20,000 ರೂ.ಗಳನ್ನು ಕೋರಿದರು. ಬಸವನಗುಡಿಯ ಮೆಸರ್ಸ್ ಎಕ್ಸಿಕ್ಯುಟಿವ್ ಲಾಂಡ್ರಿ ಬಿಲ್ಡಿಂಗ್‌ನಲ್ಲಿರುವ ಟಂಬಲ್ಡ್ರಿ ಫ್ರಾಂಚೈಸಿ ಮ್ಯಾನೇಜರ್ ಮತ್ತು ಟಂಬಲ್ಡ್ರಿ ಇಬ್ಬರನ್ನೂ ಅವರು ಪ್ರತಿವಾದಿಯನ್ನಾಗಿ ಮಾಡಿದರು.

ನೋಟಿಸ್​ಗೆ ಉತ್ತರ ಕೊಡದ ಅಂಗಡಿ

ಕೋರ್ಟ್​ನಿಂದ ನೋಟಿಸ್​ ಜಾರಿಯಾದರೂ ಆರೋಪಿಗಳು ಕೋರ್ಟ್​ ದಾಖಲಾಗಿ ಹೇಳಿಕೆ ಸಲ್ಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗವು ಡ್ರೈ ಕ್ಲೀನಿಂಗ್‌ ಅಂಗಡಿಯಿಂದ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಹೇಳಿತು. ಡ್ರೈ ಕ್ಲೀನಿಂಗ್ ಅಥವಾ ಇಸ್ತ್ರಿ ಮಾಡುವಾಗ ಝರಿಯನ್ನು ಸುಡುವುದು ಆ ಕರ್ತವ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.

ಈ ಹಿನ್ನೆಲೆಯಲ್ಲಿ ಗ್ರಾಹಕ ವೇದಿಕೆಯ ಅಧ್ಯಕ್ಷ ರಾಮಚಂದ್ರ ಎಂ ಎಸ್ ಮತ್ತು ಸದಸ್ಯರಾದ ನಂದಿನಿ ಎಚ್ ಕುಂಭಾರ್ ಮತ್ತು ಸವಿತಾ ಐರಾನಿ ಅವರನ್ನು ಒಳಗೊಂಡ ಆಯೋಗವು ಅಂಗಡಿಯು ಮಹಿಳೆಯ ಸೀರೆ ಸಂಪೂರ್ಣ ವೆಚ್ಚವಾಗಿರುವ 12,540 ರೂ. ಪಾವತಿಸಲು, ಡ್ರೈ ಕ್ಲೀನಿಂಗ್ ಶುಲ್ಕವಾಗಿ 564 ರೂ. ಮರುಪಾವತಿಸಲು ಮತ್ತು ಪರಿಹಾರವಾಗಿ 10,000 ರೂ. ಮತ್ತು ಮೊಕದ್ದಮೆ ವೆಚ್ಚವಾಗಿ 5000 ರೂ.ಗಳನ್ನು ಪಾವತಿಸಲು ನಿರ್ದೇಶಿಸಿತು.