ಬರ ಪರಿಹಾರ ನೀಡದಿದ್ದರೆ ಕೇಂದ್ರದ ವಿರುದ್ಧ ದೆಹಲಿ ಚಲೋ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದ್ದು, ಈ ಬಗ್ಗೆ ದಕ್ಷಿಣದ ಸಿಎಂಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಬೆಂಗಳೂರು (ನ.28): ರಾಜ್ಯದಲ್ಲಿನ ಬರ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಈವರೆಗೂ ಒಂದು ರೂಪಾಯಿ ನೆರವು ನೀಡಿಲ್ಲ. ಈ ವಿಚಾರವಾಗಿ ನಾವು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದು, ಎಲ್ಲಾ ರೀತಿಯ ಹೋರಾಟ ಮಾಡುತ್ತೇವೆ. ಬೆಳಗಾವಿ ಅಧಿವೇಶನ ಮುಕ್ತಾಯದ ಒಳಗೆ ಕೇಂದ್ರ ಸರ್ಕಾರ ಪರಿಹಾರ ನೀಡದೇ ಇದ್ದರೆ. ಅಧಿವೇಶನ ಮುಗಿದ ಬಳಿಕ ದೆಹಲಿ ಚಲೋ ಹೋರಾಟ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣ ಸಂಗಮದಲ್ಲಿ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.

ಪರಿಹಾರ ಸಿಗದಿದ್ದರೆ ಸುಪ್ರೀಂ ಕೋರ್ಟ್‌ಗೂ ಹೋಗುತ್ತೇವೆ

ಕೇಂದ್ರ ಸರ್ಕಾರ ಬರ ಪರಿಹಾರ ನೀಡದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು,'ಸುಪ್ರೀಂ ಕೋರ್ಟಿಗೂ ಹೋಗುತ್ತೇವೆ, ನಮ್ಮ ಸರ್ವ ಪಕ್ಷ ನಿಯೋಗ ಭೇಟಿಗೆ ಸಮಯ ನೀಡಿ ಎಂದು ಪ್ರಧಾನಮಂತ್ರಿಗಳಿಗೂ ಮನವಿ ಮಾಡಿದ್ದೇವೆ. ನಿಮ್ಮೆಲ್ಲರ ಎದುರು ಈ ವಿಚಾರವನ್ನು ಪ್ರಧಾನಮಂತ್ರಿಗಳ ಮುಂದೆ ಪ್ರಸ್ತಾಪಿಸಿದ್ದೇನೆ. ನಮ್ಮ ರಾಜ್ಯ ಹಾಗೂ ಕನ್ನಡಿಗರ ಸ್ವಾಭಿಮಾನದ ವಿಚಾರವಾಗಿ ಕನ್ನಡ ಧ್ವಜಕ್ಕೆ ಮಾನ್ಯತೆ ನೀಡುವ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು. ಪರಿಶಿಷ್ಟರ ಮೀಸಲಾತಿ ವಿಚಾರದಲ್ಲಿ ಕೋರ್ಟ್ ನಲ್ಲಿ ಹಿನ್ನಡೆಯಾಗಿದ್ದು, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಬೇಕು ಎಂಬುದು ನಮ್ಮ ಒಮ್ಮತದ ತೀರ್ಮಾನವಾಗಿದೆ ಎಂದರು.

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಬಗ್ಗೆ ಕೇರಳ, ತೆಲಂಗಾಣ ಸಿಎಂಗಳ ಜೊತೆ ಚರ್ಚೆ

ದೆಹಲಿ ಪ್ರವಾಸದ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಶನಿವಾರ ರಾತ್ರಿ ದೆಹಲಿಗೆ ಪ್ರವಾಸ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಸೂದೆ ಕುರಿತು ಭಾನುವಾರ ಕೇರಳ, ತೆಲಂಗಾಣ ಸಿಎಂ ಸೇರಿ ಚರ್ಚೆ ಮಾಡುತ್ತಿದ್ದು, ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡುತ್ತೇವೆ. ಉತ್ತರ ಭಾರತದ ರಾಜ್ಯಗಳಲ್ಲಿ ಎಷ್ಟು ಸ್ಥಾನಗಳು ಹೆಚ್ಚಾಗಲಿವೆ. ದಕ್ಷಿಣ ಭಾರತದ ರಾಜ್ಯಗಳ ಪರಿಸ್ಥಿತಿ, ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗುವುದು. ನಿನ್ನೆಯಷ್ಟೇ ಕೇಂದ್ರ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದು, ಮಾಧ್ಯಮಗಳ ವರದಿಯ ಮಾಹಿತಿ ಮಾತ್ರ ನಮಗೆ ತಿಳಿದಿದೆ. ನಾವು ನಮ್ಮ ಹಿತ ರಕ್ಷಣೆಗೆ ಹೋರಾಟ ಮಾಡುತ್ತೇವೆ. ಈ ಹಿಂದೆ ಡಿಎಂಕೆ ಕರೆದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಬಿಜೆಪಿಯವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡುತ್ತಿದ್ದಾರೆ. ನಾವು ನಮ್ಮ ಸಾರ್ವಭೌಮತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತೇವೆ. ಮಹಿಳಾ ಮೀಸಲಾತಿಗೆ ನಾವು ಒಪ್ಪಿದ್ದು, ಕ್ಷೇತ್ರ ಪುನರ್ವಿಂಗಡಣೆಗೆ ನಮ್ಮ ವಿರೋಧ' ಎಂದು ಸ್ಪಷ್ಟಪಡಿಸಿದರು.

ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ

ಎನ್‌ಡಿಎ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಅವರು ರಾಜಕಾರಣ ಮಾಡಲಿ. ಇದರಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದ್ದು, ಈ ರಾಜ್ಯಗಳು ಅಲ್ಪಸಂಖ್ಯಾತರಾಗಲಿವೆ. ನಮ್ಮ ರಾಜ್ಯಗಳ ಹಿತಾಸಕ್ತಿಗಾಗಿ ನಾವು ಧ್ವನಿ ಎತ್ತುತ್ತೇವೆ. ದೇಶದ ಪ್ರಗತಿಗೆ ದಕ್ಷಿಣ ರಾಜ್ಯಗಳು ಶಕ್ತಿ ತುಂಬುತ್ತಿವೆ. ಅವರು ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಈ ವಿಚಾರವಾಗಿ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡುವ ನಿರೀಕ್ಷೆ ಇತ್ತು. ಸಿದ್ದರಾಮಯ್ಯ ಅವರು ಹೇಳಿದಂತೆ ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಬೇಕಿತ್ತು ಎಂದರು.

ಕನ್ನಡಿಗರ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆಗೆ ಬೆಂಬಲ ನೀಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅವರ ಕಾಲದಲ್ಲಿ ಕನ್ನಡಿಗರು ಹಾಗೂ ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ಅವರು ಹೇಳಲಿ. ಖಾಲಿ ಮಾತು ಆಡುವುದಲ್ಲ ಎಂದರು.

ಆಶಾ ಕಾರ್ಯಕರ್ತೆಯರನ್ನ ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ:

ಇದೇ ವೇಳೆ ಆಶಾ ಕಾರ್ಯಕರ್ತೆಯರ ಭೇಟಿ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್ ಅವರು, ನಿನ್ನೆ ನಾನು ನಮ್ಮ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದು, ನಮ್ಮ ಸಚಿವರು ಇಂದು ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚೆ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಸಹಾಯ ಮಾಡಬೇಕು ಎಂದು ಎನ್ ಡಿಎ ನಾಯಕರು ಮುಂದೆ ಬರಲಿಲ್ಲ. ಅವರು ಆಶಾ ಕಾರ್ಯಕರ್ತೆಯರನ್ನು ರಾಜ್ಯ ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ 2 ಸಾವಿರ ನೀಡುತ್ತಿರುವುದು ಬಿಟ್ಟರೆ ಬೇರೆ ಏನೂ ನೀಡುತ್ತಿಲ್ಲ. ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ನಮ್ಮ ಜವಾಬ್ದಾರಿ ಎಷ್ಟಿದೆಯೋ ಕೇಂದ್ರ ಸರ್ಕಾರದ ಜವಾಬ್ದಾರಿಯೂ ಅಷ್ಟೇ ಇದೆ. ನಾವು ಆಶಾ ಕಾರ್ಯಕರ್ತೆಯರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು