ಗೂಗಲ್‌'ನ ಜಿ ಬೋರ್ಡ್‌'ನಲ್ಲಿ ತುಳು ಭಾಷೆಯನ್ನು ಈಗ ಬರೆಯಲು ಸಾಧ್ಯವಿದೆ. ಮುಖ್ಯವಾಗಿ ಆ್ಯಂಡ್ರಾಯ್ಡ್ ಮೊಬೈಲ್ ಹಾಗೂ ಕಂಪ್ಯೂಟರ್‌'ಗಳಲ್ಲಿ ಗೂಗಲ್‌'ನ ಜಿ ಬೋರ್ಡ್‌'ನಲ್ಲಿ ಕನ್ನಡ ಅಕ್ಷರದಲ್ಲಿ ತುಳು ಭಾಷೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಮಂಗಳೂರು(ನ.19) ಕರಾವಳಿಯಲ್ಲಿ ನೆಲದ ಪ್ರಮುಖ ಭಾಷೆ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ಜಾಗತಿಕ ವೆಬ್ ತಾಣ ಗೂಗಲ್ ತುಳು ಭಾಷೆಗೆ ಸ್ಥಾನ ನೀಡಿದೆ. ಗೂಗಲ್‌'ನ ಜಿ ಬೋರ್ಡ್‌'ನಲ್ಲಿ ತುಳು ಭಾಷೆಯನ್ನು ಈಗ ಬರೆಯಲು ಸಾಧ್ಯವಿದೆ. ಮುಖ್ಯವಾಗಿ ಆ್ಯಂಡ್ರಾಯ್ಡ್ ಮೊಬೈಲ್ ಹಾಗೂ ಕಂಪ್ಯೂಟರ್‌'ಗಳಲ್ಲಿ ಗೂಗಲ್‌'ನ ಜಿ ಬೋರ್ಡ್‌'ನಲ್ಲಿ ಕನ್ನಡ ಅಕ್ಷರದಲ್ಲಿ ತುಳು ಭಾಷೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಈ ಮೂಲಕ ಇತರೆ ಪ್ರಾದೇಶಿಕ ಭಾಷೆಗಳ ಸಾಲಿನಲ್ಲಿ ತುಳುವಿಗೂ ಗೂಗಲ್ ಪ್ರಾಮುಖ್ಯತೆಯನ್ನು ನೀಡಿದೆ. ಗೂಗಲ್‌'ನಲ್ಲಿ ಗೂಗಲ್ ಜಿ ಬೋರ್ಡ್‌'ನ್ನು ಕ್ಲಿಕ್ ಮಾಡಿದ ಬಳಿಕ ಆಪ್ಶನ್‌'ನಲ್ಲಿ ಹಲವು ಭಾಷೆಗಳ ಸಾಲಿನಲ್ಲಿ ತುಳುವಿನ ಹೆಸರಿದೆ. ತುಳು ಭಾಷೆಗೆ ಕ್ಲಿಕ್ ಮಾಡಿದರೆ, ಅಲ್ಲಿ ಕನ್ನಡ ಅಕ್ಷರದಲ್ಲಿ ತುಳುವಿನ ಮಾತುಗಳನ್ನು ಬರೆಯಬಹುದು. ಹೀಗೆ ಬರೆಯುತ್ತಾ ಹೋದಂತೆ ತುಳುವಿನ ವಾಕ್ಯವನ್ನು ಊಹಿಸುವ(ಪ್ರಿಡಿಕ್ಷನ್)ಪದಗಳು ಮೊದಲೇ ಟೈಪಿಸುತ್ತವೆ. ಪ್ರಸ್ತುತ ತುಳುವರು ಹಾಗೂ ತುಳು ಭಾಷಾ ಅಭಿಮಾನಿಗಳು, ಕನ್ನಡ ಲಿಪಿಯಲ್ಲಿ ತುಳು ಭಾಷೆಯನ್ನು ಬರೆಯುತ್ತಿದ್ದರು.

ಆದರೆ ಪ್ರಿಡಿಕ್ಷನ್‌'ಗಳು ಲಭ್ಯವಿರುತ್ತಿರಲಿಲ್ಲ. ಆದರೆ ಈಗ ಪ್ರಿಡಿಕ್ಷನ್‌ಗಳು ಕನ್ನಡದಂತೆಯೇ ಟೈಪಿಸುತ್ತವೆ. ಇದು ತುಳು ಭಾಷೆಯ ಸಂದೇಶವನ್ನು ಸುಲಭವಾಗಿ ಟೈಪ್ಮಾಡಿ ಕಳುಹಿಸಲು ಅನುಕೂಲವಾಗಲಿದೆ. ಕಳೆದ ಒಂದು ತಿಂಗಳಿನಿಂದ ಗೂಗಲ್‌'ನಲ್ಲಿ ಈ ಸೌಲಭ್ಯ ಜಾರಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ತುಳು ಭಾಷೆಯ ಲಿಪಿ ಇನ್ನೂ ಅಂತಿಮವಾಗಿಲ್ಲ. ಬಳಿಕ ತುಳು ಲಿಪಿಯನ್ನು ಯುನಿಕೋಡ್‌'ಗೆ ಅಳವಡಿಸಬೇಕು. ಬಳಿಕವಷ್ಟೆ ತುಳು ಲಿಪಿ ಅಂತರ್ಜಾಲದಲ್ಲಿ ಬಳಕೆಯಾಗಲು ಸಾಧ್ಯವಿದೆ. ಗೂಗಲ್ ಬಳಕೆಗೆ ತಂದಿರುವುದು ಕೀ ಬೋರ್ಡ್‌'ನಲ್ಲಿ ತುಳು ಭಾಷೆಯನ್ನು ಕನ್ನಡದಲ್ಲಿ ಟೈಪ್ ಮಾಡುವುದನ್ನು. ಇದು ಮುಂದೆ ಯುನಿಕೋಡ್‌'ನಲ್ಲಿ ತುಳು ಲಿಪಿ ಅನುಷ್ಠಾನಕ್ಕೆ ಪೂರಕವಾಗಲಿದೆ ಎನ್ನುತ್ತಾರೆ ಗಣಕ ತಜ್ಞ ಯು.ಬಿ.ಪವನಜ.