ಮಂಗಳೂರು[ಸೆ.14]: ಗಿರಿಗಿಟ್‌ ಚಲನಚಿತ್ರದ ವಿವಾದ ಕೊನೆಗೂ ನಿರ್ಣಾಯಕ ಹಂತ ತಲುಪಿದೆ. ಚಿತ್ರದಲ್ಲಿ ನ್ಯಾಯಾಂಗ ನಿಂದನೆ ಮತ್ತು ವಕೀಲ ಸಮುದಾಯದ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎನ್ನಲಾದ ಅಂಶಗಳಿರುವ ಭಾಗಗಳಿಗೆ ಕತ್ತರಿ ಹಾಕಲು ಗಿರಿಗಿಟ್‌ ಚಿತ್ರತಂಡ ಒಪ್ಪಿಕೊಂಡಿದೆ.

ಮಂಗಳೂರಿನ ಪ್ರಧಾನ ಕಿರಿಯ ಸಿವಿಲ್‌ ನ್ಯಾಯಾಧೀಶರ ಮುಂದೆ ಚಿತ್ರತಂಡದ ಪರ ವಾದ ಮಂಡಿಸಿದ ಗಿರಿಗಿಟ್‌ ಪರ ವಕೀಲರು, ಚಿತ್ರ ಪ್ರದರ್ಶನ ಮುಂದುವರಿಸಲು ಅನುಮತಿ ಯಾಚಿಸಿದರು. ತಾಂತ್ರಿಕ ಕಾರಣಗಳಿಂದ ಚಿತ್ರ ಪ್ರದರ್ಶನ ಮುಂದುವರಿಯುತ್ತಿದ್ದು, ಚೆನ್ನೈನಲ್ಲಿ ಚಲನಚಿತ್ರದ ಭಾಗಗಳನ್ನು ಸಂಕಲನ (ಎಡಿಟ್‌) ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸೂಕ್ತ ಸಮಯಾವಕಾಶ ಬೇಕಾಗಿದೆ ಎಂಬುದನ್ನು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡರು.

ತುಳುವಿಗಾಗಿ ಮತ್ತೆ ಕರಾವಳಿಯಲ್ಲಿ ಟ್ವೀಟ್‌ ಅಭಿಯಾನ!

ಚಿತ್ರತಂಡದ ಪರವಾಗಿ ನಟ-ನಿರ್ದೇಶಕ ರೂಪೇಶ್‌ ಶೆಟ್ಟಿಹಾಜರಿದ್ದರು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು. ಮಂಗಳೂರು ವಕೀಲರ ಸಂಘದ ಪರವಾಗಿ ಹಿರಿಯ ನ್ಯಾಯವಾದಿ ಎಂ.ಪಿ. ಶೆಣೈ ವಾದ ಮಂಡಿಸಿದರು.

ತುಳು ಚಿತ್ರೋದ್ಯಮ, ನಟ, ನಿರ್ದೇಶಕರು ಸೇರಿದಂತೆ ಚಿತ್ರ ತಂಡದ ಬಗ್ಗೆ ನಮಗೆ ಯಾವುದೇ ದ್ವೇಷ ಹಾಗೂ ಕ್ಷೀಷೆಯ ಭಾವನೆ ಇಲ್ಲ. ಸಿನಿಮಾ ರಂಗ ಒಂದು ಜವಾಬ್ದಾರಿಯುತ ಮಾಧ್ಯಮ. ನ್ಯಾಯಾಂಗ ವ್ಯವಸ್ಥೆ ಮತ್ತು ಅದರ ಪ್ರಮುಖ ಭಾಗವಾದ ವಕೀಲ ಸಮುದಾಯದ ಭಾವನೆಗಳಿಗೆ ಗೌರವ ನೀಡಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕೆಲಸವನ್ನು ಚಿತ್ರ ತಂಡ ಮಾಡುವಂತಾಗಬೇಕು ಎಂದು ವಕೀಲರ ಸಂಘದ ಕಾರ್ಯದರ್ಶಿ ಎಚ್‌.ವಿ. ರಾಘವೇಂದ್ರ ತಿಳಿಸಿದ್ದಾರೆ.

ತುಳು ಪರ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್: ಅಭಿಯಾನಕ್ಕೆ ಸಿಕ್ತು ಭರ್ಜರಿ ರೆಸ್ಪಾನ್ಸ್

ಇದಕ್ಕೂ ಮುನ್ನ ಚಿತ್ರತಂಡದ ಪ್ರಮುಖರು ವಕೀಲರ ಸಂಘದ ಜೊತೆ ಮಾತುಕತೆ ನಡೆಸಿ ಚಿತ್ರದ ವಿರುದ್ಧ ಸಲ್ಲಿಸಲಾಗಿರುವ ದಾವೆಯನ್ನು ಕೈಬಿಡುವಂತೆ ಮನವಿ ಮಾಡಿತ್ತು. ವಕೀಲರ ಸಂಘ ವ್ಯಕ್ತಪಡಿಸಿರುವ ಎಲ್ಲ ಆಕ್ಷೇಪಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ಚಿತ್ರ ತಂಡ ನೀಡಿತ್ತು. ಅಲ್ಲದೆ, ಸುದ್ದಿಗೋಷ್ಠಿ ಕರೆದು ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ.

ವಕೀಲರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಗಿರಿಗಿಟ್‌ ಚಿತ್ರದಲ್ಲಿ ನ್ಯಾಯಾಂಗ ನಿಂದನೆ ಮತ್ತು ವಕೀಲರ ಸಮುದಾಯದ ಅವಹೇಳನ ನಡೆದಿದೆ ಎಂದು ಆರೋಪಿಸಿ ಮಂಗಳೂರು ವಕೀಲರ ಸಂಘ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಧಾನ ಕಿರಿಯ ಸಿವಿಲ್‌ ನ್ಯಾಯಾಧೀಶರು ಈ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ್ದರು.

ಜಾಲತಾಣದಲ್ಲಿ ನಿಂದನೆ: ದೂರು

ಮಂಗಳೂರು: ತುಳು ಚಿತ್ರ ಗಿರಿಗಿಟ್‌ ಪ್ರದರ್ಶನಕ್ಕೆ ತಡೆಯಾಜ್ಞೆ ಕುರಿತು ವಕೀಲರ ಸಂಘದ ಬಗ್ಗೆ ಸಾಮಾಜಿಕ ತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ, ಈ ಚರ್ಚೆಯಲ್ಲಿ ಅನಾರೋಗ್ಯಕರ ವಾದ, ಅಶ್ಲೀಲ ಮತ್ತು ಅವಾಚ್ಯ ಪದಗಳಿಂದ ಅವಹೇಳನಕಾರಿಯಾಗಿ ನಿಂದಿಸಿದ ಬಗ್ಗೆ ವಕೀಲರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಕೀಲರ ಸಂಘದ ನಿಯೋಗ ಮಂಗಳೂರು ಪೊಲೀಸ್‌ ಆಯುಕ್ತ ಹರ್ಷ ಅವರಿಗೆ ಮನವಿ ಮಾಡಿದೆ.

ತುಳು ಟ್ವೀಟ್ ಅಭಿಯಾನಕ್ಕೆ ಅಣ್ಣಾಮಲೈ ಬೆಂಬಲ..!

ಜತೆಗೆ, ಮಂಗಳೂರು ಬಂದರು ಪೊಲೀಸ್‌ ಠಾಣೆಗೆ ಈ ಬಗ್ಗೆ ಲಿಖಿತ ದೂರು ನೀಡಿದ್ದು, ವಿಕ್ಷಿಪ್ತ ಹಾಗೂ ವಿಕೃತ ಟೀಕೆಗಳನ್ನು ಬರೆದು ಸಾಮಾಜಿಕ ಸ್ವಾಸ್ಥ್ಯ ಕದಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ವಿ. ರಾಘವೇಂದ್ರ ಸಹಿತ ಗಣ್ಯರ ಬಗ್ಗೆ ಅವಾಚ್ಯ ಹಾಗೂ ಕೀಳು ಅಭಿರುಚಿಯ ನಿಂದನೆ ಮಾಡಿರುವ ಕೆಲವು ವ್ಯಕ್ತಿಗಳು ಮತ್ತು ಸ್ಕ್ರೀನ್‌ ಶಾಟ್‌ಗಳನ್ನು ವಕೀಲರು ಪೊಲೀಸರಿಗೆ ನೀಡಿದ್ದಾರೆ.

ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಸಂದೇಶಗಳನ್ನು ಹಾಕಿದವರನ್ನು, ಅದನ್ನು ಫಾರ್ವರ್ಡ್‌ ಮಾಡಿದವರನ್ನು ಮತ್ತು ಅದಕ್ಕೆ ಬೆಂಬಲಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಆಯುಕ್ತ ಹರ್ಷ ಮತ್ತು ಬಂದರು ಪೊಲೀಸರು ವಕೀಲರ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ದುಷ್ಕರ್ಮಿಗಳ ಪತ್ತೆ ಹಚ್ಚಿ ತಕ್ಷಣ ಅವರನ್ನು ವಶಕ್ಕೆ ಪಡೆಯುವ ಕಾರ್ಯ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಿಷಾದ ವ್ಯಕ್ತಪಡಿಸಿದ ಚಿತ್ರ ನಿರ್ದೇಶಕ

ಗಿರಿಗಿಟ್‌ ಚಿತ್ರ ಪ್ರದರ್ಶನದ ಮೇಲೆ ವಕೀಲರ ಸಂಘದವರು ದಾವೆ ಹೂಡಿ ತಡೆಯಾಜ್ಞೆ ನೀಡಿರುವ ಕೋರ್ಟ್‌ ಆದೇಶಕ್ಕೆ ಬದ್ಧರಾಗಿದ್ದೇವೆ. ಆದರೆ ಸಿನೆಮಾದಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕ ಹಾಗೂ ಮನರಂಜನೆಗೆ ಸೀಮಿತವಾಗಿವೆ. ಇದರಲ್ಲಿ ಇರುವ ಕೆಲವು ಸನ್ನಿವೇಶಗಳು ವಕೀಲರಿಗೆ ನೋವು ತಂದಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಚಿತ್ರದ ನಿರ್ದೇಶಕ ರೂಪೇಶ್‌ ಶೆಟ್ಟಿಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನೆಮಾದಲ್ಲಿ ಎಲ್ಲಿಯೂ ವಕೀಲರನ್ನು ಉದ್ದೇಶಪೂರ್ವಕವಾಗಿ ನಾವು ತಮಾಷೆ ಮಾಡಿಲ್ಲ. ಈಗಾಗಲೇ ಈ ಕುರಿತು ವಕೀಲರ ಸಂಘದ ಜತೆಗೂ ಮಾತುಕತೆ ನಡೆಸಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಕುರಿತು ಹೆಚ್ಚು ಏನೂ ಮಾತನಾಡಲು ಹೋಗುವುದಿಲ್ಲ. ಅದಷ್ಟುಬೇಗ ಈ ಸಮಸ್ಯೆ ಪರಿಹಾರವಾಗುವ ಭರವಸೆ ಇದೆ ಎಂದರು. ಚಿತ್ರದ ತಂಡದ ಸದಸ್ಯರು ಇದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ