Asianet Suvarna News Asianet Suvarna News

ತುಳು ಪರ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್: ಅಭಿಯಾನಕ್ಕೆ ಸಿಕ್ತು ಭರ್ಜರಿ ರೆಸ್ಪಾನ್ಸ್

ಟ್ವಿಟರ್‌ ಬೆಂಗಳೂರು ಟ್ರೆಂಡಿಂಗ್‌ನಲ್ಲಿ #TuluOfficialinKA_KL ಅಗ್ರಸ್ಥಾನದಲ್ಲಿತ್ತು. ಸಂಜೆ ವೇಳೆಗೆ ಸುಮಾರು 60 ಸಾವಿರ ಟ್ವೀಟ್‌ಗಳು ಈ ಹ್ಯಾಷ್‌ಟ್ಯಾಗ್‌ನ ಅಡಿಯಲ್ಲಿ ದಾಖಲಾಗಿವೆ. ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆ ಮುಂದಿರಿಸಿಕೊಂಡು ಭಾನುವಾರ ದಿನವಿಡೀ ಟ್ವಿಟರ್‌ನಲ್ಲಿ ಭರ್ಜರಿ ಅಭಿಯಾನ ನಡೆದಿದೆ.

TuluOfficialinKA KL hashtag trends in twitter
Author
Bangalore, First Published Sep 10, 2019, 10:08 AM IST

ಮಂಗಳೂರು(ಸೆ.10): ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವನ್ನು ಕೇರಳ, ಕರ್ನಾಟಕದ ಆಡಳಿತ ಭಾಷೆಗಳಲ್ಲೊಂದಾಗಿ ಘೋಷಿಸಬೇಕು ಹಾಗೂ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆ ಮುಂದಿರಿಸಿಕೊಂಡು ಭಾನುವಾರ ದಿನವಿಡೀ ಟ್ವಿಟರ್‌ನಲ್ಲಿ ಭರ್ಜರಿ ಅಭಿಯಾನ ನಡೆದಿದೆ.

60,000 ಟ್ವೀಟ್‌ಗಳು:

ಆಗಸ್ಟ್‌ ತಿಂಗಳಿಂದಲೇ ಈ ಅಭಿಯಾನದ ಬಗ್ಗೆ ಸಿದ್ಧತೆ ಹಾಗೂ ಪ್ರಚಾರ ನಡೆಸಲಾಗಿದ್ದು, ಭಾನುವಾರ ಟ್ವಿಟರ್‌ ಬೆಂಗಳೂರು ಟ್ರೆಂಡಿಂಗ್‌ನಲ್ಲಿ #TuluOfficialinKA_KL ಅಗ್ರಸ್ಥಾನದಲ್ಲಿತ್ತು. ಸಂಜೆ ವೇಳೆಗೆ ಸುಮಾರು 60 ಸಾವಿರ ಟ್ವೀಟ್‌ಗಳು ಈ ಹ್ಯಾಷ್‌ಟ್ಯಾಗ್‌ನ ಅಡಿಯಲ್ಲಿ ದಾಖಲಾಗಿವೆ.

ಗಾಢವಾದ ಸಂಸ್ಕೃತಿ, ಸಂಪ್ರದಾಯ ಆಚರಣೆಗಳ ಶ್ರೀಮಂತ ಭಾಷೆಯಾಗಿರುವ ತುಳುವನ್ನು ಲಕ್ಷಾಂತರ ಮಂದಿ ತುಳುವರು ವ್ಯವಹಾರದ, ಮನೆಯ ಭಾಷೆಯಾಗಿ ಪರಿಗಣಿಸಿದ್ದಾರೆ, ಗೌರವಿಸುತ್ತಿದ್ದಾರೆ, ಕೋಸ್ಟಲ್‌ವುಡ್‌ ಕೂಡಾ ಜನಪ್ರಿಯಗೊಂಡಿದೆ, ಸಾವಿರಾರು ಸಂಖ್ಯೆಯ ಗ್ರಂಥಗಳು ರಚನೆಯಾಗಿವೆ, ಹಾಗಿರುವಾಗ ತುಳುವನ್ನು ಕಡೆಗಣಿಸುವುದು ಸರಿಯಲ್ಲ ಎಂಬ ಅರ್ಥದ ಟ್ವೀಟ್‌ಗಳನ್ನು ತುಳುವರು ದಾಖಲಿಸಿದ್ದಾರೆ.

ತುಳು ಅಭಿಯಾನಕ್ಕೆ ಭಾರಿ ಬೆಂಬಲ:

ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಹಮ್ಮಿಕೊಂಡ ಟ್ವಿಟರ್‌ ಅಭಿಯಾನಕ್ಕೆ ಪ್ರಚಂಡ ಬೆಂಬಲ ವ್ಯಕ್ತವಾಯಿತು. ನಾಡಿನೆಲ್ಲೆಡೆಯಲ್ಲಿರುವ ತುಳುವರು, ಇತರ ಭಾಷಿಗರೂ ಟ್ರೆಂಡ್‌ ನೋಡಿ ಪ್ರತಿಕ್ರಿಯಿಸಿದರು ಅನೇಕರು ಅದರ ಪರವಾಗಿ ಟ್ವೀಟ್‌ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಸದೆ ಶೋಭಾ ಕರಂದ್ಲಾಜೆ ಕೂಡ ತುಳುವಲ್ಲೇ ಟ್ವೀಟ್‌ ಮಾಡಿ, 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಪ್ರಯತ್ನಗಳಿಗೆ ತನ್ನೆಲ್ಲಾ ಸಹಕಾರ ಇದೆ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕೂಡ ಟ್ವೀಟ್‌ ಅಭಿಯಾನಕ್ಕೆ ಕೈ ಜೋಡಿಸಿದ್ದು, ರಾಜ್ಯ, ರಾಷ್ಟ್ರ ಎರಡೂ ಕಡೆ ಬಿಜೆಪಿ ಸರ್ಕಾರ ಇರುವುದರಿಂದ ತುಳುವನ್ನು ಅಧಿಕೃತ ಭಾಷೆ ಹಾಗೂ 8ನೇ ಪರಿಚ್ಛೇದಕ್ಕೆ ಸೇರಿಸುವುದು ಸುಲಭವಾಗಲಿದೆ ಎಂದಿದ್ದಾರೆ.

ತುಳುವಿಗಾಗಿ ಮತ್ತೆ ಕರಾವಳಿಯಲ್ಲಿ ಟ್ವೀಟ್‌ ಅಭಿಯಾನ!

ಶಾಸಕ ಭರತ್‌ ಶೆಟ್ಟಿಅವರು, ಕರಾವಳಿಯ ಅತ್ಯಧಿಕ ಮಂದಿ ಮಾತನಾಡುವ ಭಾಷೆ ತುಳು, ಅದಕ್ಕೆ ಅಧಿಕೃತ ಭಾಷೆಯ ಸ್ಥಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಪೂರ್ತಿ ಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಇದೇ ರೀತಿ ಶಾಸಕ ಹರೀಶ್‌ ಪೂಂಜಾ ಸಹಕಾರದ ಮಾತುಗಳನ್ನಾಡಿದ್ದಾರೆ.

Follow Us:
Download App:
  • android
  • ios