ತುಳುವಿಗಾಗಿ ಮತ್ತೆ ಕರಾವಳಿಯಲ್ಲಿ ಟ್ವೀಟ್ ಅಭಿಯಾನ!
ತುಳುವಿಗಾಗಿ ಮತ್ತೆ ಕರಾವಳಿಯಲ್ಲಿ ಟ್ವೀಟ್ ಅಭಿಯಾನ| ದಿನಪೂರ್ತಿ ಸಾಮಾಜಿಕ ಜಾಲತಾಣದಲ್ಲಿ ತುಳು ಪರ ಹೋರಾಟ
ಮಂಗಳೂರು[ಸೆ.09]: ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳುವಿಗೆ ದೆಹಲಿ ಮಟ್ಟದಲ್ಲಿ ಸ್ಥಾನಮಾನ ಒದಗಿಸುವ ನಿಟ್ಟಿನಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದ ಸೇರ್ಪಡೆಗೆ ಒತ್ತಾಯಿಸಿ ಟ್ವೀಟ್ ಅಭಿಯಾನ ಮತ್ತೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ತುಳು ಸಂಘಟನೆಗಳು ಭಾನುವಾರ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಟ್ವೀಟ್ ಅಭಿಯಾನ ನಡೆಸಿದ್ದಾರೆ.
ತುಳುನಾಡಿನ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕರು ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದು ಹೊಸ ಅಧ್ಯಾಯವನ್ನು ಆರಂಭಿಸುವ ನಿರೀಕ್ಷೆಯನ್ನು ತುಳು ಸಂಘಟನೆಗಳು ವ್ಯಕ್ತಪಡಿಸಿವೆ. ಈ ಟ್ವೀಟರ್ ಅಭಿಯಾನದ ಹ್ಯಾಶ್ ಟ್ಯಾಗ್ #TuluTo8thSchedule ಹಾಗೂ ಟ್ವಿಟರ್ ಐಡಿ #TuluofficialinKA_KL ಎಂಬುದಾಗಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ತುಳು ಪರವಾದ ಇದೊಂದು ದೊಡ್ಡ ಹೋರಾಟವೆಂದೇ ವ್ಯಾಖ್ಯಾನಿಸಲಾಗಿದೆ.
ತುಳು ಭಾಷೆಯನ್ನು ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಮೊದಲು ಅಧಿಕೃತ ಭಾಷೆಯನ್ನಾಗಿ ಮಾಡಿದರೆ ಮುಂದೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಮತ್ತಷ್ಟುಬಲ ಬರುತ್ತದೆ. ಈ ನಿಟ್ಟಿನಲ್ಲಿ ತುಳು ಸಂಘಟನೆಗಳು ಮತ್ತೆ ಟ್ವೀಟರ್ ಅಭಿಯಾನಕ್ಕೆ ಮೊರೆ ಹೋಗಿವೆ.
ಕಳೆದ ಅಭಿಯಾನದಲ್ಲಿ ಅರ್ಧ ಲಕ್ಷ ಮಂದಿ ಟ್ವೀಟ್
2018 ಆಗಸ್ಟ್ 10ರಂದು ತುಳು ಭಾಷೆ ಸಂವಿಧಾನದಲ್ಲಿ ಸೇರ್ಪಡೆ ಕುರಿತಂತೆ ಟ್ವೀಟ್ ಅಭಿಯಾನ ನಡೆದಿತ್ತು. ಈ ಅಭಿಯಾನದಲ್ಲಿ ಬರೋಬ್ಬರಿ 52,600 ಮಂದಿ ಪಾಲ್ಗೊಂಡಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಸುನಿಲ್ ಕುಮಾರ್ ಸೇರಿದಂತೆ ಉಭಯ ಜಿಲ್ಲೆಗಳ ಶಾಸಕರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.