Asianet Suvarna News Asianet Suvarna News

ಕನ್ನಡಕ್ಕೆ ಮಾರಕವಾದ ತ್ರಿಭಾಷಾ ಸೂತ್ರ: ಟಿ.ಎಸ್‌.ನಾಗಾಭರಣ

*  1 ರಿಂದ 10ನೇ ತರಗತಿವರೆಗೆ ಕನ್ನಡ ಪ್ರಧಾನ ಭಾಷೆಯಾಗಬೇಕು
*  ‘ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು’ ಒಂದು ಚಿಂತನೆ
*  ನಮ್ಮತನವನ್ನು ಉಳಿಸಿಕೊಳ್ಳಬೇಕು 
 

Trilingual Formula is Fatal to Kannada Says TS Nagabharana grg
Author
Bengaluru, First Published Jul 3, 2022, 3:00 AM IST

ಮಂಡ್ಯ(ಜು.03):  ತ್ರಿಭಾಷಾ ಸೂತ್ರವನ್ನು ಒಪ್ಪಿದ ತಪ್ಪಿನ ಪರಿಣಾಮ ಇಂದು ಹಿಂದಿ-ಇಂಗ್ಲಿಷ್‌ ನಡುವೆ ಸಿಲುಕಿಕೊಂಡಿರುವ ಕನ್ನಡಿಗರ ಮೇಲೆ ಪರಭಾಷಿಕರು ಸವಾರಿ ಮಾಡುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ವಿಷಾದಿಸಿದರು.

ಶನಿವಾರ ನಗರದ ಗಾಂಧಿ ಭವನದಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸೇನೆ ಆಯೋಜಿಸಿದ್ದ ‘ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು’ ಒಂದು ಚಿಂತನೆ, ವಿಚಾರ ಸಂಕಿರಣ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜಧಾನಿಯಲ್ಲೇ ಅನ್ಯ ಭಾಷಿಕರು ಕನ್ನಡಿಗರನ್ನು ಅಲ್ಲಾಡಿಸುವ ಹಂತಕ್ಕೆ ಬೆಳೆದಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದನ್ನು ಸಾಭೀತುಪಡಿಸಬೇಕಿದೆ. ಭಾಷೆ ಎನ್ನುವುದು ಸಂಸ್ಕೃತಿಯ ಮೂಲ ಬೇರು. ಭಾಷೆ ಇಲ್ಲದೆ ಸಂಸ್ಕೃತಿ ಬೆಳೆಯೋಲ್ಲ. ಸಂಸ್ಕೃತಿ ಬೆಳೆಯದೆ ಸಮಾಜ ಬೆಳೆಯುವುದಿಲ್ಲ. ಸಮಾಜ ಬೆಳೆಯದೆ ರಾಷ್ಟ್ರ, ರಾಜ್ಯ ಬೆಳೆಯುವುದಿಲ್ಲ ಎಂದರು.

ಫೆಲೊಶಿಫ್‌ಗೆ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಯುಜಿಸಿಗೆ ನಾಗಾಭರಣ ಪತ್ರ

ಸಮಾನ ಅವಕಾಶ ನೀಡಲಿ:

ಭಾಷಾ ಸೂತ್ರ ಅಳವಡಿಕೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಟ್ಟಿನಿಲುವು ತಳೆಯಬೇಕು. 1-10ನೇ ತರಗತಿಯವರಿಗೆ ಕನ್ನಡವೇ ಪ್ರಧಾನ ಭಾಷೆಯಾಗಬೇಕು. ಹೀಗಾದಾಗ ಮಾತ್ರ ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕವಾಗಿ ಅಧಿಪತ್ಯ ಸಾಧಿಸಲು ಸಾಧ್ಯ ಎಂದ ಅವರು, ಸಂವಿಧಾನದ ಕೆಲ ಅಂಶ ಬದಲಾಗಬಾರದು. ಆದರೆ, ಅದರಲ್ಲಿ ಹೇಳಿರುವಂತೆ ರಾಜ್ಯ ಕೇಂದ್ರ 23 ಭಾಷೆಗಳ ಆಭಿವೃದ್ಧಿಗಳ ಆಶಯಗಳ ಕುರಿತ, ಅಭಿವೃದ್ಧಿಗೆ ಸಮಾನವಾದ ಅವಕಾಶವನ್ನು ನೀಡಬೇಕು. ಆದರೆ, ಈ ಪರಿಸ್ಥಿತಿ ಕಾಣದಾಗಿದೆ. ಆಂಗ್ಲ ಭಾಷೆ ಹಾಗೂ ಹಿಂದಿಯ ಹೇರಿಕೆ, ದಬ್ಬಾಳಿಕೆ ಅತಿಯಾಗಿದೆ. ಜನರೆಲ್ಲರೂ ಇಂಗ್ಲಿಷ್‌ ಭಾಷೆಯ ದಾಸರಾಗುತ್ತಿದ್ದಾರೆ. ಕನ್ನಡವನ್ನು ನಿರ್ಲಕ್ಷಿಸಿ ತುಳಿಯಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ತೋರ್ಪಡಿಕೆ ಪ್ರೀತಿ ಪ್ರಯೋಜನವಿಲ್ಲ:

ಕನ್ನಡ ಭಾಷೆಯ ಬಗ್ಗೆ ತೋರ್ಪಡಿಕೆ ಪ್ರೀತಿ ಇದ್ದರಷ್ಟೇ ಸಾಲದು. ಹೃದಯಾಂತರಾಳದ ಪ್ರೀತಿ ಇರಬೇಕು. ಯಾವ ಭಾಷೆಯನನ್ನು ವೈಜ್ಞಾನಿಕವಾಗಿ, ಸೌಂದರ್ಯಯುತವಾಗಿ, ಮಾತನಾಡಿದ್ದನ್ನು ಬರೆಯುವಷ್ಟು, ಅಕ್ಷರ ರೂಪದಲ್ಲಿ ಹಲವಾರು ಮಾರ್ಪಾಡುಗಳ ಜೊತೆಯಲ್ಲಿ ತರಬಹುದಾದ ಜಗತ್ತಿನ ಎರಡು ಅದ್ಭುತ ಭಾಷೆಗಳಲ್ಲಿ ಕನ್ನಡ ಎರಡನೆಯದಾಗಿದೆ. ಇಂತಹ ಅದ್ಭುತ ಭಾಷೆಯ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನ್ನಡದ ಬಗ್ಗೆ ಅಪಾರ ಪ್ರೀತಿ ಇರುವವರು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಾರೆ. ಕೇವಲ ಭಾಷೆಯ ಬೆಳವಣಿಗೆಯನ್ನಷ್ಟೇ ಅಲ್ಲದೇ, ಬದುಕಿನ ಬೆಳವಣಿಗೆಗಳನ್ನೂ ಗಮನಿಸುತ್ತಾನೆ. ಭಾಷೆಯ ಬೆಳವಣಿಗೆ ವಿಚಾರದಲ್ಲಿ ಇದುವರೆಗೆ ನಾವು ಪೂರೈಸಿದ್ದೇವೆ, ಯಾವುದನ್ನು ಪೂರೈಸಿಲ್ಲ ಎನ್ನುವುದೇ ನಮ್ಮ ಮುಂದಿರುವ ಸವಾಲುಗಳು. ಉದ್ಯೋಗ, ಶಿಕ್ಷಣ, ಆಡಳಿತ, ಬಳಕೆ ಈ ನಾಲ್ಕು ಕಡೆ ಕನ್ನಡದ ಬೆಳವಣಿಗೆಗೆ ಪೂರಕವಾಗಿ ನಾವು ಏನನ್ನು ಮಾಡಿದ್ದೇವೆ. ಯಾವ ಸವಾಲುಗಳನ್ನು ನಿವಾರಿಸಿ ಮುನ್ನಡೆದಿದ್ದೇವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಕೆಲ ಕನ್ನಡ ಶಾಲೆಗಳು ಕನ್ನಡ ಕಲಿಸುತ್ತಿಲ್ಲ: ಟಿ.ಎಸ್‌.ನಾಗಾಭರಣ

ನಮ್ಮತನವನ್ನು ಉಳಿಸಿಕೊಳ್ಳಬೇಕು:

ಮೊದಲು ನಮ್ಮತನವನ್ನು ಉಳಿಸಿಕೊಳ್ಳಬೇಕು ಎಂದಾದರೆ ಶೈಕ್ಷಣಿಕ, ಸಾಂಸ್ಕೃತಿಕ, ವೈಚಾರಿಕ ನೆಲೆಗಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಬೇಕು ಎಂದ ಅವರು, ಆಡಳಿತ ವ್ಯವಸ್ಥೆಯ ನಿಟ್ಟಿನಲ್ಲಿ ಹೈದರಾಬಾದ್‌ ಪ್ರಾಂತ್ಯ, ಹಳೇ ಮೈಸೂರು ಪ್ರಾಂತ್ಯ ಮತ್ತು ಮಂಗಳೂರು ಹೀಗೆ ಭಾಷಾ ವೈವಿಧ್ಯತೆಯಿಂದಾಗಿ ಭಾಷೆಯ ಒಗ್ಗೂಡುವಿಕೆ ಬಹುದೊಡ್ಡ ಸವಾಲಾಗಿದೆ. ಹಾಗಾಗಿ ಹೋರಾಟ ಅನಿವಾರ್ಯವಾಗಿದ್ದು, ಎಲ್ಲರೂ ಕೂಡ ಭಾಷಾಭಿಮಾನದ ವಿಷಯದಲ್ಲಿ ನೆರೆಯ ತಮಿಳುನಾಡಿನ ಜನತೆಯನ್ನು ನೋಡಿ ಕಲಿಯಬೇಕಾಗಿದೆ ಎಂದರು.

ಸಮಾರಂಭದಲ್ಲಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಜಯಮ್ಮ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್‌.ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಮಂಜಮ್ಮ ಜೋಗತಿ, ಸೇನೆಯ ಜಿಲ್ಲಾಧ್ಯಕ್ಷ ಎಚ್‌.ಸಿ.ಮಂಜುನಾಥ್‌, ನಗರಸಭೆ ಸದಸ್ಯೆ ಸೌಭಾಗ್ಯಮ್ಮ, ಮುನಿಕೃಷ್ಣ, ಮುನಿಗೌಡ ಸೇರಿದಂತೆ ನೂರಾರು ಮಂದಿ ಕನ್ನಡಾಭಿಮಾನಿಗಳು, ಕನ್ನಡ ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು.
 

Follow Us:
Download App:
  • android
  • ios