Asianet Suvarna News Asianet Suvarna News

ಕೆಲ ಕನ್ನಡ ಶಾಲೆಗಳು ಕನ್ನಡ ಕಲಿಸುತ್ತಿಲ್ಲ: ಟಿ.ಎಸ್‌.ನಾಗಾಭರಣ

*   ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ಮನವಿ ಪತ್ರ ಸಲ್ಲಿಸಿದ ಟಿ.ಎಸ್‌.ನಾಗಾಭರಣ 
*   ಕೆಲ ಶಾಲೆಗಳು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015 ಅನ್ನು ಸರಿಯಾಗಿ ಪಾಲಿಸುತ್ತಿಲ್ಲ
*   ಕನ್ನಡ ಪಠ್ಯಪುಸ್ತಕ ಖರೀದಿಸಲು ಅಧಿಕೃತ ಪಟ್ಟಿ ಸಲ್ಲಿಸದ 823 ಶಾಲೆಗಳು 

Some Schools Not Teach Kannada in Karnataka Says TS Nagabharana grg
Author
Bengaluru, First Published Aug 21, 2021, 8:31 AM IST

ಬೆಂಗಳೂರು(ಆ.21):  2021-22ನೇ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ಅನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರನ್ನು ಆಗ್ರಹಿಸಿದೆ.

ಈ ಕುರಿತು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಸಚಿವರನ್ನು ಭೇಟಿ ಮಾಡಿದ ಮನವಿ ಪತ್ರ ಸಲ್ಲಿಸಿದರು. ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರ ಅನ್ವಯ 2017-18ನೇ ಸಾಲಿನಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಕಡ್ಡಾಯಗೊಳಿಸಲಾಗಿದೆ. 2017-18ನೇ ಶೈಕ್ಷಣಿಕ ವರ್ಷದಿಂದ ಈವರೆಗೆ 4ನೇ ತರಗತಿ ಮಕ್ಕಳಿಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಿರಬೇಕಿತ್ತು. ಆದರೆ ರಾಜ್ಯದಲ್ಲಿರುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈ ನಿಯಮವನ್ನು ಉಲ್ಲಂಘಿಸುತ್ತಿರುವ ಬಗ್ಗೆ ಪ್ರಾಧಿಕಾರಕ್ಕೆ ನಿರಂತರವಾಗಿ ದೂರುಗಳು ಸಲ್ಲಿಕೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮದರಸಾ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಕ್ರಮ: ನಾಗಾಭರಣ

ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರ ಕೊಠಡಿಗೆ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಪಠ್ಯಪುಸ್ತಕ ಸಂಘದಿಂದ ಪ್ರಾಧಿಕಾರಕ್ಕೆ ಬಂದಿರುವ ಅಧಿಕೃತ ಮಾಹಿತಿ ಅನ್ವಯ 2021-22ನೇ ಶೈಕ್ಷಣಿಕ ವರ್ಷಕ್ಕೆ ರಾಜ್ಯದ ಸುಮಾರು 823 ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಕನ್ನಡ ಪಠ್ಯಪುಸ್ತಕಗಳನ್ನು ಖರೀದಿಸಲು ಅಧಿಕೃತ ಪಟ್ಟಿಸಲ್ಲಿಸಿಲ್ಲ. ಹೀಗಾಗಿ ಈ ಶಾಲೆಗಳು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015 ಅನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಅನುಮಾನವಿದೆ. ಹೀಗಾಗಿ ಶಿಕ್ಷಣ ಇಲಾಖೆಯಲ್ಲಿ ಎಲ್ಲ ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಹಾಜರಿದ್ದರು.
 

Follow Us:
Download App:
  • android
  • ios