ಎಲ್ಲೆಲ್ಲೂ ಬರವಿದ್ದರೂ ಚನ್ನಪಟ್ಟಣದಲ್ಲಿ ನಳನಳಿಸುತ್ತಿವೆ ಹಳೆಯ ಕಲ್ಯಾಣಿಗಳು

 ಗಿಡಗಂಟಿಗಳು ಬೆಳೆದು, ಮಣ್ಣು, ಕಸಕಡ್ಡಿ ತುಂಬಿಕೊಂಡು ಶಿಥಿಲಾವಸ್ಥೆ ತಲುಪಿದ್ದ ಕಲ್ಯಾಣಿಗಳ ಪಾಲಿಗೆ ನರೇಗಾ ವರದಾನವಾಗಿದ್ದು, ನರೇಗಾ ಯೋಜನೆಯನ್ನು ಬಳಸಿಕೊಂಡು ತಾಲೂಕಿನ ಕಲ್ಯಾಣಿಗಳಿಗೆ ಹೊಸ ರೂಪ ನೀಡಲಾಗುತ್ತಿದೆ.

Although they are coming everywhere, the old Kalyanis are dying in Channapatna  snr

-ವಿಜಯ್ ಕೇಸರಿ

 ಚನ್ನಪಟ್ಟಣ :  ಗಿಡಗಂಟಿಗಳು ಬೆಳೆದು, ಮಣ್ಣು, ಕಸಕಡ್ಡಿ ತುಂಬಿಕೊಂಡು ಶಿಥಿಲಾವಸ್ಥೆ ತಲುಪಿದ್ದ ಕಲ್ಯಾಣಿಗಳ ಪಾಲಿಗೆ ನರೇಗಾ ವರದಾನವಾಗಿದ್ದು, ನರೇಗಾ ಯೋಜನೆಯನ್ನು ಬಳಸಿಕೊಂಡು ತಾಲೂಕಿನ ಕಲ್ಯಾಣಿಗಳಿಗೆ ಹೊಸ ರೂಪ ನೀಡಲಾಗುತ್ತಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ನರೇಗಾ ಯೋಜನೆಯನ್ನು ಬಳಸಿಕೊಂಡು ತಾಲೂಕಿನ ಸುಮಾರು 10 ಕ್ಕೂ ಹೆಚ್ಚು ಕಾಯಕಲ್ಪ ನೀಡಿರುವ ಕಲ್ಯಾಣಿಗಳು ನಳನಳಿಸುತ್ತಿವೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ತಾಲೂಕಿನ ಸುಳ್ಳೇರಿ ಗ್ರಾಮ, ಎಂ.ಬಿ.ಹಳ್ಳಿ, ಚಕ್ಕೆರೆ, ವಂದಾರಗುಪ್ಪೆ, ನೀಲಸಂದ್ರ, ಸರಗೂರು, ಸೋಗಾಲ ಗ್ರಾಮ ಸೇರಿದಂತೆ ಸುಮಾರು 10 ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲಾಗಿದೆ. ಪ್ರಸ್ತತ ದೊಡ್ಡಮಳೂರು ಗ್ರಾಮದ ಕಲ್ಯಾಣಿಯನ್ನು ಪುನಃಶ್ಚೇತನಗೊಳಿಸುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ.

ಕಲ್ಯಾಣಿಗಳಿಗೆ ಜೀವಕಳೆ:

ನಮ್ಮ ಪೂರ್ವಜಕರು ಮಳೆನೀರು ಸಂಗ್ರಹದ ದೃಷ್ಟಿಯಿಂದ ಹಾಗೂ ಅಂತರ್ಜಲ ವೃದ್ಧಿ ಉದ್ದೇಶದಿಂದ ಕೆರೆ-ಕಟ್ಟೆಗಳು, ತೆರೆದ ಬಾವಿ, ಕುಂಟೆ, ಯತೇಚ್ಛವಾಗಿ ನಿರ್ಮಿಸಿದ್ದರು. ಇದರೊಂದಿಗೆ ಧಾರ್ಮಿಕ ಭಾವನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಗ್ರಾಮಗಳ ಮಧ್ಯೆ, ದೇವಾಲಯಗಳ ಸನಿಹದಲ್ಲಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಆದರೆ, ಕಾಲಾಂತರದಲ್ಲಿ ಕೆರೆಕಟ್ಟೆಗಳು ಅಭಿವೃದ್ಧಿ ಹೆಸರಿನಲ್ಲಿ ಒತ್ತುವರಿಯಾದರೆ, ಕಲ್ಯಾಣಿಗಳು ನಿರ್ವಹಣೆ ಇಲ್ಲದೇ ಗಿಡಗಂಟಿಗಳು ಬೆಳೆದು ಸೊರಗಿದ್ದವು.

ಗ್ರಾಮಗಳಲ್ಲಿನ ಕಲ್ಯಾಣಿಗಳು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಧಾರ್ಮಿಕವಾಗಿ, ಸಾಮಾಜಿಕವಾಗಿ, ಭಾವನಾತ್ಮಕವಾಗಿ ಬಾಂಧವ್ಯ ಬೆಸೆದುಕೊಂಡಿದ್ದವು. ಶತಮಾನಗಳ ಹಿಂದೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿರ್ಮಾಣಗೊಂಡಿದ್ದ ಕಲ್ಯಾಣಿಗಳು ಸೂಕ್ತ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆ ತಲುಪುತ್ತಿರುವುದನ್ನು ಕಂಡು ಕೆಲ ಸಂಘ-ಸಂಸ್ಥೆಗಳು ಹಾಗೂ ಯುವಕರ ತಂಡಗಳು ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರೂ ಕೆಲ ದಿನಗಳ ನಂತರ ಕಸಕಡ್ಡಿ ತುಂಬಿಕೊಂಡು, ಗಿಡಗಂಟಿಗಳು ಬೆಳೆದು ಕಲ್ಯಾಣಿಗಳು ಪಾಳು ಬೀಳುತ್ತಿದ್ದವು. ಇದೀಗ ನರೇಗಾ ನೆರವಿನಿಂದ ಈ ಕಲ್ಯಾಣಿಗಳು ಪುನಃಶ್ಚೇತನ ಕಂಡಿದ್ದು, ಹೊಸ ಕಳೆಯೊಂದಿಗೆ ಕಂಗೊಳಿಸುತ್ತಿವೆ.

ಮೂರು ಹಂತದಲ್ಲಿ ಕಾಯಕಲ್ಪ:

ನರೇಗಾ ಯೋಜನೆಯಲ್ಲಿ ಗ್ರಾಮೀಣ ರಸ್ತೆಗಳು, ಚರಂಡಿಗಳು, ಉದ್ಯಾನವನ, ದನದ ಕೊಟ್ಟಿಗೆ, ಬದು ನಿರ್ಮಾಣ, ಇಂಗು ಗುಂಡಿ ಸೇರಿದಂತೆ ಹತ್ತಾರು ಕೆಲಸಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಅದೇ ರೀತಿ ತಾಲೂಕಿನ ಆಯ್ದ ಕಲ್ಯಾಣಿಗಳನ್ನು ಪುನಃಶ್ಚೇತನಗೊಳಿಸುತ್ತಾ ಜಲಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಮೂರು ಹಂತದಲ್ಲಿ ಕಲ್ಯಾಣಿಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ.

ಮೊದಲ ಹಂತದಲ್ಲಿ ಕಲ್ಯಾಣಿ ಒಳ ಹಾಗೂ ಹೊರಭಾಗದಲ್ಲಿ ತುಂಬಿದ ಕಸಕಡ್ಡಿಗಳು, ಬೆಳೆದ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಕಲ್ಯಾಣಿಯಲ್ಲಿನ ಜರುಗಿದ ಚಪ್ಪಡಿಗಳನ್ನು ಒಪ್ಪ ಮಾಡುವುದು, ಚಪ್ಪಡಿಗಳು ಜರುಗದಂತೆ ಕಾಂಕ್ರಿಟ್ ಹಾಕುವುದು ಸೇರಿದಂತೆ ಕಲ್ಯಾಣಿಯ ವಿನ್ಯಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತದೆ.

ಇನ್ನು ಮೂರನೇ ಹಂತದಲ್ಲಿ ಕಲ್ಯಾಣಿಯ ಸುತ್ತ ಮುತ್ತ ತಡೆಬೇಲಿ ಹಾಕಿ, ಗೇಟ್ ನಿರ್ಮಿಸಿ ಕಲ್ಯಾಣಿಯನ್ನು ಭದ್ರಗೊಳಿಸುವ ಜತೆಗೆ ಕಲ್ಯಾಣಿಯ ತಡೆಬೇಲಿ ಸೇರಿದಂತೆ ಸುತ್ತ ಮುತ್ತ ಸೌಂದರ್ಯೀಕರಣ ಕಾಮಗಾರಿ ಮಾಡುವ ಮೂಲಕ ಕಲ್ಯಾಣಿಗೆ ಕಾಯಕಲ್ಪ ನೀಡುವ ಕೆಲಸ ಮಾಡಲಾಗುತ್ತದೆ.

ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಅವಸಾನದ ಅಂಚಿಗೆ ತಲುಪಿದ್ದ ಕಲ್ಯಾಣಿಗಳ ಪುನಃರುಜ್ಜೀವನಕ್ಕೆ ಕೇಂದ್ರ ಸರ್ಕಾರದ ನರೇಗಾ ಯೋಜನೆ ವರವಾಗಿ ಪರಿಣಮಿಸಿದೆ. ಗಿಡಗಳು, ಕಸಕಡ್ಡಿ ಜೊತೆಗೆ, ಹೂಳು ತುಂಬಿಕೊಂಡು ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದ ಕಲ್ಯಾಣಿಗಳಿಗೆ ನರೇಗಾ ಯೋಜನೆ ಮೂಲಕ ಹೊಸ ರೂಪ ಸಿಗುತ್ತಿದ್ದು, ಕಲ್ಯಾಣಿಗಳು ಹೊಸಕಳೆಯೊಂದಿಗೆ ಕಂಗೊಳಿಸುತ್ತಿವೆ.

ಪೋಟೊ೨ಸಿಪಿಟಿ೧:

ಬಿರುಬೇಸಿಗೆಯಲ್ಲೂ ಬತ್ತದೆ ನೀರು ತುಂಬಿಕೊಂಡು ನಳನಳಿಸುತ್ತಿರುವ ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರಿನ ಕಲ್ಯಾಣಿ.

Latest Videos
Follow Us:
Download App:
  • android
  • ios