ಚಿತ್ರದುರ್ಗ: ಕೋಟೆನಾಡಲ್ಲಿ ಗಮನ ಸೆಳೆಯುತ್ತಿರುವ ತ್ರಿವರ್ಣ ಧ್ವಜದ ಲೈಟಿಂಗ್ಸ್
ರಾತ್ರಿ ವೇಳೆ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಕೋಟೆ
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಆ.09): 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕೋಟೆನಾಡು ಚಿತ್ರದುರ್ಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಅದ್ರಲ್ಲಂತೂ ನಗರದಲ್ಲಿರುವ ಐತಿಹಾಸಿಕ ಕಲ್ಲಿನ ಕೋಟೆಯಲ್ಲಿ ತ್ರಿವರ್ಣ ಧ್ವಜದ ಬಣ್ಣದ ಲೈಟಿಂಗ್ಸ್ ಎಲ್ಲರ ಗಮನ ಸೆಳೆಯುತ್ತಿದೆ. ಆ.3ರಿಂದ ಆರಂಭವಾಗಿರುವ ದೀಪಾಲಂಕಾರ ಆ.16 ರ ವರೆಗೆ ನಡೆಯಲಿದೆ. ಮಳೆಯ ಕಾರಣಕ್ಕೆ ಹಾಗಾಗ ವ್ಯತ್ಯಯ ಆಗುತ್ತಿದೆ. ಅದನ್ನು ಹೊರತು ಪಡಿಸಿದ್ರೆ ಸಂಜೆ ಮೇಲೆ ಕೋಟೆಗೆ ಯಾರಿಗೂ ಪ್ರವೇಶ ವಿಲ್ಲದ ಕಾರಣ, ರಾತ್ರಿ ವೇಳೆ ಮಾತ್ರ ದೀಪಾಲಂಕಾರದಿಂದ ಕೋಟೆ ಕಂಗೊಳಿಸುತ್ತದೆ. ಕಲ್ಲಿನ ಕೋಟೆಯ ಮುಂಭಾಗ ಹಾಗೂ ಬತೇರಿಯಲ್ಲಿ ತ್ರಿವರ್ಣ ಧ್ವಜದ ದ್ವೀಪಾಲಂಕಾರವನ್ನು ಎಲ್ಲರೂ ದೂರದಿಂದಲೇ ನೋಡಿ ಕಣ್ತುಂಬಿ ಕೊಳ್ಳುತ್ತಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ದೇಶದ ಐತಿಹಾಸಿಕ ಸ್ಮಾರಕಗಳಲ್ಲಿ ದೀಪಾಲಂಕಾರ ಮಾಡಿ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ದೇಶದ ಆಯ್ದ 75 ಐತಿಹಾಸಿಕ ಸ್ಥಳಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಆದ್ರಲ್ಲಿ ನಮ್ಮ ಚಿತ್ರದುರ್ಗದ ಐತಿಹಾಸಿಕ ಕಲ್ಲಿನಕೋಟೆಯೂ ಸೇರ್ಪಡೆ ಆಗಿರೋದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ. ನಿತ್ಯ ಸಂಜೆ ವೇಳೆ 7ರಿಂದ 8.30 ರ ವರೆಗೆ ಈ ಲೈಟಿಂಗ್ ವ್ಯವಸ್ಥೆ ಇರುತ್ತದೆ. ಜಿಲ್ಲೆಯ ಅನೇಕರು ಈ ಸುಂದರ ದೃಶ್ಯಗಳನ್ನು ನೋಡಿ ಕಣ್ತುಂಬಿ ಕೊಳ್ಳುವುದಲ್ಲದೇ, ಸಾಮಾಜಿಕ ಜಾಲತಾಣದಲ್ಲಿಯೂ ಇದರ ಬಗ್ಗೆ ತಿಳಿಸುವ ಮೂಲಕ ಅನೇಕರಿಗೆ ಶೇರ್ ಮಾಡಿರೋದು ಬೆಳಕಿಗೆ ಬಂದಿದೆ.
CHITRADURGA HEAVY RAIN: ಜಿಟಿ ಜಿಟಿ ಮಳೆಗೆ ಕಂಗಾಲಾದ ಕೋಟೆನಾಡಿನ ಅನ್ನದಾತ
ಇನ್ನೂ ಕಲ್ಲಿನ ಕೋಟೆಯ ಪ್ರವೇಶ ದ್ವಾರ ಅಥವಾ ಮುಖ್ಯ ದ್ವಾರ, ಕಲ್ಯಾಣಿ, ಬತೇರಿ ಹಾಗೂ ಬಂಧಿಖಾನೆಯ ಬಳಿ ಮಾತ್ರ ಈ ರೀತಿಯ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಕೋಟೆ ಮುಂಭಾಗ ತೆರಳುವವರು ಮುಖ್ಯ ದ್ವಾರದ ಮುಂದೆ ಕಂಗೊಳಿಸೋ ತ್ರಿವರ್ಣ ಧ್ವಜವನ್ನು ಕಂಡು ಪುಳಕಿತರಾದ್ರೆ, ಇನ್ನಿತರರು ತಾವು ಇದ್ದಲ್ಲಿಯೇ ನಿಂತು, ಬತೇರಿ ಹಾಗೂ ಬಂಧಿಖಾನೆ ಮೇಲೆ ಅಳವಡಿಸಿರೋ ದೀಪಾಲಂಕಾರ ಕಂಡು ಖುಷಿ ಪಡ್ತಿದ್ದಾರೆ. ಅಮೃತ ಮಹೋತ್ಸವದ ಅವಕಾಶವನ್ನು ಬಳಸಿಕೊಂಡು ಜನರಲ್ಲಿ ದೇಶಪ್ರೇಮ ಹುಟ್ಟಿಸುವ ಕೆಲಸವನ್ನು ಪುರಾತತ್ವ ಇಲಾಖೆ ಮಾಡುತ್ತಿದೆ.
ಇನ್ನೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೋಟೆಯಲ್ಲಿರುವ ಐತಿಹಾಸಿಕ ಸ್ಮಾರಕಗಳು ಹಾಗು ಕೋಟೆಯನ್ನು ವೀಕ್ಷಿಸಲು ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಆ. 5 ರಿಂದ 15 ರವರೆಗೂ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಹಿಂದೆ ಯಾರೇ ಕೋಟೆಯನ್ನು ಪ್ರವೇಶ ಮಾಡಬೇಕು ಅಂದ್ರು ಪ್ರತಿ ವ್ಯಕ್ತಿಗೆ 30 ರೂ ನಂತೆ ದರ ನಿಗದಿ ಪಡಿಸಲಾಗಿತ್ತು.