Chitradurga Heavy Rain: ಜಿಟಿ ಜಿಟಿ ಮಳೆಗೆ ಕಂಗಾಲಾದ ಕೋಟೆನಾಡಿನ ಅನ್ನದಾತ
ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಚಿತ್ರದುರ್ಗ ಜಿಲ್ಲೆ ರೈತರು ಬೆಳೆ ನಷ್ಟವಾಗಿ ಸಂಕಷ್ಟದಲ್ಲಿದ್ದಾರೆ. ಭಾರೀ ಮಳೆಯಿಂದ ಕೆರೆ ಕಟ್ಟೆ ತುಂಬಿದ್ದು ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.8) : ಅದೊಂದು ಬೆಂಗಾಡು ಮಳೆ ಬಂದ್ರೆ ಸಾಕಪ್ಪ ಎನ್ನುತಿದ್ದರು ರೈತರು. ಆದ್ರೆ ಇದೀಗ ಮಳೆರಾಯನ ಟಾರ್ಚರ್ ಗೆ ಅನ್ನದಾತರು ರೋಸಿ ಹೋಗಿದ್ದಾರೆ. ಕಳೆದ ಕೆಲದಿನಗಳಿಂದ ವಿಪರೀತ ಮಳೆಗೆ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದ ಪರಿಣಾಮ ನೀರಿನಿಂದ ಜಮೀನುಗಳು ಜಲಾವೃತ ಆಗಿವೆ. ಕೈಗೆ ಬಂದಿದ್ದ ಬೆಳೆ ನೀರು ಪಾಲಾಗಿದ್ದು ರೈತರ ಪಾಡು ಹೇಳತೀರದು.
Chitradurgaದಲ್ಲಿ ವರುಣನ ಆರ್ಭಟ, ರಾತ್ರಿ ಸುರಿದ ಮಳೆಗೆ ಜನ ಹೈರಾಣ
ಸತತ ಒಂದು ತಿಂಗಳಿಂದ ಮಳೆರಾಯ ಎಲ್ಲೆಡೆ ಆರ್ಭಟಿಸುತಿದ್ದಾನೆ. ವರುಣನ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅಂತೆಯೇ ಕೋಟೆನಾಡು ಚಿತ್ರದುರ್ಗ(Chitradurga) ಜಿಲ್ಲೆಯ ಹಲವೆಡೆ ಮಳೆರಾಯ ಬಿಟ್ಟು ಬಿಡದೇ ಸತತ ಎರಡು ತಿಂಗಳಿಂದ ಜಿಟಿ ಜಿಟಿ ಅಂತ ಸುರಿಯುತಿದ್ದೂ, ಹೊಳಲ್ಕೆರೆ(Holalkere) ತಾಲ್ಲೂಕಿನ ಬಹುತೇಕ ಎಲ್ಲಾ ಕೆರೆ ಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಹೀಗಾಗಿ ಕೆರೆ ಸಮೀಪದಲ್ಲಿರುವ ರೈತರ ಜಮೀನುಗಳಿಗೆ ಕೆರೆಯ ನೀರು ಹರಿದು ದೊಡ್ಡ ಅವಾಂತರ ಸೃಷ್ಟಿಸಿದೆ. ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ(Arehalli) ಗ್ರಾಮದ ರೈತ ಓಬಳೇಶ್ ನ ಜಮೀನಿನಲ್ಲಿದ್ದ ಮೆಕ್ಕೆಜೋಳ, ಹತ್ತಿ ಹಾಗು ಬೆಳೆಗಳು ಸಂಪೂರ್ಣ ಜಲವೃತವಾಗಿವೆ. ಸುಮಾರು ೬ ಎಕರೆಯಲ್ಲಿ ಕೈಗೆ ಬಂದಿದ್ದ ಮೆಕ್ಕೆಜೋಳದ ಪೈರು ನೀರಲ್ಲಿ ಮುಳುಗಡೆಯಾಗಿ ರೈತ, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸ ಬೇಕಾಗಿದೆ. ಹೀಗಾಗಿ ಕಂಗಾಲಾಗಿರೋ ಅನ್ನದಾತರು ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಮಳೆ ಸ್ವಲ್ಪ ಬಿಡುವು ಕೊಟ್ಟರೆ ಆ ನೀರನ್ನು ಜಮೀನಿನಿಂದ ಹೊರಗೆ ಬಿಟ್ಟು ಕೈಗೆ ಸಿಗುವಷ್ಟು ಬೆಳೆ ಉಳಿಸಿಕೊಂಡು ಬಿತ್ತನೆಗೆ ಮಾಡಿದ ಅಸಲಿನ ಹಣವನ್ನಾದರೂ ಪಡೆಯಬೇಕೆಂಬ ಯೋಚನೆಗೆ ರೈತನಿದ್ದಾನೆ. ಆದರೆ ಬಿಟ್ಟು ಬಿಡದಂತೆ ಸುರಿಯುತ್ತಿರೋ ಜಿಟಿ ಜಿಟಿ ಮಳೆ ದೊಡ್ಡ ಟಾರ್ಚರ್ ಎನಿಸಿದೆ ಮಳೆ ನಿಂತ್ರೆ ಸಾಕಪ್ಪ ಎಂಬಂತಾಗಿದೆ. ಅಲ್ಲದೇ ಜಮೀನಿನಲ್ಲಿ ಹಲವು ದಿನಗಳಿಂದ ನೀರು ನಿಂತ ಪರಿಣಾಮ ಮುಂಬರುವ ವರ್ಷದವರೆಗೆ ಜಾನುವಾರುಗಳಿಗೆ ಮೇವಿಗಾಗಿ ಪರದಾಡುವ ಪರಿಸ್ಥಿತಿ ಕೂಡ ಎದುರಿಸುವಂತಾಗಿದೆ. ರೈತ ಇಷ್ಟೆಲ್ಲಾ ಕಷ್ಟಕ್ಕೆ ಸಿಲುಕಿದ್ದರೂ, ಯಾವೊಬ್ಬ ಜನಪ್ರತಿನಿಧಿಗಳು ಇತ್ತ ಸುಳಿದಿಲ್ಲ. ಜನಪ್ರತಿನಿಧಿಗಳ ವರ್ತನೆ, ಬೇಜವಾಬ್ದಾರಿಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಅಧಿಕಾರಿಗಳಾದ್ರು ಇಂತಹ ಸ್ಥಿತಿ ಇರುವ ರೈತನ ಕಡೆ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅಕಾಲಿಕ ಮಳೆಗೆ ನೆಲಕಚ್ಚಿದ ಮೆಕ್ಕೆಜೋಳ: ಕೋಟೆನಾಡಿನ ರೈತರ ಬದುಕು ಅತಂತ್ರ
ಒಟ್ಟಾರೆ ಒಂದಲ್ಲ ಒಂದು ರೀತಿಯಲ್ಲಿ ಕೋಟೆನಾಡಿನ ರೈತರು ಸಂಕಷ್ಟ ಎದುರಿಸುತ್ತಲೇ ಬರ್ತಿದ್ದಾರೆ. ಮಳೆ ಬಂದರೆ ಬೆಳೆನಾಶ ಆಗುವಷ್ಟು ವಿಪರೀತ, ಇಲ್ಲದಿದ್ದರೆ ಮಳೆಯೇ ಇಲ್ಲದೆ ಬರದ ಸಿಡಿಲು. ಇತ್ತೀಚೆಗೆ ಸಾಕಷ್ಟು ಮಳೆ ಸುರಿದಿಲ್ಲವೆಂದು ಮಳೆಗೆ ಜಪ ಮಾಡಿದ್ದ ರೈತರು ಇದೀಗ ಜಿಟಿ ಜಿಟಿ ಮಳೆ ನಿಂತರೆ ಸಾಕಪ್ಪ ಬೆಳೆ ಉಳಿಸ್ಕೊತಿವಿ ಎನ್ನುವಂತಾಗಿದೆ. ಕೃಷಿ ಸಚಿವ ಬಿಸಿ ಪಾಟೀಲ್ ಈ ಜಿಲ್ಲೆಯ ಉಸ್ತುವಾರಿಯಾದರು ಸಹ ಅನ್ನದಾತರ ಸಂಕಷ್ಟದತ್ತ ತಿರುಗಿ ಸಹ ನೋಡದಿರೋದು ಮಾತ್ರ ವಿಪರ್ಯಾಸವೇ ಸರಿ..