- Home
- Karnataka Districts
- ಶಿವಮೊಗ್ಗ ಲವ್ ಮ್ಯಾರೇಜ್: 2ನೇ ಮದುವೆಗೆ ಒಪ್ಪದ ಮೊದಲ ಹೆಂಡತಿಯನ್ನ ಯಮಲೋಕಕ್ಕೆ ಕಳಿಸಿದ ಗೋಪಿ!
ಶಿವಮೊಗ್ಗ ಲವ್ ಮ್ಯಾರೇಜ್: 2ನೇ ಮದುವೆಗೆ ಒಪ್ಪದ ಮೊದಲ ಹೆಂಡತಿಯನ್ನ ಯಮಲೋಕಕ್ಕೆ ಕಳಿಸಿದ ಗೋಪಿ!
ಶಿವಮೊಗ್ಗದ ಭದ್ರಾವತಿಯಲ್ಲಿ, ಪ್ರೀತಿಸಿ ಅಪಹರಿಸಿ ಮದುವೆಯಾಗಿದ್ದ ಪತಿಯೇ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪರಸ್ತ್ರೀ ವ್ಯಾಮೋಹ ಮತ್ತು ಎರಡನೇ ಮದುವೆಯ ಆಸೆಗೆ ಬಿದ್ದ ಗಂಡ ಗೋಪಿ, ಪತ್ನಿ ಚಂದನಬಾಯಿ ಕೊಲೆಗೈದು ಮಕ್ಕಳು ಅನಾಥ ಮಾಡಿದ್ದಾರೆ.

ನಿನ್ನ ಬಿಟ್ಟರೆ ನನಗ್ಯಾರು ಇಲ್ಲ ಎಂದವ ಹೆಂಡ್ತಿ ಯಮಲೋಕಕ್ಕೆ ಕಳಿಸಿದ
ಶಿವಮೊಗ್ಗ (ಜ.13): 'ನಿನ್ನ ಬಿಟ್ಟರೆ ನನಗ್ಯಾರು ಇಲ್ಲ, ನೀನಿಲ್ಲದಿದ್ದರೆ ಸತ್ತು ಹೋಗ್ತೇನೆ' ಎಂದು ಬೆನ್ನು ಬಿದ್ದು, ನಿಶ್ಚಿತಾರ್ಥವಾಗಿದ್ದ ಹುಡುಗಿಯನ್ನು ಅಪಹರಿಸಿ ಮದುವೆಯಾಗಿದ್ದ ಗಂಡನೇ, ಈಗ ಆಕೆಯನ್ನೇ ಪರಲೋಕಕ್ಕೆ ಕಳುಹಿಸಿದ್ದಾನೆ. ಪರಸ್ತ್ರೀ ವ್ಯಾಮೋಹ ಹಾಗೂ ಎರಡನೇ ಮದುವೆಯ ಹಪಾಹಪಿಗೆ ಬಿದ್ದ ಪತಿ, ತನ್ನನ್ನು ನಂಬಿ ಬಂದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಭೀಕರ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಪಂಡರಹಳ್ಳಿ ಕ್ಯಾಂಪ್‌ನಲ್ಲಿ ನಡೆದಿದೆ.
ಸಿನಿಮಾ ಸ್ಟೈಲ್ ಪ್ರೇಮ ಕಥೆ, ದುರಂತ ಅಂತ್ಯ
ಬೊಮ್ಮನಕಟ್ಟೆ ಪಂಡರಹಳ್ಳಿ ಕ್ಯಾಂಪ್‌ನ ನಿವಾಸಿ ಗೋಪಿ (28) ವೃತ್ತಿಯಲ್ಲಿ ಅಡಿಕೆ ಕೊಯ್ಲು ಮೇಸ್ತ್ರಿ. ಈತ ಡಿ.ಬಿ. ಹಳ್ಳಿಯ ಚಂದನಬಾಯಿ (23) ಎಂಬಾಕೆಯನ್ನು ಎಸ್.ಎಸ್.ಎಲ್.ಸಿ ಓದುತ್ತಿದ್ದಾಗಿನಿಂದಲೂ ಪ್ರೀತಿಸುತ್ತಿದ್ದನು. ಆದರೆ, ಬೇರೆ ಬೇರೆ ಜಾತಿಯಾದ ಕಾರಣ ಎರಡು ಕುಟುಂಬದವರು ಇವರನ್ನು ದೂರ ಮಾಡಿದ್ದರು. ಚಂದನಬಾಯಿಗೆ ಮನೆಯವರು ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥವನ್ನೂ ಮಾಡಿದ್ದರು.
ಚಂದನಾ ನನಗೇ ಬೇಕೆಂದು ಹಠ
ಆದರೆ ಹಠ ಬಿಡದ ಗೋಪಿ, ಸಿನಿಮೀಯ ಮಾದರಿಯಲ್ಲಿ ಆಕೆಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದನು. ಅಂದು ಮನೆಯವರನ್ನೆಲ್ಲಾ ಎದುರು ಹಾಕಿಕೊಂಡು 'ಗೋಪಿ ಜೊತೆಗೇ ಇರುತ್ತೇನೆ' ಎಂದು ಬಂದಿದ್ದ ಚಂದನಬಾಯಿಗೆ ಆತನೇ ಯಮನಾಗುತ್ತಾನೆಂದು ತಿಳಿದಿರಲಿಲ್ಲ.
ಪರಸ್ತ್ರಿ ವ್ಯಾಮೋಹ ಮತ್ತು ಹಚ್ಚೆ ಹಾಕಿಸಿಕೊಳ್ಳುವ ಹುಚ್ಚು
ಸುಮಾರು 6 ವರ್ಷಗಳ ಸುಂದರ ಸಂಸಾರ, ಇಬ್ಬರು ಮುದ್ದಾದ ಮಕ್ಕಳಿದ್ದರೂ ಗೋಪಿ ಹಾದಿ ತಪ್ಪಿದ್ದನು. ಕ್ಲಬ್‌ಗೆ ಹೋಗುವ ಅಭ್ಯಾಸ ಮಾಡಿಕೊಂಡಿದ್ದ ಈತ, ಅಲ್ಲಿನ ಯುವತಿಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಕೇವಲ ಸಂಬಂಧವಷ್ಟೇ ಅಲ್ಲದೆ, ಕ್ಲಬ್ ಯುವತಿಯರ ಹೆಸರನ್ನು ತನ್ನ ಮೈಮೇಲೆ ಹಚ್ಚೆ (Tattoo) ಹಾಕಿಸಿಕೊಂಡಿದ್ದನು. ಇದನ್ನು ಪ್ರಶ್ನಿಸಿದ್ದಕ್ಕೆ ದಂಪತಿಗಳ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. 'ನಾನು ಎರಡನೇ ಮದುವೆಯಾಗುತ್ತೇನೆ, ನೀನು ಒಪ್ಪಿಗೆ ನೀಡಬೇಕು' ಎಂದು ಗೋಪಿ ಪತ್ನಿಗೆ ನಿರಂತರವಾಗಿ ಪೀಡಿಸುತ್ತಿದ್ದನು.
ಸಂಚು ನಡೆಸಿ ಕತ್ತು ಹಿಸುಕಿ ಕೊಲೆ
ಕಳೆದ ಭಾನುವಾರ ಸಂಜೆ ಗೋಪಿ ತನ್ನ ಕ್ರೂರತ್ವ ಮೆರೆದಿದ್ದಾನೆ. ಪತ್ನಿ ಜೊತೆ ಮಾತನಾಡಬೇಕು ಎಂದು ನೆಪ ಹೇಳಿ, ಮನೆಯಲ್ಲಿದ್ದ ಚಂದನಬಾಯಿಯ ತಂಗಿ ಮತ್ತು ಇಬ್ಬರು ಮಕ್ಕಳನ್ನು ಬಲವಂತವಾಗಿ ಹೊರಗೆ ಕಳುಹಿಸಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮತ್ತೆ ಮದುವೆಯ ವಿಚಾರವಾಗಿ ಜಗಳ ತೆಗೆದಿದ್ದಾನೆ. ಚಂದನಬಾಯಿ ನಿರಾಕರಿಸಿದಾಗ ಸಿಟ್ಟಿಗೆದ್ದು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಏನೂ ತಿಳಿಯದವನಂತೆ ನಾಟಕವಾಡಿದ್ದ. ಆದರೆ ಹೊಳೆಹೊನ್ನೂರು ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಪಾಪಿ ಪತಿ ಸತ್ಯ ಒಪ್ಪಿಕೊಂಡಿದ್ದಾನೆ.
ಪೋಕ್ಸೋ ಕೇಸಿನ ಹಳೇ ಆರೋಪಿ
ಬಂಧಿತ ಗೋಪಿ ಈ ಹಿಂದೆ ಅಪ್ರಾಪ್ತ ವಯಸ್ಕರ ಪ್ರೀತಿಗೆ ಸಹಕಾರ ನೀಡಿದ ಆರೋಪದ ಮೇಲೆ ಪೋಕ್ಸೋ (POCSO) ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದ್ದನು. ಈಗ ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದು ಮತ್ತೆ ಜೈಲು ಪಾಲಾಗಿದ್ದಾನೆ. ಮಗಳ ಸಾವಿನಿಂದ ಹೆತ್ತವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದು, ತಬ್ಬಲಿಗಳಾದ ಇಬ್ಬರು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.

