ಪೊಲೀಸ್ ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ: ಕೊಡಗು ಜಿಲ್ಲಾ ಪೊಲೀಸರಿಂದ ಗೌರವ ವಂದನೆ
ಕಳೆದ ವರ್ಷ ಕರ್ತವ್ಯ ನಿರ್ವಹಿಸುವಾಗ ದೇಶದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಪೇದೆಗಳ ಹೆಸರು ವಿವರಗಳನ್ನು ಓದಿದರು. ನಾಗರಿಕರ ಸಮಗ್ರ ಸುರಕ್ಷತೆ ಹಾಗೂ ಭದ್ರತೆಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪೊಲೀಸರ ಕರ್ತವ್ಯ ನಿಷ್ಠೆ ಹಾಗೂ ನಿಸ್ವಾರ್ಥ ಸೇವೆಯನ್ನು ಸದಾ ಸ್ಮರಿಸುವಂತಾಗಬೇಕು: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಅ.22): ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ಮಡಿಕೇರಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಿನ್ನೆ(ಶನಿವಾರ) ಪೊಲೀಸ್ ಹುತಾತ್ಮರ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಸಿಇಒ ವರ್ಣಿತ್ ನೇಗಿ ಸೇರಿದಂತೆ ಪ್ರಮುಖರು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು. ಅಲ್ಲದೆ ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಸುಂದರರಾಜ್, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಡಿವೈಎಸ್‍ಪಿ ಜಗದೀಶ್, ಪ್ರಮುಖರಾದ ಪಿ.ಎ.ನಂಜಪ್ಪ, ಐ.ಪಿ.ಮೇದಪ್ಪ, ಅನೂಪ್ ಮಾದಪ್ಪ, ಅನಂತ ಎಚ್.ಎಸ್., ಚೆನ್ನನಾಯಕ ಸೇರಿದಂತೆ ಹಲವರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ, ಗೌರವ ನಮನ ಸಲ್ಲಿಸಿದರು.
ಕೊಡಗು: ವ್ಯಾಪಾರಿಗಳಾಗಿ ಹಣ್ಣು, ತರಕಾರಿ ಮಾರಿದ ವಿದ್ಯಾರ್ಥಿಗಳು
ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ಕಳೆದ ವರ್ಷ ಕರ್ತವ್ಯ ನಿರ್ವಹಿಸುವಾಗ ದೇಶದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಪೇದೆಗಳ ಹೆಸರು ವಿವರಗಳನ್ನು ಓದಿದರು. ನಾಗರಿಕರ ಸಮಗ್ರ ಸುರಕ್ಷತೆ ಹಾಗೂ ಭದ್ರತೆಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪೊಲೀಸರ ಕರ್ತವ್ಯ ನಿಷ್ಠೆ ಹಾಗೂ ನಿಸ್ವಾರ್ಥ ಸೇವೆಯನ್ನು ಸದಾ ಸ್ಮರಿಸುವಂತಾಗಬೇಕು ಎಂದು ಹೇಳಿದರು.
1959 ರ ಅಕ್ಟೋಬರ್, 21 ರಂದು ಭಾರತದ ಗಡಿ ಪ್ರದೇಶದಲ್ಲಿರುವ ಲಡಾಕ್ ಹಾಟ್ ಸ್ಪ್ರಿಂಗ್ಸ್ ಅಕ್ಷಯ್ ಚಿನ್ ಎಂಬ ಸ್ಥಳದಲ್ಲಿ ಸಿಆರ್‍ಪಿಎಫ್ ಪಡೆಯ ಕರಣ್ ಸಿಂಗ್, ಎಸ್.ಐ ಮತ್ತು ಸಿಬ್ಬಂದಿ ಗಡಿ ಭದ್ರತಾ ಕರ್ತವ್ಯದಲ್ಲಿರುವಾಗ ಚೀನಾ ಪಡೆ ದಾಳಿ ನಡೆಸಿತ್ತು. ಆ ವೇಳೆ ನಮ್ಮ ಭಾರತೀಯ ವೀರ ಪೊಲೀಸರು ಎದೆಗುಂದದೆ ಜೀವದ ಹಂಗು ತೊರೆದು ಧೈರ್ಯ ಮತ್ತು ಸಾಹಸದಿಂದ ಹೋರಾಟ ನಡೆಸಿದ್ದರು. ಆದರೆ ಆ ಸಂದರ್ಭದಲ್ಲಿ 10 ಜನ ಪೊಲೀಸರು ವೀರ ಮರಣ ಹೊಂದಿದರು. ಹಾಗೂ 9 ಜನ ಪೊಲೀಸರು ಗಾಯಗೊಂಡು ಸೆರೆಯಾದರು ಎಂದು ಮಾಹಿತಿ ನೀಡಿದರು.
ಧೈರ್ಯ ಮತ್ತು ಸಾಹಸದಿಂದ ಹೋರಾಟ ನಡೆಸಿ ವೀರ ಮರಣ ಹೊಂದಿದ ಪೊಲೀಸರ ಸಾವಿಗೆ ಇಡೀ ಭಾರತ ದೇಶದ ಜನತೆಯೇ ಶೋಕಿಸಿತು ಮತ್ತು ಹುತಾತ್ಮರಾದ ಪೊಲೀಸರ ನೆನಪಿಗಾಗಿ ಘಟನೆ ನಡೆದ ಸ್ಥಳದಲ್ಲಿ ಸಮುದ್ರ ಮಟ್ಟದಿಂದ ಸುಮಾರು 16 ಸಾವಿರ ಅಡಿ ಎತ್ತರದ ಒಂದು ಸ್ಮಾರಕವನ್ನು ಭಾರತ ಸರ್ಕಾರ ನಿರ್ಮಿಸಿದೆ ಎಂದರು.
ಕಳೆದ ವರ್ಷ ಭಾರತ ದೇಶದಾದ್ಯಂತ ಒಟ್ಟು 189 ಪೊಲೀಸರು ಸೇವೆಯಲ್ಲಿದ್ದಾಗ ಹುತಾತ್ಮರಾಗಿದ್ದಾರೆ. ಅವರಲ್ಲಿ ಕರ್ನಾಟಕದಿಂದ ರವಿ ಸಿ. ಉಕ್ಕುಂದ್, ಶಬೀರ್ ಹುಸೈನ್, ಸುಭಾಸ್ ಮಡಿವಾಳ್, ಕೆ.ಜೈ ಶ್ರೀನಿವಾಸ್, ನಾಗರಾಜು ಎಂ., ವೆಂಕಟೇಶ್, ಮಯೂರ್ ಚವಾಣ್, ಕಾರೆಪ್ಪ, ಸಿದ್ದೇಶ್ವರ ಎನ್., ಶಿಕಂದರ್ ನಾಟಿಕಾರ್, ಸುರೇಶ್ ಎನ್., ರಮೇಶ್ ಮಲ್ಲಪ್ಪ, ಶರಣಬಸಪ್ಪ, ಮಹೇಶ್, ನಿಂಗಪ್ಪ, ಬಿ.ಎನ್. ಗುದ್ದದ್ ಹುತಾತ್ಮರಾಗಿದ್ದಾರೆ ಎಂದು ಸ್ಮರಿಸಿದರು.
ಕೊಡಗು: ಮನೆಯಲ್ಲಿ ಸಾರ್ವಜನಿಕ ಗ್ರಂಥಾಲಯ, ದಂಪತಿಯಿಂದ ಜ್ಞಾನ ಹಂಚುವ ಮಹತ್ಕಾರ್ಯ..!
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಮಾತನಾಡಿ ರಾಷ್ಟ್ರದ ಗಡಿ ಪ್ರದೇಶದಲ್ಲಿ ಹೇಗೆ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೆ. ಅದೇ ರೀತಿ ರಾಷ್ಟ್ರದ ಆಂತರಿಕ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ತರವಾಗಿದೆ. ಸದಾ ಎಚ್ಚರವಹಿಸಿ ಸಾರ್ವಜನಿಕರ ರಕ್ಷಣೆ ಮತ್ತು ಸುರಕ್ಷತೆಗೆ ಗಮನಹರಿಸುತ್ತಾರೆ ಎಂದರು. ದಸರಾ, ಜಾತ್ರೆ, ಉತ್ಸವ ಹೀಗೆ ಹಲವು ಸಂದರ್ಭದಲ್ಲಿ ಪೊಲೀಸರು ರಜೆ ಇಲ್ಲದೆ ಕಾರ್ಯ ನಿರ್ವಹಿಸುತ್ತಾರೆ. ಸುಗಮವಾಗಿ ಕಾರ್ಯಕ್ರಮಗಳು ಜರುಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಪೊಲೀಸರ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ವರ್ಣಿತ್ ನೇಗಿ ಹೇಳಿದರು.
ಜಿಲ್ಲಾ ಸಶಸ್ತ್ರ ಪಡೆಯ ಚೆನ್ನನಾಯಕ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ, ಗೌರವ ಅರ್ಪಿಸಲಾಯಿತು. ಸಿದ್ದೇಶ್ ನೇತೃತ್ವದ ಪೊಲೀಸ್ ವಾದ್ಯ ತಂಡವು ರಾಷ್ಟ್ರಗೀತೆ ಹಾಡಿತು. ಅಂತೋಣಿ ಡಿಸೋಜ ನಿರೂಪಿಸಿ, ವಂದಿಸಿದರು.