ಕೊಡಗು: ಮನೆಯಲ್ಲಿ ಸಾರ್ವಜನಿಕ ಗ್ರಂಥಾಲಯ, ದಂಪತಿಯಿಂದ ಜ್ಞಾನ ಹಂಚುವ ಮಹತ್ಕಾರ್ಯ..!
ಇನ್ನೂ ಈ ಪುಸ್ತಕಗಳೆಲ್ಲವೂ ಮೊದಲ ಮುದ್ರಣದ ಪ್ರತಿಗಳಾಗಿದ್ದು, ಅಂದು ಕೇವಲ ಎರಡು ರೂಪಾಯಿ ಮೂರು ರೂಪಾಯಿ ಮತ್ತು ಆರು ರೂಪಾಯಿ ಬೆಲೆ ಇರುವಾಗ ಕೊಂಡಿರುವ ಪುಸ್ತಕ ಎನ್ನುವುದು ವಿಶೇಷ. ಈ ಗ್ರಂಥಾಲಯವನ್ನು ಯಾರು ಬೇಕಾದರೂ ಬಳಸಬಹುದು. ಆಸಕ್ತಿ ಇರುವವರು ಬಂದು ಕುಳಿತು ಓದಬಹುದು. ಇಲ್ಲಿಯೇ ಕುಳಿತು ಓದಲು ಆಗುವುದಿಲ್ಲ ಎನ್ನುವವರು ತಮ್ಮ ಮನೆಗೂ ಪುಸ್ತಕಗಳನ್ನು ಕೊಂಡೊಯ್ಯಬಹುದು.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಅ.19): ಇಂದು ಪಟ್ಟಣದಲ್ಲಿ ಮನೆಯೊಂದು ಖಾಲಿ ಇದ್ದರೆ ಅದನ್ನು ಬಾಡಿಗೆಗೆ ಕೊಟ್ಟು ಒಂದು ಹಣ ಸಂಪಾದಿಸೋಣ ಎಂದು ಯೋಚಿಸುವವರೇ ಹೆಚ್ಚು. ಆದರೆ ಇಲ್ಲಿ ದಂಪತಿಗಳಿಬ್ಬರು ಖಾಲಿ ಇರುವ ತಮ್ಮ ಮನೆಯನ್ನೇ ಸಾರ್ವಜನಿಕ ಗ್ರಂಥಾಲಯವನ್ನಾಗಿ ಮಾಡಿ ಉಚಿತವಾಗಿ ಪುಸ್ತಕಗಳ ಓದಿಗೆ ಅವಕಾಶ ಮಾಡಿಕೊಟ್ಟು ಜ್ಞಾನದ ದೀವಿಗೆ ಹಚ್ಚುತ್ತಿದ್ದಾರೆ.
ಹೌದು, ಕೊಡಗು ಜಿಲ್ಲೆ ಕುಶಾಲನಗರ ಪಟ್ಟಣದ ಹಾರಂಗಿ ರಸ್ತೆಯಲ್ಲಿ ಇರುವ ಸೂದನ ಪೂಣಚ್ಚ ಮತ್ತು ಸೂದನ ರೇವತಿ ಎಂಬುವವರೇ ಇಂತಹ ಮಹತ್ತರವಾದ ಕಾರ್ಯ ಮಾಡುತ್ತಿರುವವರು. ಇಬ್ಬರು ನಿವೃತ ಬ್ಯಾಂಕ್ ಉದ್ಯೋಗಿಗಳಾಗಿದ್ದು ಸದ್ಯ ತಮಗಿರುವ ಕಾಫಿತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡು ಇದ್ದಾರೆ. ಆದರೆ ಕಳೆದ ಹಲವು ವರ್ಷಗಳ ಹಿಂದಿನಿಂದ ತಮ್ಮ ಮನೆಯಲ್ಲಿ ಬರೋಬ್ಬರಿ 12 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿಟ್ಟಿದ್ದಾರೆ. ದೊಡ್ಡದಾದ ಕೊಠಡಿಯಲ್ಲಿ ಸುತ್ತಲೂ ರ್ಯಾಕ್ ಗಳನ್ನು ಜೋಡಿಸಿದ್ದು ಅವುಗಳಲ್ಲಿ ಪುಸ್ತಕಗಳನ್ನು ಇರಿಸಲಾಗಿದೆ. ಮುಖ್ಯವಾಗಿ ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ ಕೊಡಗಿನ ಇತಿಹಾಸ, ಸ್ವಾತಂತ್ರ್ಯ ಹೋರಾಟದ ಇತಿಹಾಸ, ಕುವೆಂಪು ಅವರ ಶ್ರೀರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ, ನಿರಂಜನರ ಸ್ವಾಮಿ ಅಪರಂಪಾರ, ಕೃಷ್ಣ ಮತ್ತು ಕಾವೇರಿ ನೀರು ನ್ಯಾಯಾಧಿಕರಣದ ವರದಿ ಮತ್ತು ತೀರ್ಪು ಸೇರಿದಂತೆ ಅತ್ಯಂತ ಪ್ರಮುಖವಾದ ಪುಸ್ತಕಗಳು ಇವರ ಸಂಗ್ರಹಣೆಯಲ್ಲಿ ಇವೆ.
ಮಡಿಕೇರಿ ದಸರಾ: ಡಿಜೆ, ಲೇಸರ್ ಲೈಟ್ ಬಳಸದಂತೆ ಹೈಕೋರ್ಟ್ ವಕೀಲರಿಂದ ನೋಟಿಸ್!
ಇನ್ನೂ ಈ ಪುಸ್ತಕಗಳೆಲ್ಲವೂ ಮೊದಲ ಮುದ್ರಣದ ಪ್ರತಿಗಳಾಗಿದ್ದು, ಅಂದು ಕೇವಲ ಎರಡು ರೂಪಾಯಿ ಮೂರು ರೂಪಾಯಿ ಮತ್ತು ಆರು ರೂಪಾಯಿ ಬೆಲೆ ಇರುವಾಗ ಕೊಂಡಿರುವ ಪುಸ್ತಕ ಎನ್ನುವುದು ವಿಶೇಷ. ಈ ಗ್ರಂಥಾಲಯವನ್ನು ಯಾರು ಬೇಕಾದರೂ ಬಳಸಬಹುದು. ಆಸಕ್ತಿ ಇರುವವರು ಬಂದು ಕುಳಿತು ಓದಬಹುದು. ಇಲ್ಲಿಯೇ ಕುಳಿತು ಓದಲು ಆಗುವುದಿಲ್ಲ ಎನ್ನುವವರು ತಮ್ಮ ಮನೆಗೂ ಪುಸ್ತಕಗಳನ್ನು ಕೊಂಡೊಯ್ಯಬಹುದು. ಪುಸ್ತಕಗಳನ್ನು ಕೊಂಡೊಯ್ಯಲು ಸಾರ್ವಜನಿಕ ಗ್ರಂಥಾಲಯದಲ್ಲಿ 200 ರೂಪಾಯಿ ಕೊಟ್ಟು ಚೀಟಿ ಮಾಡಿಸುವಂತೆ ಮಾಡಿಸಬೇಕಾಗಿಲ್ಲ. ಆದರೆ ಪುಸ್ತಕಗಳನ್ನು ಮನೆಗೆ ಕೊಂಡೊಯ್ಯುವಾಗ ಅವರ ಎಲ್ಲಾ ಮಾಹಿತಿ, ಸಂಪರ್ಕ ಸಂಖ್ಯೆಗಳನ್ನು ಬರೆದುಕೊಳ್ಳಲಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಅನುಕೂಲವಾಗಲೆಂದು ಮೂರು ಕಂಪ್ಯೂಟರ್ಗಳನ್ನು ಇದೇ ಕೊಠಡಿಯಲ್ಲಿ ಜೋಡಿಲಾಗಿದ್ದು ವಿದ್ಯಾರ್ಥಿಗಳು ಅದನ್ನು ಬಳಕೆ ಮಾಡಬಹುದು. ತಮ್ಮ ಪಠ್ಯಗಳಿಗೆ ಸಂಬಂಧಿಸಿದ ಯಾವುದಾದರೂ ಪ್ರಿಂಟ್ ಬೇಕಾದರೂ ಇಲ್ಲಿಂದಲೇ ಉಚಿತವಾಗಿ ಪಡೆದುಕೊಳ್ಳಬಹುದು ಎನ್ನುತ್ತಾರೆ ಗ್ರಂಥಾಲಯ ಮಾಡಿರುವ ಗೃಹಿಣಿ ರೇವತಿ.
ಗ್ರಂಥಾಲಯದ ಒಂದು ಭಾಗದಲ್ಲಿ ನೂರಾರು ವರ್ಷಗಳ ತೀರಾ ಹಳೆಯದಾದ ಗೃಹ ಬಳಕೆಯ ವಸ್ತುಗಳನ್ನು ಒಂದು ಭಾಗದಲ್ಲಿ ಸಂಗ್ರಹಿಸಿಡಲಾಗಿದೆ. ಮರದ ಸೌಂಟು, ಒನಕೆ, ಮಣ್ಣಿನ ಕುಡಿಕೆಗಳು, ರಾಜರು ಬಳಕೆ ಮಾಡುತ್ತಿದ್ದ ವಿವಿಧ ಪರಿಕರಗಳು, ತೂಕದ ಬಟ್ಟುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಇವಿಷ್ಟೇ ಅಲ್ಲ ಇದರ ಜೊತೆಗೆ ಸೂದನ ಪೂಣಚ್ಚ ಅವರು 1840 ರಿಂದ 2023 ರವರೆಗಿನ ದೇಶದ ಸಾವಿರಾರು ನಾಣ್ಯ, ನೋಟುಗಳು ಜೊತೆಗೆ ವಿವಿಧ ದೇಶಗಳ ನೋಟು, ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಇವೆಲ್ಲವನ್ನೂ ಇದೇ ಕೊಠಡಿಯಲ್ಲಿ ಇರಿಸಲಾಗಿದ್ದು, ಗ್ರಂಥಾಲಯಕ್ಕೆ ಹೋಗುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇವುಗಳನ್ನು ವೀಕ್ಷಿಸಬಹುದು. ನಮಗೆ ಮೊದಲಿನಿಂದಲೂ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಇದ್ದಿದ್ದರಿಂದ ಸಾಕಷ್ಟು ಪುಸ್ತಕಗಳನ್ನು ಕೊಳ್ಳುತ್ತಿದ್ದೆವು. ಹೀಗಾಗಿ ನಾವು ಗ್ರಂಥಾಲಯ ಸ್ಥಾಪಿಸುವುದಕ್ಕೆ ಸಾಧ್ಯವಾಯಿತು. ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎನ್ನುತ್ತಾರೆ ಸೂದನ ಪೂಣಚ್ಚ ಅವರು.
ಖಾಸಗಿ ಮನೆಯೊಂದು ಗ್ರಂಥಾಲಯದ ಜೊತೆಗೆ ಪುರಾತನ ವಸ್ತುಗಳ ಸಂಗ್ರಹಾಲಯವೂ ಆಗಿರುವುದು ವಿಶೇಷ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪನ್ಯಾಸಕಿ ಲೀಲಾಕುಮಾರಿ ಹೇಳಿದ್ದಾರೆ.