ಕೊಡಗು: ವ್ಯಾಪಾರಿಗಳಾಗಿ ಹಣ್ಣು, ತರಕಾರಿ ಮಾರಿದ ವಿದ್ಯಾರ್ಥಿಗಳು
ಮಕ್ಕಳ ದಸರಾದ ಭಾಗವಾಗಿ ಮಕ್ಕಳ ಸಂತೆ ನಡೆಯಿತು. ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಯುವಂತೆ ಇಲ್ಲಿಯೂ ಭರ್ಜರಿ ವ್ಯಾಪಾರ ನಡೆಯಿತು. ವಿದ್ಯಾರ್ಥಿಗಳು ಸ್ವತಃ ತಾವೇ ತಮ್ಮ ಮನೆ, ಊರುಗಳಿಂದ ಸಂಗ್ರಹಿಸಿ ತಂದಿದ್ದ ಕೊಡಗಿನದ್ದೇ ಆದ ವಿಶೇಷ ತರಕಾರಿಗಳನ್ನು ತಂದು ಮಾರಾಟ ಮಾಡಿದರು.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಅ.20): ಮೀಸೆ ತಿರುವಿ ಪಂಚೆಕಟ್ಟಿ ವಿವಿಧ ವಸ್ತುಗಳ ವ್ಯಾಪಾರ ಮಾಡಿದ ವಿದ್ಯಾರ್ಥಿಗಳು, ವಸ್ತುಗಳ ಕೊಳ್ಳಲು ಬಂದು ಬೆಲೆಯಲ್ಲಿ ವ್ಯತ್ಯಾಸ ಮಾಡಿ ಕೇಳುವ ಗ್ರಾಹಕರಿಗೆ ತಕ್ಕ ಉತ್ತರವನ್ನು ನೀಡಿದ ಪುಟಾಣಿ ವ್ಯಾಪಾರಿಗಳು. ದೇವಾನುದೇವತೆಗಳ ವೇಷ ಧರಿಸಿ ವೇದಿಕೆಯಲ್ಲಿ ನಿಂತು ಘರ್ಜಿಸಿದ ಛದ್ಮವೇಶದಾರಿಗಳು. ಇನ್ನು ಮಡಿಕೇರಿ ದಸರಾದ ದಶಮಂಟಪಗಳಿಗಿಂತ ನಾವೇನು ಕಡಿಮೆ ಎಂದು ತಾವೂ ಮಂಟಪಗಳ ನಿರ್ಮಿಸಿ ಮಿನಿ ದಸರಾವನ್ನೇ ಪ್ರದರ್ಶಿಸಿದ ನಿಪುಣರು. ಇದೆಲ್ಲವನ್ನು ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಶುಕ್ರವಾರ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ಮಕ್ಕಳ ದಸರಾದಲ್ಲಿ ವಿದ್ಯಾರ್ಥಿಗಳು ಸಾಕ್ಷೀಕರಿಸಿದರು.
ಹೌದು, ಮಕ್ಕಳ ದಸರಾದ ಭಾಗವಾಗಿ ಮಕ್ಕಳ ಸಂತೆ ನಡೆಯಿತು. ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಯುವಂತೆ ಇಲ್ಲಿಯೂ ಭರ್ಜರಿ ವ್ಯಾಪಾರ ನಡೆಯಿತು. ವಿದ್ಯಾರ್ಥಿಗಳು ಸ್ವತಃ ತಾವೇ ತಮ್ಮ ಮನೆ, ಊರುಗಳಿಂದ ಸಂಗ್ರಹಿಸಿ ತಂದಿದ್ದ ಕೊಡಗಿನದ್ದೇ ಆದ ವಿಶೇಷ ತರಕಾರಿಗಳನ್ನು ತಂದು ಮಾರಾಟ ಮಾಡಿದರು. ತರ್ಮೆ ಸೊಪ್ಪು, ಗಣಿಕೆ ಸೊಪ್ಪು, ಕೆಸವಿನ ಸೊಪ್ಪು ಸೇರಿದಂತೆ ವಿವಿಧ ಸ್ಥಳೀಯ ಸೊಪ್ಪುಗಳನ್ನೇ ಮಾರಾಟ ಮಾಡಿದರು. ಅಷ್ಟೇ ಅಲ್ಲ, ಸೀಬಿ, ಕೊಡಗಿನ ಕಿತ್ತಲೆ, ಕಹಿ ಹುಳಿ ಸೇರಿದಂತೆ ಹಲವು ಹಣ್ಣುಗಳನ್ನು ಮಾರಾಟ ಮಾಡಿದರು.
ಕೊಡಗು: ಮನೆಯಲ್ಲಿ ಸಾರ್ವಜನಿಕ ಗ್ರಂಥಾಲಯ, ದಂಪತಿಯಿಂದ ಜ್ಞಾನ ಹಂಚುವ ಮಹತ್ಕಾರ್ಯ..!
ವ್ಯಾಪಾರವನ್ನು ಮಾಡುವಾಗ ಪುಟಾಣಿಗಳು ಮೀಸೆ ಬಿಟ್ಟು ಪಂಚೆ ಕಟ್ಟಿ ವ್ಯಾಪಾರಕ್ಕೆ ನಿಂತಿದ್ದು ಎಲ್ಲರನ್ನು ಆಕರ್ಷಣೆಗಳಿಸಿದ್ದು ಸುಳ್ಳಲ್ಲ. ಇನ್ನು ಸ್ಥಳದಲ್ಲಿಯೇ ಸಿದ್ಧಪಡಿಸಿ ಚುರುಮುರಿ, ಪಾನಿಪೂರಿ, ಮಸಾಲೆ ಪೂರಿಗಳನ್ನು ಮಾರಾಟ ಮಾಡಿ ಸಖತ್ತಾಗಿ ಲಾಭವನ್ನೇ ಗಳಿಸಿದರು. ಇದು ಶಾಲಾ ವಿದ್ಯಾರ್ಥಿಗಳು ತಮ್ಮ ವ್ಯವಹಾರಿಕ ಜ್ನಾನವನ್ನು ಸಂಪಾದಿಸಿಕೊಳ್ಳಲು ಸಾಕಷ್ಟು ಅನುಕೂಲವಾಯಿತು ಎಂದು ಪೋಷಕರು ಖುಷಿಪಟ್ಟರು.
ಇನ್ನು ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಬ್ರಹ್ಮ, ವಿಷ್ಣು ಮಹೇಶ್ವರರಾಗಿ ಘರ್ಜಿಸಿದರೆ, ಇನ್ನಷ್ಟು ವಿದ್ಯಾರ್ಥಿಗಳು ಭೂಮಿ, ಗಿಡ ಮರ ಚಿಟ್ಟೆ ಸೇರಿದಂತೆ ವಿವಿಧ ಪ್ರಾಕೃತಿಕ ಸನ್ನಿವೇಷಗಳ ವೇಷಧರಿಸಿ ಸಾರ್ವಜನಿಕರಿಗೆ ಪ್ರಕೃತಿ ಉಳಿಸಿ ಎನ್ನುವ ಸಂದೇಶವನ್ನು ಸಾರಿದರು. ಇನ್ನು ಕೆಲವು ವಿದ್ಯಾರ್ಥಿಗಳು ಯಮರಾಜನಾಗಿ ಎಮ್ಮೆ ಏರಿ ಬಂದು ಹೆಲ್ಮೆಟ್ ಧರಿಸಿ ಇಲ್ಲದಿದ್ದರೆ ನೀವು ನನ್ನ ಅತಿಥಿಗಳಾಗಿ ಬಿಡುತ್ತೀರಾ ಎಂದು ಹೇಳುವ ಮೂಲಕ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದರು.
ಕಾವೇರಿ ತೀರ್ಥೋದ್ಭವ: ಮಧ್ಯರಾತ್ರಿ 1.27ಕ್ಕೆ ತೀರ್ಥ ರೂಪಿಣಿಯಾದ ಕಾವೇರಿ, ಪುನೀತರಾದ ಭಕ್ತಗಣ
ಇನ್ನು ಕೆಲವು ವಿದ್ಯಾರ್ಥಿಗಳು ನಾಡಿ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ, ಪೂಜಾ ಕುಣಿತದಂತಹ ವೇಕ್ಷ ಧರಿಸಿ ಬಂದು ನೋಡುಗರ ಮನ ರಂಜಿಸಿದರು. ಪೋಷಕರು ತಮ್ಮ ಮಕ್ಕಳ ಈ ಪ್ರತಿಭೆಗಳನ್ನು ಕಂಡು ಖುಷಿ ಅನುಭವಿಸಿದರು. ಇನ್ನು ಮಡಿಕೇರಿ ದಸರಾದಂದು ಹೇಗೆ ವಿವಿಧ ಪೌರಾಣಿಕ ಕಥೆಗಳನ್ನು ಆಧರಿಸಿ ಮಂಟಪಗಳನ್ನು ನಿರ್ಮಿಸಿ ಪೌರಾಣಿಕ ಕಥೆಗಳನ್ನು ಸಾಧರಪಡಿಸುತ್ತಾರೆಯೋ ಅದೇ ರೀತಿ ಮಂಟಪಗಳನ್ನು ಮಾಡಿದ್ದು ಎಲ್ಲರು ಅಚ್ಚರಿಗೊಳ್ಳುವಂತೆ ಮಾಡಿತು.
ಇದು ಮಡಿಕೇರಿ ದಸರಾದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯಗಳಾಗಿದ್ದವು. ಮಕ್ಕಳ ಪ್ರತಿಭೆಗಳನ್ನು ಕಂಡ ಪೋಷಕೊಬ್ಬರು ಮಕ್ಕಳಿಗೋಸ್ಕರ ಮಾಡಿರುವ ಮಕ್ಕಳ ದಸರಾ ನಿಜವಾಗಿ ಮಕ್ಕಳ ಪ್ರತಿಭೆಗಳನ್ನು ಹೊರ ತರಲು ಅತ್ಯುತ್ತಮ ವೇದಿಕೆಯಾಗಿತ್ತು. ಮಕ್ಕಳ ಸಂತೆ ವಿದ್ಯಾರ್ಥಿಗಳ ವ್ಯಾವಹಾರಿಕ ಜ್ನಾನವನ್ನು ಬೆಳೆಸಲು ಸಹಾಯವಾಗಿದ್ದರೆ ಮಂಟಪಗಳನ್ನು ಮಾಡಿದ್ದು ವಿದ್ಯಾರ್ಥಿಗಳಿಗೆ ಈಗಿನಿಂದಲೇ ತಾಂತ್ರಿಕತೆಯನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎನ್ನುವುದು ಸಾಕ್ಷಿಯಾಯಿತು ಎಂದರು.