ಬಿಎಂಟಿಸಿ ಬಸ್ ಕೆಟ್ಟ ರಸ್ತೆ ಮಧ್ಯೆ ನಿಂತಿದೆ. ಬಿಎಂಟಿಸಿ ಮಹಾ ಎಡವಟ್ಟಿನಿಂದಾಗಿ ಕಾರ್ಪೊರೇಷನ್ ಸರ್ಕಲ್‌ನ ಸುತ್ತಮುತ್ತ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು.

ಬೆಂಗಳೂರು (ಆ.01): ಬೆಂಗಳೂರಿನ ಜೀವನಾಡಿ ಅಂದ್ರೆ ಅದು ಬಿಎಂಟಿಸಿ. ಇತ್ತೀಚಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಸರ್ಕಾರ ಕೈ ಹಿಡಿದು ನಡೆಸ್ತಿದೆ. 

ನಿತ್ಯ ಒಂದಿಲ್ಲೊಂದು ಸಮಸ್ಯೆಯನ್ನು ಮೈಮೇಲೆ ಹಾಕೊಂಡಿರುವ ನಿಗಮ ಇಂದೊ ನಾಳೆಯೋ ಮುಳುಗುವ ಪರಿಸ್ಥಿತಿಯಲ್ಲಿದೆ. ಆದ್ರೂ ಸಿಲಿಕಾನ್ ಸಿಟಿಯಲ್ಲಿ ಸಾವಿರಾರು ಮಂದಿ ಬಿಎಂಟಿಸಿ ನಂಬಿ ಬೀದಿಗಿಳಿಯುತ್ತಾರೆ. ಆದ್ರೆ ಬಿಎಂಟಿಸಿ ಮಾತ್ರ ಎಲ್ಲೆಂದರಲ್ಲಿ ಕೈ ಕೊಡ್ತಿದೆ. ಇದಕ್ಕೆ ತಾಜಾ ಉದಾಹರಣೆ ದಾರಿ ಮಧ್ಯದಲ್ಲಿ ಕೆಟ್ಟು ನಿಂತ ಬಿಎಂಟಿಸಿ ಬಸ್. ಸರಿಯಾದ ನಿರ್ವಹಣೆ ಮಾಡದೆ ಬಿಎಂಟಿಸಿ ಬಸ್ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ತಿವೆ. 

3 ವರ್ಷಕ್ಕೊಮ್ಮೆ ಬಸ್‌ ಟಿಕೆಟ್‌ ದರ ಪರಿಷ್ಕರಣೆ: ಸರ್ಕಾರಕ್ಕೆ ಸಮಿತಿ ಸಲಹೆ

ಇಂದು (ಸೋಮವಾರ) ನಗರದ ಕಾರ್ಪೊರೇಷನ್ ಸರ್ಕಲ್ ಬಳಿ ಮಧ್ಯ ರಸ್ತೆಯಲ್ಲಿ ಬಸ್ ಕೆಟ್ಟು ನಿಂತಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಯ್ತು. ಮೆಜೆಸ್ಟಿಕ್ ನಿಂದ ಕುವೆಂಪುನಗರಕ್ಕೆ ಹೊರಟಿದ್ದ ಬಸ್ ರಸ್ತೆ ಮಧ್ಯೆ ಸ್ಟಾಪ್ ಆಗಿದ್ದು ಮುಂದಕ್ಕೆ ಹೋಗಲೇ ಇಲ್ಲ. ಬಸ್ ಕಂಡಕ್ಟರ್ ಡ್ರೈವರ್ ಪರದಾಟಕ್ಕೆ ಪ್ರಯಾಣಿಕರೇ ಕೈಜೋಡಿಸಿದ್ರು. 

ಬಸ್ ತಳ್ಳಿದ ಪ್ರಯಾಣಿಕರು ಪಕ್ಕದ ಬಸ್ ನಿಲ್ದಾಣಕ್ಕೆ ನಿಲ್ಲಿಸಿಬಿಟ್ರು. ಬಿಎಂಟಿಸಿ ಮಹಾ ಎಡವಟ್ಟಿನಿಂದಾಗಿ ಕಾರ್ಪೊರೇಷನ್ ಸರ್ಕಲ್‌ನ ಸುತ್ತಮುತ್ತ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. 

ಇನ್ನು ಇತ್ತ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಮೇಲೆ ಮರ ಬಿದ್ದಿರುವ ಘಟನೆ ನಡೆಯಿತು. ಎಂಜಿ ರೋಡ್ ಬಳಿಯ ಇಂಡಿಯಾ ಗ್ಯಾರೇಜ್ ಮುಂಭಾಗದಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು ಅದೃಷ್ಟವಶಾತ್ ಪ್ರಯಾಣಿಜರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಾಜಿನಗರ ಟು ವರ್ತೂರು ನಡುವೆ ಸಂಚರಿಸುತ್ತಿದ್ದ 328 ನಂಬರ್ ಬಿಎಂಟಿಸಿ ಬಸ್ ಮೇಲೆ ಅಚಾನಕ್ಕಾಗಿ ಮರ ಬಿದ್ದಿದ್ದು ಯಾವುದೇ ಸಮಸ್ಯೆ ಉಂಟಾಗಿಲ್ಲ. ಈ ಹಿಂದೆಯೂ ಬಸ್‌ಗಳಿಗೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡು ಉರಿದೋಯ್ತು. 

ಪ್ರಯಾಣಿಕರು ಪರದಾಡಿದ್ರು. ಇವೆಲ್ಲ ಸಮಸ್ಯೆಯಿಂದ ಬಿಎಂಟಿಸಿ ಸಹವಾಸನೇ ಬೇಡಪ್ಪಾ ಅಂತಿದ್ದಾರೆ ಪ್ರಯಾಣಿಕರು. ಇಷ್ಟಾದ್ರೂ ನಿಗಮ ಮಾತ್ರ ಕಣ್ತೆರೆದಂತಿಲ್ಲ. ಸಮಸ್ಯೆ ಕಣ್ಣೆದುರೇ ಕಾಣಿಸ್ತಿದ್ರೂ ತನಗೂ ಅದಕ್ಕು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ.

3 ವರ್ಷಕ್ಕೊಮ್ಮೆ ಬಸ್‌ ಟಿಕೆಟ್‌ ದರ ಪರಿಷ್ಕರಣೆ: ಸರ್ಕಾರಕ್ಕೆ ಸಮಿತಿ ಸಲಹೆ
ಸಾರಿಗೆ ನಿಗಮಗಳ ಸ್ಥಿತಿಗತಿ, ಡೀಸೆಲ್‌ ದರ, ಕಾರ್ಯಾಚರಣೆ ವೆಚ್ಚ ಆಧರಿಸಿ ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರಯಾಣ ದರ ಪರಿಷ್ಕರಣೆ ಮಾಡಬೇಕು. ನಿಗದಿ ಪಡಿಸಿರುವ ಕಿಲೋಮೀಟರ್‌ ಸಂಚಾರ ಪೂರ್ಣಗೊಳಿಸಿರುವ ಬಸ್‌ಗಳನ್ನು ಬದಲಾಯಿಸಬೇಕು ಎಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಪುನಶ್ಚೇತನಗೊಳಿಸುವ ಸಂಬಂಧ ನೇಮಿಸಿದ್ದ ಎಂ.ಆರ್‌. ಶ್ರೀನಿವಾಸಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ.

ಕಳೆದ ಆರು ತಿಂಗಳಿನಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿರುವ ಅವರು, ಡೀಸೆಲ್‌ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ, ಅನೇಕ ವರ್ಷಗಳಿಂದ ಪ್ರಯಾಣ ದರ ಮಾತ್ರ ಪರಿಷ್ಕರಣೆ ಆಗಿಲ್ಲ. ಇದರಿಂದ ನಿಗಮಗಳ ಮೇಲೆ ಹೊರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಸಮೂಹ ಸಾರಿಗೆ ಪ್ರಯಾಣ ದರ ಸಮಿತಿ’ (ಪಿಟಿಎಫ್‌ಆರ್‌ಸಿ) ರಚಿಸಬೇಕು. ಇದಕ್ಕೆ ಕಾರ್ಯಾಚರಣೆ, ಹಣಕಾಸು, ಸಾರ್ವಜನಿಕ ನೀತಿ- ನಿಯಮಗಳ ಬಗ್ಗೆ ಜ್ಞಾನ ಹೊಂದಿರುವ ಮೂವರು ಸದಸ್ಯರನ್ನು ನೇಮಕ ಮಾಡಬೇಕು ಎಂದು ಸಲಹೆ ನೀಡಲಾಗಿದೆ.