3 ವರ್ಷಕ್ಕೊಮ್ಮೆ ಬಸ್ ಟಿಕೆಟ್ ದರ ಪರಿಷ್ಕರಣೆ: ಸರ್ಕಾರಕ್ಕೆ ಸಮಿತಿ ಸಲಹೆ
ಡೀಸೆಲ್ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ, ಅನೇಕ ವರ್ಷಗಳಿಂದ ಪ್ರಯಾಣ ದರ ಮಾತ್ರ ಪರಿಷ್ಕರಣೆ ಆಗಿಲ್ಲ. ಇದರಿಂದ ನಿಗಮಗಳ ಮೇಲೆ ಹೊರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಸಮೂಹ ಸಾರಿಗೆ ಪ್ರಯಾಣ ದರ ಸಮಿತಿ’ (ಪಿಟಿಎಫ್‌ಆರ್‌ಸಿ) ರಚಿಸಬೇಕು.
ಬೆಂಗಳೂರು(ಜು.20): ಸಾರಿಗೆ ನಿಗಮಗಳ ಸ್ಥಿತಿಗತಿ, ಡೀಸೆಲ್ ದರ, ಕಾರ್ಯಾಚರಣೆ ವೆಚ್ಚ ಆಧರಿಸಿ ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರಯಾಣ ದರ ಪರಿಷ್ಕರಣೆ ಮಾಡಬೇಕು. ನಿಗದಿ ಪಡಿಸಿರುವ ಕಿಲೋಮೀಟರ್ ಸಂಚಾರ ಪೂರ್ಣಗೊಳಿಸಿರುವ ಬಸ್‌ಗಳನ್ನು ಬದಲಾಯಿಸಬೇಕು ಎಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಪುನಶ್ಚೇತನಗೊಳಿಸುವ ಸಂಬಂಧ ನೇಮಿಸಿದ್ದ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ.
ಕಳೆದ ಆರು ತಿಂಗಳಿನಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿರುವ ಅವರು, ಡೀಸೆಲ್ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ, ಅನೇಕ ವರ್ಷಗಳಿಂದ ಪ್ರಯಾಣ ದರ ಮಾತ್ರ ಪರಿಷ್ಕರಣೆ ಆಗಿಲ್ಲ. ಇದರಿಂದ ನಿಗಮಗಳ ಮೇಲೆ ಹೊರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಸಮೂಹ ಸಾರಿಗೆ ಪ್ರಯಾಣ ದರ ಸಮಿತಿ’ (ಪಿಟಿಎಫ್‌ಆರ್‌ಸಿ) ರಚಿಸಬೇಕು. ಇದಕ್ಕೆ ಕಾರ್ಯಾಚರಣೆ, ಹಣಕಾಸು, ಸಾರ್ವಜನಿಕ ನೀತಿ- ನಿಯಮಗಳ ಬಗ್ಗೆ ಜ್ಞಾನ ಹೊಂದಿರುವ ಮೂವರು ಸದಸ್ಯರನ್ನು ನೇಮಕ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
ಸಾರಿಗೆ ಬಸ್‌ಗಳಲ್ಲಿ ಚಾಲಕ ಸಾಕು, ಪ್ರತ್ಯೇಕ ಕಂಡಕ್ಟರ್ ಬೇಡ: ಶಿಫಾರಸು
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳಲ್ಲಿ ವ್ಯಾಪ್ತಿಯಲ್ಲಿ ಸುಮಾರು 24,200 ಬಸ್‌ಗಳಿವೆ. ಅವುಗಳಲ್ಲಿ ಶೇ.40 ರಷ್ಟುಬಸ್‌ಗಳು 9ಲಕ್ಷ ಕಿ.ಮೀ. ಅಥವಾ 8ರಿಂದ 10 ವರ್ಷ ಮೀರಿದ್ದು, ಅವುಗಳನ್ನು ಬದಲಾವಣೆ ಮಾಡಬೇಕು. ಕಳೆದ ಕೆಲವು ವರ್ಷಗಳಿಂದ ನಿಗಮಗಳ ಬಸ್‌ಗಳ ಸಂಖ್ಯೆಯಲ್ಲಿ ಯಾವುದೇ ಏರಿಕೆ ಕಂಡಿಲ್ಲ. 2013-14ರಲ್ಲಿ 24,355 ಇದ್ದ ಬಸ್‌ಗಳ ಸಂಖ್ಯೆ, 2020-21ರಲ್ಲಿ 24,266 ಇದೆ. ಆದರೆ, ಖಾಸಗಿ ವಾಹನಗಳ(ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕುಚಕ್ರ) ಪ್ರಮಾಣ ವಾರ್ಷಿಕ ಶೇ. 10ರಿಂದ 14ರಷ್ಟುಹೆಚ್ಚಳವಾಗಿವೆ. ಹಾಗಾಗಿ ಪ್ರಯಾಣಿಕರಿಗೆ ಅನುಗುಣವಾಗಿ ಬಸ್‌ಗಳ ಪ್ರಮಾಣ ಹೆಚ್ಚಾಗಬೇಕು ಎಂದು ಶಿಫಾರಸು ಮಾಡಲಾಗಿದೆ.
ವಿಶೇಷವಾಗಿ 8-9 ಲಕ್ಷ ಕಿ.ಮೀ. ಸಂಚಾರ ಮೀರಿದ ಬಸ್‌ಗಳನ್ನು ಕಡ್ಡಾಯವಾಗಿ ನವೀಕರಣಗೊಳಿಸಿ, ಇನ್ನೂ ಮೂರ್ನಾಲ್ಕು ಲಕ್ಷ ಕಿ.ಮೀ. ಹೆಚ್ಚುವರಿಯಾಗಿ ಕಾರ್ಯಾಚರಣೆಯಾಗುವಂತೆ ಮಾಡಬೇಕು. ಇದಕ್ಕಾಗಿ ವಿಭಾಗೀಯ ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಹೊರಗುತ್ತಿಗೆಯಲ್ಲಿ ತಂತ್ರಜ್ಞರನ್ನು ನೇಮಿಸಿಕೊಳ್ಳಬೇಕು. ಕಾರ್ಯಾಗಾರಗಳನ್ನೂ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಮೂಲಕ ಮೇಲ್ದರ್ಜೆಗೇರಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇ-ಬಸ್ ಹೆಚ್ಚಳಕ್ಕೆ ಸಲಹೆ
ಭವಿಷ್ಯದ ದೃಷ್ಟಿಯಿಂದ ನಿಗಮಗಳು ಹಂತ-ಹಂತವಾಗಿ ವಿದ್ಯುತ್ ಚಾಲಿತ ಬಸ್‌ಗಳಿಗೆ ಬದಲಾಗಬೇಕು. ಎಲ್ಲ ನಿಗಮಗಳು ಶೇ. 50ರಷ್ಟು ಇ- ಬಸ್‌ಗಳನ್ನು ಹೊಂದಬೇಕು. ಕೇಂದ್ರ ಸರ್ಕಾರದ ಫೇಮ್-2 ಯೋಜನೆ ಅಡಿ ಲಭ್ಯವಿರುವ ಸಬ್ಸಿಡಿ ನೆರವಿನಿಂದ 579 ಇ- ಬಸ್‌ಗಳನ್ನು ರಸ್ತೆಗಿಳಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.