*  ಹೊಸ ವ್ಯವಸ್ಥೆ ಬಗ್ಗೆ ಪೊಲೀಸರಿಂದ ವಾಹನ ಸವಾರರಿಗೆ ಅರಿವು*  ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ*  ಹೆಬ್ಬಾಳ ಜಂಕ್ಷನ್‌ನಲ್ಲಿ ಹೊಸ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನ 

ಬೆಂಗಳೂರು(ಜು.10):  ನಗರದ ಹೆಬ್ಬಾಳ ಜಂಕ್ಷನ್‌ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಸಲುವಾಗಿ ಪೊಲೀಸರು ರೂಪಿಸಿರುವ ಹೊಸ ಸಂಚಾರ ವ್ಯವಸ್ಥೆಗೆ ಶುಕ್ರವಾರ ಚಾಲನೆ ಸಿಕ್ಕಿದ್ದು, ಮೊದಲ ದಿನ ಸಾರ್ವಜನಿಕರಿಗೆ ನಿಯಮ ಪಾಲಿಸುವಂತೆ ಪೊಲೀಸರು ಅರಿವು ಮೂಡಿಸಿದ್ದಾರೆ.

ನಗರಕ್ಕೆ ತೆರಳಲು ಹೆಬ್ಬಾಳ ಮೇಲ್ಸೇಸುವೆ ಬಳಸದೆ ಸವೀರ್‍ಸ್‌ ರಸ್ತೆಯನ್ನು ಜಕ್ಕೂರು, ಅಮೃತಹಳ್ಳಿ, ಕೆಂಪಾಪುರ, ಬ್ಯಾಟರಾಯನಪುರ ಹಾಗೂ ಕೊಡಿಗೇಹಳ್ಳಿ ಸೇರಿದಂತೆ ಸ್ಥಳೀಯ ಜನರು ಬಳಸಬೇಕಿದೆ. ಹಾಗೆಯೇ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣ ಕಡೆಯಿಂದ ನಗರಕ್ಕೆ ಆಗಮಿಸುವ ವಾಹನಗಳು, ಮಾರ್ಗ ಮಧ್ಯೆದಲ್ಲಿ ತಿರುವು ತೆಗೆದುಕೊಳ್ಳದೆ ಹೆಬ್ಬಾಳ ಮೇಲ್ಸೇತುವೆ ಮೂಲಕ ಸಾಗಬೇಕಿದೆ. ಅದೇ ರೀತಿ ಕೆ.ಆರ್‌.ಪುರ ಕಡೆ ಸಾಗುವ ವಾಹನಗಳು, ಹೆಗಡೆ ನಗರ ಕ್ರಾಸ್‌ ಬಳಿ ತಿರುವು ಪಡೆದು ಒಳ ರಸ್ತೆಯಲ್ಲಿ ಸಾಗಬೇಕಿದೆ. ಇದರಿಂದ ಹೆಬ್ಬಾಳ ಜಂಕ್ಷನ್‌ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ತಪ್ಪಲಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಉತ್ತರ ವಿಭಾಗ (ಸಂಚಾರ)ದ ಡಿಸಿಪಿ ಎಸ್‌.ಸವಿತಾ, ಹೆಬ್ಬಾಳ ವ್ಯಾಪ್ತಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಹೊಸ ಸಂಚಾರ ವ್ಯವಸ್ಥೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದ್ದು, ಮೊದಲ ದಿನ ನಿರೀಕ್ಷಿತ ಪ್ರಮಾಣದಲ್ಲಿ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದರು.

Bengaluru: ಹೆಬ್ಬಾಳ ವಾಹನ ಸಂಚಾರದಲ್ಲಿ ಭಾರಿ ಬದಲಾವಣೆ

ಪ್ರತಿ ದಿನ ಆ ರಸ್ತೆಯಲ್ಲಿ ಓಡಾಡುವ ಸ್ಥಳೀಯರಿಗೆ ಸವೀರ್‍ಸ್‌ ರಸ್ತೆಯನ್ನು ಬಳಸುವಂತೆ ಮನವಿ ಮಾಡಲಾಗಿದೆ. ಸಂಚಾರ ಬದಲಾವಣೆಯಿಂದ ಹೆಬ್ಬಾಳ ಜಂಕ್ಷನ್‌ ಸರಹದ್ದಿನಲ್ಲಿ ಹಿಂದಿಗಿಂತ ವಾಹನಗಳ ಓಡಾಟ ಸುಗಮವಾಗಿತ್ತು. ಗಂಟೆಗಟ್ಟಲೇ ವಾಹನ ದಟ್ಟಣೆ ತಪ್ಪಿದೆ. ಸುಗಮ ಸಂಚಾರದಿಂದ ಜನರಿಗೆ ನೆಮ್ಮದೆ ಮೂಡಿದೆ ಎಂದು ಹೇಳಿದರು.

ಈ ಸಂಚಾರ ಮಾರ್ಗ ಬದಲಾವಣೆ ಕುರಿತು ಜನರಿಗೆ ಜಾಗೃತಿ ಮೂಡಿಸಲು ಹಾಗೂ ಸಂಚಾರ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೆಬ್ಬಾಳ ಜಂಕ್ಷನ್‌ ವ್ಯಾಪ್ತಿಯ ಹೊಸ ವ್ಯವಸ್ಥೆ ಜಾರಿ ಹಿನ್ನಲೆಯಲ್ಲಿ ಸ್ಥಳಕ್ಕೆ ಜಂಟಿ ಆಯುಕ್ತ (ಸಂಚಾರ) ಡಾ. ಬಿ.ಆರ್‌.ರವಿಕಾಂತೇಗೌಡ ಹಾಗೂ ಉತ್ತರ ವಿಭಾಗದ ಡಿಸಿಪಿ (ಸಂಚಾರ) ಸವಿತಾ ಭೇಟಿ ನೀಡಿ ಪರಿಶೀಲಿಸಿದರು.

ಹೆಬ್ಬಾಳ ಜಂಕ್ಷನ್‌ನಲ್ಲಿ ಹೊಸ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಒಂದು ವಾರದ ಅವಧಿಯಲ್ಲಿ ಹೊಸ ವ್ಯವಸ್ಥೆಯ ಸಾಧಕ-ಬಾಧಕಗಳು ಮತ್ತು ಸಾರ್ವಜನಿಕರ ಪ್ರತಿಕ್ರಿಯೆ ಅಧ್ಯಯನ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ಉತ್ತರ ವಿಭಾಗ (ಸಂಚಾರ) ಡಿಸಿಪಿ ಎಸ್‌.ಸವಿತಾ ತಿಳಿಸಿದ್ದಾರೆ.