ಸಾಲ ಮಾಡಿ ಖರೀದಿಸಿದ ಟ್ರಾಕ್ಟರ್ ಸೀಜ್, ಚೆಕ್ ಬೌನ್ಸ್: ರೈತ ಆತ್ಮಹತ್ಯೆ
ಸಾಲ ಮಾಡಿ ಟ್ರಾಕ್ಟರ್ ಖರೀದಿಸಿದ ರೈತರೊಬ್ಬರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 65 ವರ್ಷ ವಯಸ್ಸಿನ ಕೃಷ್ಣಯ್ಯ ಆತ್ಮಹತ್ಯೆ ಮಾಡಿಕೊಂಡ ರೈತ.
ಪುಟ್ಟರಾಜು ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ : ಸಾಲ ಮಾಡಿ ಟ್ರಾಕ್ಟರ್ ಖರೀದಿಸಿದ ರೈತರೊಬ್ಬರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 65 ವರ್ಷ ವಯಸ್ಸಿನ ಕೃಷ್ಣಯ್ಯ ಆತ್ಮಹತ್ಯೆ ಮಾಡಿಕೊಂಡ ರೈತ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆ ಗ್ರಾಮದ ನಿವಾಸಿಯಾದ ಇವರು ಸಾಲ ಮಾಡಿ ಟ್ರಾಕ್ಟರ್ ತೆಗೆದುಕೊಂಡಿದ್ದರು. ಅದರಿಂದ ದುಡಿದು ಸಾಲ ತೀರಿಸಿ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಕನಸು ಕಂಡಿದ್ದರು. ಆದ್ರೆ ಕಳೆದೆರಡು ವರ್ಷಗಳ ಕಾಲ ಕಾಡಿದ ಕೊರೊನಾದಿಂದ ಟ್ರಾಕ್ಟರ್ ಲೋನ್ ಮರುಪಾವತಿ ಮಾಡಲಾಗಿರಲಿಲ್ಲ. ಹೀಗಾಗಿ ಬ್ಯಾಂಕ್‌ನವರು ಅವರಿಗೆ ನೋಟಿಸ್ ಜಾರಿ ಮಾಡಿ ನ್ಯಾಯಾಲಯದ ಮೆಟ್ಟಿಲು ಹತ್ತಿಸಿದ್ರು. ಇದರಿಂದ ಮನನೊಂದ ರೈತ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ.
ಕೃಷ್ಣಯ್ಯ (Krishnaia) ಅವರಿಗೆ ಎಕರೆ ಜಮೀನಿದೆ. ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅವರು ಕಳೆದ ಮೂರು ವರ್ಷಗಳ ಹಿಂದೆ ಖಾಸಗಿ ಫೈನಾನ್ಸ್ ಮೂಲಕ ಸಾಲ ಪಡೆದು ಟ್ರಾಕ್ಟರ್ ಖರೀದಿ ಮಾಡಿದ್ದರು. ಆದ್ರೆ ಕೋರೊನಾ ಬಂದ ಹಿನ್ನೆಲೆಯಲ್ಲಿ ಈತ ಬೆಳೆದಿದ್ದ ಬೆಳೆಯಲ್ಲಿ ನಿರೀಕ್ಷಿತ ಲಾಭ ಬಂದಿರಲಿಲ್ಲ. ಹೀಗಾಗಿ ಟ್ರಾಕ್ಟರ್ ಲೋನ್ ಮರುಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದರು. ಈ ಮಧ್ಯೆ ಬ್ಯಾಂಕ್‌ನವರು ಇಎಂಐ ಕಟ್ಟದ ಕಾರಣ ಟ್ರಾಕ್ಟರ್ ಜಪ್ತಿ ಮಾಡಿದ್ರು. ಬಾಕಿ ಹಣ 1.94 ಲಕ್ಷ ಹಣವನ್ನು ಪಾವತಿಸುವಂತೆ ನೋಟಿಸ್ ನೀಡಿದ್ದು ತಪ್ಪಿದ್ದಲ್ಲಿ ಬಂಧನ ನೋಟಿಸ್ ನೀಡಿದಲ್ಲದೇ ಚೆಕ್‌ಬೌನ್ಸ್ ಕೇಸ್ (Cheque Bounce case) ದಾಖಲು ಮಾಡಿದ್ರು.
ಸಾಲಪಾವತಿಗೆ ಬ್ಯಾಂಕ್ ನೋಟಿಸ್: ರೈತ ಆತ್ಮಹತ್ಯೆಗೆ ಶರಣು
ಇದರಿಂದ ತಾನು ಕಟ್ಟಿದ ಮುಂಗಡ ಹಣ, ಟ್ರ್ಯಾಕ್ಟರ್ ಎಲ್ಲವನ್ನು ಕಳೆದುಕೊಂಡು ಈಗ ಚೆಕ್ ಬೌನ್ಸ್ ಕೇಸ್ ನಲ್ಲಿ ಆರೋಪಿಯಾಗಿ ನಿಂತು ಅವಮಾನ ಅನುಭವಿಸಿದ ಕಾರಣ ಮನನೊಂದ ಕೃಷ್ಣಯ್ಯ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ವಿಷ ಸೇವಿಸಿದ ಕೃಷ್ಣಯ್ಯರನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ (Gundlupete Govt Hospital) ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದು ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆಕ್f ಬೌನ್ಸ್ ಕೇಸ್ ದಾಖಲು ಮಾಡಿದ್ರಿಂದ ನಿನ್ನೆ ನ್ಯಾಯಾಲಯಕ್ಕೆ ಕೃಷ್ಣಯ್ಯ ತೆರಳಿದ್ದರು. ನ್ಯಾಯಾಲಯದಿಂದ (Court)ಮನೆಗೆ ಆಗಮಿಸಿದ ಕೃಷ್ಣಯ್ಯ ಮನನೊಂದು ವಿಷ ಸೇವಿಸಿದ್ರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನು ಕೃಷ್ಣಯ್ಯ ಆತ್ಮಹತ್ಯೆ ವಿಚಾರ ತಿಳಿದು ಆಸ್ಪತ್ರೆಗೆ ಆಗಮಿಸಿದ ರೈತ ಸಂಘದ ಕಾರ್ಯಕರ್ತರು ಸಿಮ್ಸ್ ಆಸ್ಪತ್ರೆ ಮುಂಭಾಗ ಜಮಾಯಿಸಿ ಅವರ ಸಾವಿಗೆ ನ್ಯಾಯ ಕೊಡಿಸಬೇಕು. ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು, ಖಾಸಗಿ ಕಂಪನಿಗಳು ರೈತರಿಗೆ ಕಿರುಕುಳ ನೀಡದಂತೆ ಆದೇಶಿಸಬೇಕು, ಮೃತ ರೈತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಜಪ್ತಿ ಮಾಡಿರುವ ಟ್ರ್ಯಾಕ್ಟರ್ ಅನ್ನು ವಾಪಸ್ ನೀಡಬೇಕು ಜೊತೆಗೆ ರೈತನ ಸಾಲ ಮನ್ನಾ ಮಾಡಬೇಕು ಹಾಗೂ ಈ ಆತ್ಮಹತ್ಯೆ ವಿಚಾರವಾಗಿ ಖಾಸಗಿ ಫೈನಾನ್ಸ್ ವಿರುದ್ದ ಮೊಕದ್ದಮೆ ದಾಖಲಿಸಬೇಕು ಎಂದು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
Uttara Kannada| ಅಕಾಲಿಕ ಮಳೆಯಿಂದ ಬೆಳೆ ನಷ್ಟ: ರೈತ ಆತ್ಮಹತ್ಯೆ
ಕೃಷ್ಣಯ್ಯ ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗುಂಡ್ಲುಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆ ಟ್ರಾಕ್ಟರ್‌ನಿಂದ ನಮ್ಮ ಆರ್ಥಿಕ ಸ್ಥಿತಿ ಸುಧಾರಣೆ ಕಾಣುತ್ತದೆ ಎಂದು ಕನಸು ಕಂಡಿದ್ದ ಕೃಷ್ಣಯ್ಯ ಅದೇ ಟ್ರಾಕ್ಟರ್ ಸಾಲ ಮರುಪಾವತಿ ಮಾಡಲಾಗದೇ ಅವಮಾನದಿಂದ ಮಸಣದ ಹಾದಿ ಹಿಡಿದಿದ್ದು ದುರಂತ.