ಉಳ್ಳಾ​ಲ(ಜು.02): ವಿದೇಶದಿಂದ ಬಂದವರಿಗೆ ಕ್ವಾರಂಟೈನ್‌ ಮುಗಿಯುತ್ತಿದ್ದಂತೆ, ರೆಸಾರ್ಟ್‌ನ್ನು ಸ್ಯಾನಿಟೈಜೇಶ​ನ್‌ ಮಾಡದೇ ಪ್ರವಾಸಿಗರಿಗೆ ನೀಡಿರುವ ಘಟನೆ ಉಳ್ಳಾಲ ಸಮುದ್ರ ತೀರದಲ್ಲಿ ನಡೆದಿದೆ. ಇಲ್ಲಿ ಕ್ವಾರಂಟೈನಿನಲ್ಲಿದ್ದ ಮಂದಿ ಮನೆಗೆ ಹೋಗು​ತ್ತಿ​ದ್ದಂತೆ ಪ್ರವಾ​ಸಿ​ಗ​ರಾಗಿ ಬಂದಿರುವ ಯುವ​ಕ- ಯುವ​ತಿ​ಯರು ಮೋಜು ಮಸ್ತಿ​ಯಲ್ಲಿ ತೊಡ​ಗಿ​ರು​ವುದು ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ.

ವಿದೇಶದಿಂದ ಬಂದವರಿಗೆ ಉಳ್ಳಾಲದ ಸಮ್ಮರ್‌ ಸ್ಯಾಂಡ್‌ ರೆಸಾರ್ಟನಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಈ ಪೈಕಿ ಹಲವರಿಗೆ ಕೊರೊನಾ ದೃಢವಾಗಿತ್ತು. ಜೂ.30ಕ್ಕೆ ಎಲ್ಲರ ಕ್ವಾರಂಟೈನ್‌ ಅವಧಿ ಮುಕ್ತಾಯಗೊಂಡಿತ್ತು. ಅವ​ರೆ​ಲ್ಲರೂ ಎಲ್ಲರೂ ಮನೆಗೆ ಹೊರಡುತ್ತಿದ್ದಂತೆ ಇತ್ತ ರೆಸಾರ್ಟ್‌ ಮಾಲೀಕರು ಸ್ಯಾನಿಟೈಸ್‌ ನಡೆಸದೆ ಏಕಾಏಕಿ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇವರೆಲ್ಲರೂ ಸಮುದ್ರ ತೀರದಲ್ಲಿ ಮೋಜುಮಸ್ತಿಯಲ್ಲಿ ತೊಡಗಿರುವುದು ಸ್ಥಳೀಯರನ್ನು ಆತಂಕಕ್ಕೆ ಒಳಪಡಿಸಿದೆ. ಜಿಲ್ಲಾಡಳಿತ ರೆಸಾರ್ಟ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸ್ಥಳೀಯರಿಂದ ಕೇಳಿಬಂದಿದೆ.

ಉಡುಪಿಯ 600 ಬಸ್ಸು ಚಾಲಕರಿಗೆ ಕೋವಿಡ್‌ ಪರೀಕ್ಷೆ

ಐದು ಮಂದಿಗೆ ಕೊರೋನಾ: ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಮಂದಿಯಲ್ಲಿ ಬುಧ​ವಾ​ರ ಸೋಂಕು ಪತ್ತೆಯಾಗಿದೆ. ಈ ಪೈಕಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಯಿ, ಮಗಳು ಹಾಗೂ ಸಿಬ್ಬಂದಿ ಮತ್ತು ಇಬ್ಬರು ವಿದೇಶದಿಂದ ಬಂದವರಾಗಿದ್ದಾರೆ.

ಕುಂಪಲ ಚಿತ್ರಾಂಜಲಿನಗರದ 46ರ ತಾಯಿ ಮತ್ತು 12 ರ ಹರೆಯದ ಬಾಲಕಿ, ತೊಕ್ಕೊಟ್ಟು ಚಚ್‌ರ್‍ ಬಳಿಯ 40ರ ಮಹಿಳೆ, ವಿದೇಶದಿಂದ ಬಂದ ಕೊಣಾಜೆ ತಿಬ್ಲಪದವು 25ರ ಯುವಕ, ತಲಪಾಡಿಯ 27ರ ಹರೆಯದ ಮಹಿಳೆಗೆ ಕೊರೋನಾ ದೃಢವಾಗಿದೆ.

ದಕ್ಷಿಣ ಕನ್ನಡಕ್ಕೆ ಕೊರೋನಾಕ್ಕೆ ಒಂದೇ ದಿನ ಮೂವರು ಬಲಿ!

ಈ ಪೈಕಿ ಇಬ್ಬರು ನಗರದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದು, ಆಸ್ಪತ್ರೆಯಲ್ಲಿರುವ ವೈದ್ಯರಿಗೆ ಕೊರೊನಾ ಪತ್ತೆಯಾಗಿರುವುದರಿಂದ ಅವರ ಸಂಪರ್ಕದಿಂದ ಸಿಬ್ಬಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಈವರೆಗೆ ಉಳ್ಳಾಲ ಭಾಗದಲ್ಲಿ 50ಕ್ಕೂ ಅಧಿಕ ಮಂದಿಯಲ್ಲಿ ಪಾಸಿ​ಟಿವ್‌ ದೃಢ​ಪ​ಟ್ಟಿದೆ.