ಉಡುಪಿ(ಜು.02): ಬೆಂಗಳೂರು - ಕುಂದಾಪುರ ನಡುವೆ ಸಂಚರಿಸುವ 2 ಬಸ್ಸುಗಳ ಚಾಲಕರಿಗೆ ಕೊರೋನಾ ಸೋಂಕು ತಗಲಿರುವುದರಿಂದ, ಜಿಲ್ಲೆಯ ಸುಮಾರು 600 ಮಂದಿ ಚಾಲಕರನ್ನು ಕೋವಿಡ್‌ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದ್ದಾರೆ.

ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಹಾರದ ಪಾರ್ಸೆಲ್‌ಗಳನ್ನು ನೀಡುತಿದ್ದ ಹೊಟೇಲ್‌ ಸಿಬ್ಬಂದಿಯೊಬ್ಬರಿಗೆ ಸೋಂಕು ಪತ್ತೆಯಾಗಿದ್ದು, ಹೊಟೇಲುಗಳಿಂದ ಆಹಾರ ಡೆಲಿವರಿ ಮಾಡುವ, ಜನಸಂದಣಿಯಿರುವ ಮಾಲ್‌, ಶಾಪಿಂಗ್‌ ಕಾಂಪ್ಲೆಕ್ಸ್‌, ಹೊಟೇಲ್, ಬಸ್ಸು ಇತ್ಯಾದಿಗಳ ಸಿಬ್ಬಂದಿಗಳನ್ನೂ ಕಡ್ಡಾಯವಾಗಿ ಸಮೀಪದ ಫೀರ್ವ ಕ್ಲಿನಿಕ್‌ ಗಳಲ್ಲಿ ತಪಾಸಣೆಗೊಳಪಡಿಸಲಾಗುತ್ತದೆ ಎಂದರು.

ದಕ್ಷಿಣ ಕನ್ನಡಕ್ಕೆ ಕೊರೋನಾಕ್ಕೆ ಒಂದೇ ದಿನ ಮೂವರು ಬಲಿ!

ಮೂರು ಮಂದಿ ವಿದ್ಯಾರ್ಥಿನಿಯರಿಗೆ ಸೋಂಕು ಹರಡಿದ್ದರೂ ಅವರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಸೋಂಕು ಹರಡಿದ್ದಲ್ಲ, ಹಾಗಾಗದಂತೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದವರು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಸಮುದಾಯಕ್ಕೆ ಕೊರೋನಾ ಹಬ್ಬಿಲ್ಲ, ಜಿಲ್ಲೆಯಲ್ಲಿ 3 ಮಂದಿ ಸೋಂಕಿತರು ಮೃತಪಟ್ಟಿದ್ದರೂ ಅವರು ಕೊರೋನಾದಿಂದ ಮೃತಪಟ್ಟಿಲ್ಲ. ಆದ್ದರಿಂದ ಯಾವುದೇ ಅನಾರೋಗ್ಯ ಇದ್ದರೂ ನಿರ್ಲಕ್ಷ ಮಾಡದೇ ಸೂಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ಸಮುದಾಯ ಸರ್ವೆ ಆರಂಭಿಸುತಿದ್ದೇವೆ ಎಂದರು. ಜಿಲ್ಲೆಯಲ್ಲಿ ಬೀಚ್‌ ಇತ್ಯಾದಿ ಪ್ರವಾಸಿ ತಾಣಗಳನ್ನು ಮುಚ್ಚಿಲ್ಲ, ಆದರೆ ಹೊರ ಜಿಲ್ಲೆಯ ಪ್ರವಾಸಿಗರು ಸದ್ಯ ಜಿಲ್ಲೆಗೆ ಬರುವುದು ಬೇಡ, ಅಗತ್ಯ ಇದ್ದವರು ಮಾತ್ರ ಪ್ರಯಾಣ ಮಾಡಿ, ಅನಗತ್ಯ ಪ್ರಯಾಣ ಬೇಡ ಎಂದವರು ಸಲಹೆ ಮಾಡಿದ್ದಾರೆ. ಜಿಲ್ಲೆಯಲ್ಲಿ 4 ಮಂದಿ ಸೋಂಕಿತರ ಆರೋಗ್ಯ ಗಂಭೀರವಾಗಿತ್ತು, ಅವರಲ್ಲಿ 3 ಮಂದಿ ಚೇತರಿಸಿಕೊಂಡಿದ್ದು, ಒಬ್ಬರು ಮಾತ್ರ ಗಂಭೀರ ಸ್ಥಿತಿಯಲ್ಲಿಯೇ ಮುಂದುವರಿದಿದ್ದಾರೆ ಎಂದರು.