ದಕ್ಷಿಣ ಕನ್ನಡಕ್ಕೆ ಕೊರೋನಾಕ್ಕೆ ಒಂದೇ ದಿನ ಮೂವರು ಬಲಿ!
ದಕ್ಷಿಣ ಕನ್ನಡ ಜಿಲ್ಲೆಗೆ ಕೊರೋನಾ ಮಹಾಮಾರಿ ಭಾನುವಾರ ಭಾರೀ ಆಘಾತವನ್ನೇ ನೀಡಿದೆ. ಒಂದೇ ದಿನದಲ್ಲಿ ಕೊರೋನಾ ಸೋಂಕಿತ ಮೂವರು ಮೃತಪಟ್ಟಿದ್ದಲ್ಲದೆ, ಬರೋಬ್ಬರಿ 97 ಮಂದಿ ಪಾಸಿಟಿವ್ ಆಗುವುದರೊಂದಿಗೆ ಜನರಲ್ಲಿ ತೀವ್ರ ಆತಂಕ ಮಡುಗಟ್ಟಿದೆ.
ಮಂಗಳೂರು(ಜೂ.02): ದಕ್ಷಿಣ ಕನ್ನಡ ಜಿಲ್ಲೆಗೆ ಕೊರೋನಾ ಮಹಾಮಾರಿ ಭಾನುವಾರ ಭಾರೀ ಆಘಾತವನ್ನೇ ನೀಡಿದೆ. ಒಂದೇ ದಿನದಲ್ಲಿ ಕೊರೋನಾ ಸೋಂಕಿತ ಮೂವರು ಮೃತಪಟ್ಟಿದ್ದಲ್ಲದೆ, ಬರೋಬ್ಬರಿ 97 ಮಂದಿ ಪಾಸಿಟಿವ್ ಆಗುವುದರೊಂದಿಗೆ ಜನರಲ್ಲಿ ತೀವ್ರ ಆತಂಕ ಮಡುಗಟ್ಟಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 13ಕ್ಕೇರಿದ್ದು, ಒಟ್ಟು ಸೋಂಕಿತರ ಸಂಖ್ಯೆ 500 ದಾಟಿದೆ.
ಭಾನುವಾರ ಬೆಳಗ್ಗೆ ಸುರತ್ಕಲ್ ಇಡ್ಯಾದ 31 ವರ್ಷದ ಯುವಕ ಮತ್ತು ಬಂಟ್ವಾಳ ಕಸಬಾದ 57 ವರ್ಷದ ಮಹಿಳೆ ಸಾವನ್ನಪ್ಪಿದರೆ, ಮಧ್ಯಾಹ್ನದ ವೇಳೆಗೆ ಸುರತ್ಕಲ್ ಜೋಕಟ್ಟೆಯ 51 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಒಂದೇ ದಿನ 84 ಪಾಸಿಟಿವ್ ಕೇಸ್
ಸುರತ್ಕಲ್ ಸಮೀಪದ ಇಡ್ಯಾ ನಿವಾಸಿಯಾದ 31 ವರ್ಷದ ಯುವಕನಿಗೆ ಜೂ.26ರಂದು ಆರೋಗ್ಯ ಸಮಸ್ಯೆ ಕಂಡುಬಂದಿತ್ತು. ಥೈರಾಯ್ಡ್ ಸಮಸ್ಯೆ ಜತೆಗೆ ಲೋ ಬಿಪಿ ಆಗಿದ್ದು ಚಿಕಿತ್ಸೆಗಾಗಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಅವರ ಗಂಟಲು ದ್ರವ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದೆ. ಅದರ ಬೆನ್ನಲ್ಲೇ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಬಂಟ್ವಾಳದ 57 ವರ್ಷದ ಮಹಿಳೆ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು, ಅನಾರೋಗ್ಯ ಸಮಸ್ಯೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ಸೋಂಕು ತಗುಲಿದ್ದು ದೃಢಪಟ್ಟಿದ್ದು, ಈ ನಡುವೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಬಂಟ್ವಾಳ ತಾಲೂಕಿನಲ್ಲಿ ಕೊರೋನಾ ಬಲಿ ತೆಗೆದುಕೊಂಡವರ ಸಂಖ್ಯೆ ನಾಲ್ಕಕ್ಕೇರಿದೆ.
ಡಿಕೆ ಶಿವಕುಮಾರ್‌ಗೆ ಇದ್ದಲ್ಲಿಯೇ ಸಿಕ್ತು ವಿಶೇಷ ಆಶೀರ್ವಾದ...!
ಇನ್ನೊಂದು ಪ್ರಕರಣದಲ್ಲಿ ಸುರತ್ಕಲ್ ಜೋಕಟ್ಟೆಯ 51 ವರ್ಷದ ಮಹಿಳೆ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು, ಕಾನದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಜೂ.26ರಂದು ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಆದರೆ ಭಾನುವಾರ ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಮೊದಲ ಕೋವಿಡ್-19 ಪ್ರಕರಣ ಮಾಚ್‌ರ್ 22ರಂದು ಪತ್ತೆಯಾಗಿತ್ತು. ವಿದೇಶದಿಂದ ಬಂದಿದ್ದ ಭಟ್ಕಳದ ಯುವಕನಿಗೆ ಮೊದಲ ಬಾರಿ ಸೋಂಕು ಕಂಡುಬಂದಿತ್ತು. ವಿದೇಶದಿಂದ ಆಗಮಿಸುತ್ತಿದ್ದವರ ಸಂಖ್ಯೆ ಏರಿಕೆಯಾಗಿದ್ದರಿಂದ ಮಾಚ್‌ರ್ 28ರಂದು ಪ್ರಕರಣಗಳ ಸಂಖ್ಯೆ ಶತಕ ದಾಟಿತ್ತು. ನಗರದ ಫಸ್ಟ್ ನ್ಯೂರೊ ಆಸ್ಪತ್ರೆಗೆ ಅತ್ತೆಯನ್ನು ನೋಡಿಕೊಳ್ಳಲು ತೆರಳುತ್ತಿದ್ದ ಬಂಟ್ವಾಳದ ಮಹಿಳೆ ಏಪ್ರಿಲ್ 19ರಂದು ಸಾವಿಗೀಡಾಗುವುದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಮೊದಲ ಬಲಿ ಪಡೆದುಕೊಂಡಿತ್ತು. ಇದೀಗ ಭಾನುವಾರ ಕೋವಿಡ್-19 ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ. ಸಾವಿನ ಒಟ್ಟು ಸಂಖ್ಯೆ 13ಕ್ಕೆ ಏರಿದೆ.
ಅಂತ್ಯಸಂಸ್ಕಾರಕ್ಕೆ ಸ್ಥಳೀಯರ ಅಡ್ಡಿ!
ಕೊರೋನಾದಿಂದ ಸಾವಿಗೀಡಾದವರ ಅಂತ್ಯಸಂಸ್ಕಾರಕ್ಕೆ ಮಂಗಳೂರಿನಲ್ಲಿ ಮತ್ತೆ ಅಡ್ಡಿ ಎದುರಾಗಿದೆ. ಸುರತ್ಕಲ್ ಯುವಕನ ಅಂತ್ಯಸಂಸ್ಕಾರಕ್ಕೆ ಬೋಳಾರ ನಿವಾಸಿಗಳು ಬಿಡದೆ 10 ಗಂಟೆಗೂ ಅಧಿಕ ಕಾಲ ಆಂಬ್ಯುಲೆನ್ಸ್‌ನಲ್ಲೇ ಮೃತದೇಹ ಕಾಯುವಂತಾಗಿತ್ತು.
ಸುರತ್ಕಲ್‌ನ 31 ವರ್ಷದ ಯುವಕ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಮೃತದೇಹವನ್ನು ಇಡ್ಯಾ ಮಸೀದಿ ಖಬರಸ್ಥಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಅಲ್ಲಿ ಖಬರ ಗುಂಡಿಯಲ್ಲಿ ನೀರು ನಿಂತಿದ್ದರಿಂದ ಬೋಳಾರ ಮಸೀದಿಯ ಖಬರ ಸ್ಥಾನದಲ್ಲಿ ಅಂತ್ಯಸಂಸ್ಕಾರ ನಡೆಸಲು ಅಧಿಕಾರಿಗಳು ಮುಂದಾಗಿದ್ದರು.
ಪರಪ್ಪನ ಜೈಲಿನಲ್ಲಿ 22 ಕೈದಿಗಳಿಗೆ ಕೊರೋನಾ!
ಆ್ಯಂಬುಲೆನ್ಸ್‌ನಲ್ಲಿ ಮೃತದೇಹ ಇಟ್ಟು ಬೋಳಾರ ಮಸೀದಿಗೆ ಬರುತ್ತಿದ್ದಂತೆ ಸ್ಥಳೀಯ ಅನ್ಯ ಧರ್ಮೀಯರು ಅಡ್ಡಗಟ್ಟಿತೀವ್ರ ಪ್ರತಿರೋಧ ವ್ಯಕ್ತಪಡಿಸಿದರಲ್ಲದೆ, ತಮ್ಮೂರಲ್ಲಿ ಮಾಡಲೇಕೂಡದು ಎಂದು ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಮನವೊಲಿಕೆ ಮಾಡಿದರೂ ಸ್ಥಳೀಯರು ಆಂಬುಲೆನ್ಸ್ ಮುಂದಕ್ಕೆ ಹೋಗಲು ಬಿಡಲಿಲ್ಲ.
ಈ ನಡುವೆ ಇತರ ಕಡೆ ಅಂತ್ಯಸಂಸ್ಕಾರ ನಡೆಸಲು ಅಧಿಕಾರಿಗಳು ಅಲೆದಾಟ ನಡೆಸಬೇಕಾಯಿತು. ಕೊನೆಗೂ ಸ್ಥಳೀಯರ ಮನವೊಲಿಸಿ ಸಂಜೆ ವೇಳೆಗೆ ಅದೇ ಬೋಳಾರದ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.