Asianet Suvarna News Asianet Suvarna News

Mysuru : ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕಠಿಣ ನಿರ್ಧಾರ

ಶಿಥಿಲಾವಸ್ಥೆ ತಲುಪಿರುವ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕಠಿಣ ನಿರ್ಧಾರ ಕೈಗೊಳ್ಳುವುದಾಗಿ ಮೇಯರ್‌ ಶಿವಕುಮಾರ್‌ ತಿಳಿಸಿದರು.

  tough decision to preserve heritage buildings snr
Author
First Published Nov 5, 2022, 4:41 AM IST | Last Updated Nov 5, 2022, 4:41 AM IST

 ಮೈಸೂರು (ನ.05):  ಶಿಥಿಲಾವಸ್ಥೆ ತಲುಪಿರುವ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕಠಿಣ ನಿರ್ಧಾರ ಕೈಗೊಳ್ಳುವುದಾಗಿ ಮೇಯರ್‌ ಶಿವಕುಮಾರ್‌ ತಿಳಿಸಿದರು.

ನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್‌ (Krishnaraja Wadiyar )  ಸಭಾಂಗಣದಲ್ಲಿ ಪಾರಂಪರಿಕ ಕಟ್ಟಡಗಳ (Building ) ಸಂರಕ್ಷಣೆ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ಒಂದೊಂದೆ ಪಾರಂಪರಿಕ ಕಟ್ಟಡ ದುಸ್ಥಿತಿಗೆ ತಲುಪಿದ್ದು, ಕುಸಿಯುತ್ತಿವೆ. ಹೀಗೆ ಆದರೆ ಮೈಸೂರು ಪಾರಂಪರಿಕ ನಗರ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ನಗರ ಪಾಲಿಕೆ ಕಚೇರಿ ಕಟ್ಟಡವೂ ಸೇರಿದಂತೆ ಪ್ರಮುಖ ಕಟ್ಟಡಗಳ ದುರಸ್ತಿಗೆ ಕ್ರಮವಹಿಸುವುದಾಗಿ ಹೇಳಿದರು.

ಪ್ರಮುಖವಾಗಿ ನಗರ ಪಾಲಿಕೆ ಕಚೇರಿ, ದೊಡ್ಡ ಗಡಿಯಾರ, ವಾಣಿ ವಿಲಾಸ ಮಾರುಕಟ್ಟೆದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮಹಾರಾಣಿ ಕಾಲೇಜು, ಅಗ್ನಿಶಾಮಕ ದಳ ಕಚೇರಿ ಕಟ್ಟಡ, ಲ್ಯಾನ್ಸ್‌ಡೌನ್‌ ಕಟ್ಟಡ, ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆಗಳು ಕುಸಿದಿದೆ. ಈ ಸಾಲಿನಲ್ಲಿ ನಗರ ಪಾಲಿಕೆ ಕಚೇರಿ ಕಟ್ಟಡವೂ ಇದೆ ಎಂಬುದು ಆತಂಕದ ಸಂಗತಿ. ಈ ಹಿನ್ನೆಲೆಯಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಪಾರಂಪರಿಕ ಕಟ್ಟಡಗಳನ್ನು ದುರಸ್ತಿಪಡಿಸಲು ವಿಶೇಷ ಅನುದಾನದ ಅಗತ್ಯವಿದ್ದು, ಈ ಸಂಬಂಧ ಮುಖ್ಯಮಂತ್ರಿಗಳೊಡನೆ ಚರ್ಚಿಸಲು ಸಂಸದರು, ಶಾಸಕರನ್ನು ಒಳಗೊಂಡ ನಿಯೋಗದಲ್ಲಿ ತೆರಳಲಾಗುವುದು. ಬಜೆಟ್‌ನಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ವಿಶೇಷ ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು ಎಂದರು.

ಸರ್ಕಾರದಿಂದ ಅನುದಾನ ದೊರೆಯುವುದು ವಿಳಂಬವಾದರೂ ನಗರಪಾಲಿಕೆ ಅನುದಾನ ಬಳಸಿಕೊಂಡು ಮೊದಲಿಗೆ ದೊಡ್ಡ ಗಡಿಯಾರ, ಪುರಭವನ ಮತ್ತು ನಗರ ಪಾಲಿಕೆ ಕಚೇರಿ ದುರಸ್ತಿಪಡಿಸಲಾಗುವುದು. ಇದಕ್ಕೆ ನಗರ ಪಾಲಿಕೆಯ ಎಲ್ಲಾ ಸದಸ್ಯರ ಸಹಕಾರ ಪಡೆಯುತ್ತೇನೆ. ದೊಡ್ಡಗಡಿಯಾರ ಅಭಿವೃದ್ಧಿಗೆ 34 ಲಕ್ಷ ಅನುದಾನ ನೀಡಲಾಗಿತ್ತು. ಪಾರಂಪರಿಕ ಇಲಾಖೆಯವರು ಹೆಚ್ಚುವರಿ ಅನುದಾನ ಕೇಳಿದ್ದಾರೆ. ಅದನ್ನೂ ಬಿಡುಗಡೆಗೊಳಿಸಿ ಕೆಲಸ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿ ಸದಸ್ಯ ಪ್ರೊ.ಎನ್‌.ಎಸ್‌. ರಂಗರಾಜು ಮಾತನಾಡಿ, ನಗರ ಪಾಲಿಕೆಯಲ್ಲಿದ್ದ ಹೆರಿಟೇಜ್‌ ಕಟ್ಟಡಗಳ ನಿರ್ವಹಣ ಕೇಂದ್ರವನ್ನು ಪುನರ್‌ ಆರಂಭಿಸಬೇಕು. ಪಾರಂಪರಿಕ ಕಟ್ಟಡಗಳಲ್ಲಿ ಗೆಜ್ಜಲು, ಹೆಗ್ಗಣಗಳ ನಿಯಂತ್ರಣಕ್ಕೆ ಕೆಮಿಕಲ್‌ ಹಾಕಬೇಕು. ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ಗಾರೆ ಅರೆದು ಕೆಲಸ ಮಾಡುವ ತಂಡ ಇರಬೇಕು. ಪಾರಂಪರಿಕ ಕಟ್ಟಡಗಳಿಗೆ ರಂಧ್ರ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ತಿಳಿಸಿದರು.

2004ರಲ್ಲಿ ಸರ್ಕಾರ ಮೈಸೂರು ಅನ್ನು ಪಾರಂಪರಿಕ ಪ್ರದೇಶ ಎಂದು ಘೋಷಿಸಿತು. ಆದರೆ ಕಾರ್ಯಕ್ರಮ ರೂಪಿಸಲಿಲ್ಲ. ಖಾಸಗಿ ಒಡೆತನದ ಜಗನ್ಮೋಹನ ಅರಮನೆಯನ್ನು ದುರಸ್ತಿಪಡಿಸಿದೆ. ಆಯುರ್ವೇದ ವೈದ್ಯಕೀಯ ಕಾಲೇಜು ಕಟ್ಟಡ ಸಂರಕ್ಷಿಸಲಾಗಿದೆ. ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನನ್ನು ಈ ಹಿಂದ ಇದ್ದ ಮಾದರಿಯಲ್ಲಿಯೇ ದುರಸ್ತಿಪಡಿಸಲು ಒಪ್ಪಿದ್ದಾರೆ. ಉಳಿದ ಕಟ್ಟಡಕ್ಕೂ ಅದೇ ಮಾದರಿ ಏಕೆ ಅನುಸರಿಸಬಾರು ಎಂದು ಅವರು ಪ್ರಶ್ನಿಸಿದರು.

ನಗರ ಪಾಲಿಕೆ ಎಂಜಿನಿಯರುಗಳಿಗೆ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಬಗ್ಗೆ ಅರಿವು ಮೂಡಿಸಬೇಕು. ಕಟ್ಟಡಗಳ ಸಂಪೂರ್ಣ ಮಾಹಿತಿಯುಳ್ಳ ಕೈಪಿಡಿ ಮಾಡಿ ಹಂಚಬೇಕು ಎಂದರು.

ಮೈಸೂರು ಐವರಿ ಸಿಟಿ. ಕಟ್ಟಡಗಳಿಗೆ ಗೋಧಿ ಬಣ್ಣ-ಸುಣ್ಣ ಹೊಡೆಯಬೇಕು. ನಿಯಮದಲ್ಲಿ ಯಾವ ಅಳತೆಯ ಬಣ್ಣ ಹಾಕಬೇಕು ಮಾಹಿತಿ ಇದೆ. ನಗರದಲ್ಲಿ ಅಳವಡಿಸಿರುವ ಡಿಜಿಟಲ್‌ ಡಿಸ್‌ಪ್ಲೇ ಬೋರ್ಡ್‌ಗಳನ್ನು ಮೊದಲು ತೆಗೆಯಬೇಕು. ಮೈಸೂರು ಪ್ರವಾಸೋದ್ಯಮ ಉಳಿದಿರುವುದೇ ಪಾರಂಪರಿಕ ಕಟ್ಟಡಗಳಿಂದ ಇವುಗಳ ಸಂರಕ್ಷಣೆಗೆ ಒತ್ತು ಕೊಡಬೇಕು ಎಂದರು.

ಸಭೆಯಲ್ಲಿ ಉಪ ಮೇಯರ್‌ ಡಾ.ಜಿ. ರೂಪಾ, ಉಪ ಆಯುಕ್ತೆ ರೂಪಾ, ಪಾರಂಪರಿಕ ಮತ್ತು ಪುರಾತತ್ವ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ, ನಮ್ಮ ಮೈಸೂರು ¶ೌಂಡೇಷನ್‌ ಮುಖ್ಯಸ್ಥ ದಶರಥ ಮೊದಲಾದವರು ಇದ್ದರು.

ಮೈಸೂರಿನಲ್ಲಿ 126 ಪಾರಂಪರಿಕ ಕಟ್ಟಡಗಳಿವೆ. ಮೈಸೂರು ವಿವಿ ವ್ಯಾಪ್ತಿಯಲ್ಲಿ 25 ಕಟ್ಟಡಗಳಿದ್ದು, 10 ಕಟ್ಟಡಗಳಿಗೆ 100 ವರ್ಷವಾಗಿದೆ. ನಗರ ಪಾಲಿಕೆ ಕಟ್ಟಡವನ್ನು ಕಟ್ಟಿದವರು ಹೆನ್ರಿ ಇರ್ವಿನ್‌. ಇಲ್ಲಿ ಅವೈಜ್ಞಾನಿಕವಾಗಿ ಸೋಲಾರ್‌ ಅಳವಡಿಸಲಾಗಿದೆ. ಈ ಕಟ್ಟಡವನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿಲ್ಲವೇ? .

- ಪ್ರೊ.ಎನ್‌.ಎಸ್‌. ರಂಗರಾಜು, ಪಾರಂಪರಿಕ ತಜ್ಞರು

Latest Videos
Follow Us:
Download App:
  • android
  • ios